ಮಂಗಳವಾರ, ಆಗಸ್ಟ್ 7, 2018

ಗಿರಿಜಾ ದೇಶಪಾಂಡೆ -ಶ್ರಾವಣ ಬಂತು ನಾಡಿಗೆ

ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ
ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಎಂದು ಹಾಡನ್ನು ನೆನೆಸಿದಾಗ ಈಗ ನಡೆಯುತ್ತಿರುವ ವಿಳಂಬಿನಾಮ ಸಂವತ್ಸರ, ದಕ್ಷಿಣಾಯನ, ವರ್ಷ‍ಋತು, ಶ್ರಾವಣಮಾಸ ಬಂತೆಂದರೆ ನಮ್ಮಲ್ಲಿ ಸಡಗರ ಮತ್ತು ಸಂಭ್ರಮ. ಮಾಸಗಳ ರಾಜ ಎಂದರೆ ಶ್ರಾವಣಮಾಸ. ಶ್ರಾವಣಮಾಸದಲ್ಲಿ ನಡೆಯುವ ಧರ್ಮಾಚರಣೆಯ ವಿಧಿವಿಧಾನಗಳಾದ ಜಪ, ತಪ, ವ್ರತ, ನಿಯಮ, ಪೂಜಾನುಷ್ಠಾನ, ಪರಾಯಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಂಗ, ಪುಣ್ಯಕ್ಷೇತ್ರಗಳ ದರ್ಶನ, ಯಜ್ಞ, ಯಾಗ, ಹೋಮ, ಹವನ ಮುಂತಾದವು ಈ ಶ್ರಾವಣಮಾಸದಲ್ಲೇ ಶ್ರೇಷ್ಠವೆಂದು ಹೇಳಲಾಗುತ್ತದೆ.
ಮಹತ್ವ – ಶ್ರಾವಣದಲ್ಲಿ ಒಂದೇ ರೇಖೆಯಲ್ಲಿ ಬರುವ 17 ನಕ್ಷತ್ರಗಳು ಮಂಗಳಕರವಾದ ಮಳೆಗರೆದು, ಧರೆಯ ಜನರಿಗೆ ಉನ್ನತಫಲಗಳನ್ನು ನೀಡುತ್ತಿದೆ. ಸಿರಿಸಂಪತ್ತು ವೃದ್ಧಿಗಾಗಿ ವರಮಹಾಲಕ್ಷ್ಮಿವ್ರತ, ಸಂಪತ್ತು ಶುಕ್ರವಾರ, ಸಕಲ ಸಂಕಷ್ಟಗಳಿಂದ ಮುಕ್ತಗೊಳಿಸಿ ಸಮೃದ್ಧಿ ನೀಡುವ ಶ್ರೀಸತ್ಯನಾರಾಯಣ ಪೂಜಾವ್ರತ, ಮಂಗಳಗೌರಿವ್ರತ, ನಾಡಹಬ್ಬ, ನಾಗಪಂಚಮಿ ನಾಗದೇವತೆಗೆ ಹಾಲೆರೆಯುವುದು, ಸಹೋದರಿಯರ ರಕ್ಷಾಬಂಧನ, ಶ್ರಾವಣದಲ್ಲಿ ಸೋಮವಾರಕ್ಕೆ ಶಿವನ ಪೂಜೆಗೆ ಅಗ್ರಸ್ಥಾನವಿದೆ. ಈ ಮಾಸದಲ್ಲಿ ಬರುವ ಎಲ್ಲ ಶೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ. ಶ್ರವಣ ಎಂದರೆ ಆಲಿಸುವುದು, ಕೇಳುವುದು. ಸರ್ವಶ್ರೋತೃಗಳ ಶ್ರವಣೇಂದ್ರಿಯಗಳಿಗೆ ಯೋಗ್ಯವಾದ ಪಾರಮಾರ್ಥ ತತ್ವಧಾರೆಯನ್ನು ಶ್ರವಣ ಮಾಡಿಸುವ ಮಾಸವೇ ಶ್ರಾವಣ. ತತ್ವಪದ ಲಕ್ಷಣಗಳನ್ನು ಶೋಧಿಸಿದಾಗ ಅಶುದ್ಧಬುದ್ಧಿಯು ಶುದ್ಧವಾದ ನಂತರ ಗುರುಮುಖದಿಂದ ಉಪನಿಷದ್ ವಾಕ್ಯಗಳನ್ನು ಶ್ರವಣ ಮಾಡುವುದರಿಂದ ಅಪರೂಪ ಜ್ಞಾನವಾಗುವುದು. ಆಗ ಪರಮಾತ್ಮನೆಂಬ ಭಾವವು ಸುಸ್ಥಿರವಾಗುವುದು. ಈ ಮಾಸದಲ್ಲಿ ಬರುವ ಹಬ್ಬ ವ್ರತಗಳನ್ನು ಆಚರಿಸುವುದರಿಂದ ಜಾತಕದಲ್ಲಿರುವ ಗೃಹದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
