ಭಾನುವಾರ, ಮಾರ್ಚ್ 29, 2020

ಭಜಗೋವಿಂದಂ ಸ್ತೋತ್ರ ಮಹಿಮೆ-ಹನುಮಂತ.ಮ.ದೇಶಕುಲಕರ್ಣಿ.

ಭಜಗೋವಿಂದಂ ಸ್ತೋತ್ರ ಮಹಿಮೆ

ಭಜಗೋವಿಂದಂ ಸ್ತೋತ್ರವು,  ಜಗದ್ಗುರು ಆದಿ ಶಂಕರಾಚಾರ್ಯರ ಸಣ್ಣ ಕೃತಿಗಳಲ್ಲಿ ಒಂದು. ಇದನ್ನು ಭಜನೆಯ ರೂಪದಲ್ಲಿ ಪಠಿಸಿದರೂ ಕೂಡಾ ಇದು ವೇದಾಂತದ ಪ್ರಮುಖ ಸಾರವನ್ನೊಳಗೊಂಡಿದೆ.ಸ್ತೋತ್ರವು ಯಾವುದೇ ಪೀಠಿಕೆ ಇಲ್ಲದೇ ಪ್ರಾರಂಭವಾಗುತ್ತದೆ. ಇದೇ ಈ ಸ್ತೋತ್ರದ ವೈಶಿಷ್ಟ್ಯತೆ

ಜ್ಞಾನದ ಪರಾಕಾಷ್ಟೆಯು ಭಕ್ತಿ ಮತ್ತು ಭಕ್ತಿಯ ಅತ್ಯುನ್ನತ ಸ್ಥಾನವು ಜ್ಞಾನ. ಆಚಾರ್ಯರು ಗೃಹಸ್ಥ ಹಾಗೂ ಸಂನ್ಯಾಸಿಗಳಿಬ್ಬರಿಗೂ ಜೀವನದ ಅತ್ಯುನ್ನತ ಗುರಿಯಾದ ಭಗವಂತನ ಬಗ್ಗೆ ಅರಿವಿಕೆಯನ್ನು ಹೇಗೆ ತಲುಪಬಹುದೆಂಬುದರ ಬಗೆಗೆ  ಭಕ್ತಿ-ಜ್ಞಾನ - ಕರ್ಮ - ರಾಜಯೋಗಗಳ ಚತುಷ್ಪಥದ ಮಾರ್ಗವನ್ನು ಆಚಾರ್ಯರು ವಿವರಿಸಿದ್ದಾರೆ.

 ದುರಾಸೆ ಹಾಗೂ ವಿಷಯಾಸಕ್ತಿಗಳನ್ನು ನಿವಾರಿಸಿಕೊಳ್ಳಬಹುದು, ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು ಎಂಬುದನ್ನು ವಿವರಿಸಿರುವುದರಿಂದ ಈ ಸ್ತೋತ್ರವನ್ನು " ಮೋಹ - ಮುದ್ಗರಮ್" (ಮಾಯೆಯನ್ನು ನಾಶಮಾಡುವುದು ) ಎಂದೂ ಕರೆಯಲ್ಪಡುತ್ತದೆ.

 ಒಮ್ಮೆ ಶಂಕರಾಚಾರ್ಯರು ತಮ್ಮ ಶಿಷ್ಯರೊಂದಿಗೆ ಕಾಶಿಪಟ್ಟಣದ ಇಕ್ಕಟ್ಟಾದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ವೃದ್ಧನು ಸಂಸ್ಕೃತದ ಪಾಣಿನೀ ವ್ಯಾಕರಣ ಸೂತ್ರಗಳನ್ನು ಕಂಠಪಾಠ ಮಾಡುತ್ತಿದ್ದುದನ್ನು ನೋಡಿದರು.  ಆಚಾರ್ಯರು ವೃದ್ಧನನ್ನು ನೋಡಿ ಈ ವೃದ್ಧನು ತನ್ನ ವಾರ್ಧಕ್ಯದ ದಿನಗಳನ್ನು ಭಗವಂತನ
ನಾಮಸ್ಮರಣೆಯಲ್ಲಿ ಕಳೆಯುವುದನ್ನು ಬಿಟ್ಟು ಭಾಷೆಯ ವ್ಯಾಕರಣವನ್ನು ಕಲಿಯಲು ಪ್ರಯತ್ನಿಸುತ್ತಿರುವನಲ್ಲಾ ... ಇದರಿಂದ ದೈವಿಕ ಚಿಂತನೆಯಿಂದ ವಂಚಿತರಾಗಿರುವುದನ್ನು ಅರಿತು ಒಂದು ರೀತಿಯ ಮೂರ್ಖತನದ ಜೀವಿತವನ್ನು ಖಂಡಿಸಿ ಛೀಮಾರಿ ಹಾಕುವ ರೀತಿಯಲ್ಲಿ ರಚಿಸಿದ ಸ್ತೋತ್ರವೇ ಭಜಗೋವಿಂದಂ ಸ್ತೋತ್ರ. ವ್ಯಾಕರಣದ ಬದಲು ಭಗವಂತನ ನಾಮಸ್ಮರಣೆ ಮಾಡಲು ಉತ್ಸಾಹಿಸುತ್ತಾರೆ.