     ಈ ಮಾಸದ ಆಗಮನಕ್ಕೆ ಮನೆಯಲ್ಲಿರುವ ಸ್ತ್ರೀಯರು ಶ್ರಾವಣಮಾಸ ಹಬ್ಬದ ಮಾಸ ಬಂತೆಂದು ಮನೆ ಬಾಗಿಲುಗಳನ್ನೆಲ್ಲ ಸ್ವಚ್ಛಗೊಳಿಸಿ ತಿಂಗಳಿಗಾಗುವಷ್ಟು ಅಡುಗೆಗೆ ಬೇಕಾದ ಪುಡಿಗಳನ್ನು ಮಾಡಿ ಇಟ್ಟುಕೊಳ್ಳುತ್ತಾರೆ. ಆಗ ಮೆಣಸಿನಕಾಯಿ ಹುರಿಯುವುದಿಲ್ಲ ಏಕೆಂದರೆ ಖಾರದ ಘಾಟಿಗೆ ಲಕ್ಷ್ಮಿಗೆ ತೊಂದರೆಯಾಗುವುದೆಂಬ ವಾಡಿಕೆ ಇದೆ. ಪೊರಕೆ, ಬುಟ್ಟಿಗಳ ಮರಗಳ ಖರೀದಿ ಕೂಡಾ ಶ್ರಾವಣದ ಮೊದಲು ಮಾಡುತ್ತಾರೆ. ಮನೆಯಲ್ಲಿ ಗೌರಿ ಕೂರಿಸುವವರು. ಒಡವೆಗಳನ್ನು ಕೈಗೆ ಬಳೆಗಳನ್ನು ಶ್ರಾವಣ ಮುಗಿಯುವವರೆಗೆ ತೆಗೆಯುವುದಿಲ್ಲ. ಈ ಮಾಸದಲ್ಲಿ ಮೊದಲು ಬರುವ ಹಬ್ಬ ನಾಗರಪಂಚಮಿ.
ನಾಗರಪಂಚಮಿ – ನಾಗರಪಂಚಮಿ ನಾಡಿಗೆ ದೊಡ್ಡದು ಎಂಬ ಹಾಡು ನಮ್ಮ ನೆನೆಪಿಗೆ ಬರುತ್ತದೆ. ಪಂಚಮಿ ಹಬ್ಬ ಅಣ್ಣ ಬರಲಿಲ್ಲ ಯಾಕೆ ಕರಿಯಾಕೆ – ಅನ್ನುವ ಸುಶ್ರಾವ್ಯ ಅಣ್ಣ ತಂಗಿಯರ ಹಬ್ಬವಾದ ಇದು ಸಂಭ್ರಮ ತರುವ ಹಬ್ಬ. ಜಾತಕದಲ್ಲಿ ನಾಗದೋಷ, ರಾಹುದೋಷ, ಆಶ್ಲೇಷ ನಕ್ಷತ್ರ ದೋಷ, ಕೇತು ದೋಷವಿದ್ದರೆ, ಸಂತಾನ ಭಾಗ್ಯಕ್ಕೆ ನಾಗದೋಷ, ಮಾಂಗಲ್ಯಭಾಗ್ಯ ದೋಷವಿದ್ದರೆ ನಾಗರಪಂಚಮಿಯ ದಿನ ನಾಗರಕಲ್ಲಿಗೆ ಅಥವಾ ಹುತ್ತಕ್ಕೆ ಹಾಲೆರೆಯಬೇಕು. ಚೌತಿಯ ದಿನ ಉಪವಾಸ ಮಾಡಿ ಮಾಡಿ ಅಣ್ಣತಮ್ಮಂದಿರಿಗೆ ಒಳ್ಳೆಯದಾಗಲೆಂದು, ಆಯಸ್ಸುವೃದ್ಧಿಯಾಗಲೆಂದು ಅಕ್ಕತಂಗಿಯರು ಚೌತಿಯ ತನಿ ಎರೆದು ಪಂಚಮಿಯೆಂದು ಹಬ್ಬ ಮಾಡಿ ಸಂಭ್ರಮಪಡುತ್ತಾರೆ. ಉತ್ತರ ಕರ್ನಾಟಕದ ಕಡೆಗೆ ತವರಿಗೆ ಹೆಣ್ಣುಮಕ್ಕಳನ್ನು ಕರೆದು ತರುತ್ತಾರೆ. ತಂಬಿಟ್ಟು ತುಂಬಾ ಶ್ರೇಷ್ಠ. ತಂಬಿಟ್ಟು, ಎಳ್ಳುಂಡೆ, ಹುರಿಕಡ್ಲೆ, ಶೇಂಗಾ ಉಂಡೆಗಳನ್ನು ತಯಾರಿಸುತ್ತಾರೆ. ನಾಗಪ್ಪನಿಗೆ ತಂಬಿಟ್ಟು ಇಷ್ಟವೆಂದು ಚಿಗಳಿ ಇಷ್ಟವೆಂದು ನಾಗದೇವರಿಗೆ ಸಮರ್ಪಿಸುತ್ತಾರೆ.