ಭಜಗೋವಿಂದಂ ಸ್ತೋತ್ರದಲ್ಲಿ ಮೊದಲನೇ ಶ್ಲೋಕವನ್ನು ಪಲ್ಲವಿ ಎಂದು ಪರಿಗಣಿಸಲಾಗಿದೆ. ಪ್ರತಿಯೊಂದು ಶ್ಲೋಕದ ಪಠಣೆಯ ನಂತರ ಇದನ್ನು ಹೇಳಿಕೊಳ್ಳಲಾಗುತ್ತದೆ. ಪಲ್ಲವಿ ಹಾಗೂ ನಂತರದ 12 ಶ್ಲೋಕಗಳನ್ನು ಶಂಕರಾಚಾರ್ಯರೇ ರಚಿಸಿರುವರು. ಹೀಗಾಗಿ ಈ ಭಾಗವನ್ನು "ದ್ವಾದಶ ಮಂಜರಿಕಾ ಸ್ತೋತ್ರ" _ಅರ್ಥಾತ್  12 ಸುಂದರ ಪುಷ್ಪಗಳ ಪುಷ್ಪಗುಚ್ಛ ವೆಂದು ಕರೆಯಲ್ಪಟ್ಟಿದೆ. ಅವರೊಡನಿದ್ದ 14 ಜನ ಶಿಷ್ಯರಾದ   ಪದ್ಮಪಾದಚಾರ್ಯ ತೋಟಕಾಚಾರ್ಯ, ಹಸ್ತಾಮಲಕಚಾರ್ಯ,ಸುರೇಶ್ವರಾಚಾರ್ಯ (ಮಂಡನ ಮಿಶ್ರ),  ಸುಬೋಧಾಚಾರ್ಯ, ನಿತ್ಯಾನಂದ, ನಿತ್ಯನಾಥ, ಆನಂದಗಿರಿ, ಯೋಗಾನಂದ, ಭಾರತಿವಂಶ, ವಾರ್ತಿಕಕಾರ, ಸುರೇಂದ್ರ, ಸುಮಾತಿರ್, ಮೇಧಾತೀರ್ಥ ಮತ್ತು ಭಾರತೀದಾಸ ಇವರುಗಳು ದ್ವಾದಶ ಮಂಜರಿಕಾ ಸ್ತೋತ್ರದಿಂದ ಸ್ಫೂರ್ತಿಗೊಂಡು ಪ್ರತಿಯೊಬ್ಬರೂ ಒಂದೊಂದು ಶ್ಲೋಕಗಳನ್ನು ರಚಿಸಿದರು. ಈ ಹದಿನಾಲ್ಕು ಸ್ತೋತ್ರಗಳನ್ನು "ಚತುರ್ದಶಾ ಮಂಜರಿಕಾ ಸ್ತೋತ್ರಮ್" ( 14 ಪುಷ್ಪಗಳ ಪುಷ್ಪಗುಚ್ಛ ) ಎಂದು ಗುರುತಿಸಲಾಗಿದೆ. ಇದರಿಂದ ಸುಪ್ರಸನ್ನರಾದ ಆಚಾರ್ಯರು ಮತ್ತೂ ನಾಲ್ಕು ಶ್ಲೋಕಗಳನ್ನು ರಚಿಸಿ ಶಿಷ್ಯರನ್ನು ಆಶೀರ್ವದಿಸಿದರು. ಹೀಗಾಗಿ ಭಜಗೋವಿಂದಂ ಸ್ತೋತ್ರವು 31 ಶ್ಲೋಕಗಳಾಗಿ ಸುಪ್ರಸಿದ್ದವಾಯಿತು.

-ಹನುಮಂತ.ಮ.ದೇಶಕುಲಕರ್ಣಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