ಸಿರಿಯಾಳಷಷ್ಠಿ – ಈ ಹಬ್ಬವನ್ನು ಗಂಡುಮಕ್ಕಳಿರುವ ತಾಯಂದಿರು ಆಚರಿಸುತ್ತಾರೆ. ಜಾತಕದಲ್ಲಿ ಗಂಡುಮಕ್ಕಳ ಸಂತತಿಗೆ ದೋಷವಿದ್ದರೆ, ಗಂಡುಮಕ್ಕಳು ಹುಟ್ಟಿ ಮರಣಹೊಂದುತ್ತಿದ್ದರೆ ಅಂಥವರು ಶಿರಿಯಾಳ ಷಷ್ಠಿಯ ದಿನ ಹಸಿ ತರಕಾರಿ ದಾನ ನೀಡಿ ಗಂಡು ಮಕ್ಕಳನ್ನು ಪಡೆಯುತ್ತಾರೆ. ಇದನ್ನು ಮಕ್ಕಳಹಬ್ಬವೆಂದು ಕೂಡ ಕರೆಯುತ್ತಾರೆ.
ವರಮಹಾಲಕ್ಷ್ಮಿ ಹಬ್ಬ – ಈ ಹಬ್ಬದಂದು ಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸುತ್ತಾರೆ. ಶ್ರಾವಣದ ಎರಡನೆಯ ಶುಕ್ರವಾರದಂದು ಪೂಜಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಮೊದಲನೇ ಶುಕ್ರವಾರದಂದೇ ಗೌರಿಯನ್ನು ಕೂಡಿಸಿ ಸಂಭ್ರಮದಿಂದ ಪೂಜೆ, ಆರತಿ ಮಾಡಿ ಹಬ್ಬದ ಅಡುಗೆ ಮಾಡಿ, ಗೌರಿಯ ಹಾಡುಗಳಿಂದ ಹಬ್ಬ ಆಚರಿಸಿದರೆ, ಬೆಂಗಳೂರು ಮೈಸೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಎಲ್ಲ ಜನರೂ ಆಚರಿಸುವರು. ಲಕ್ಷ್ಮಿಯಲ್ಲಿ ಎರಡು ವಿಧ ಸ್ಥಿರಲಕ್ಷ್ಮಿ, ಚರಲಕ್ಷ್ಮಿ. ಎಲ್ಲರೂ ಸಾಮಾನ್ಯವಾಗಿ ಬಯಸುವರು ಸ್ಥಿರಲಕ್ಷ್ಮಿಯನ್ನು. ಲಕ್ಷ್ಮಿಗೆ ಶುಕ್ರಗ್ರಹ ಅಧಿಪತಿಯಾಗಿರುವನು. ವರಮಹಾಲಕ್ಷ್ಮಿ ಪೂಜೆ ಭಕ್ತಿಯಿಂದ ಮಾಡಿ ಲಕ್ಷ್ಮಿಯ ಕೃಪಾಕಟಾಕ್ಷ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸೋಣ.
ರಕ್ಷಾಬಂಧನ – ಸಹೋದರಿ – ಸಹೋದರರ ಹಬ್ಬ. ಸಹೋದರಿಯು ಸಹೋದರನ ರಕ್ಷೆಕೋರಿ ರಕ್ಷಾಬಂಧನವನ್ನು ಕಟ್ಟಿ ಈ ಹಬ್ಬ ಆಚರಿಸುತ್ತಾರೆ. ಶ್ರೀಕೃಷ್ಣನಿಗೆ ಕೈಗೆ ಗಾಯವಾಗಿ ರಕ್ತ ಬಂದಾಗ ದ್ರೌಪದಿಯು ತನ್ನ ಸೀರೆಯ ಒಂದು ತುಣುಕನ್ನು ಹರಿದು ಗಾಯಕ್ಕೆ ಕಟ್ಟುತ್ತಾಳೆ. ಅದೂ ಒಂದು ಪ್ರತೀತಿ ಇದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಮಹತ್ವ ಪಡೆದಿದೆ. ಪ್ರತಿಯೊಬ್ಬ ಸಹೋದರಿಯೂ ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಭ್ರಾತೃತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನದ ಹಬ್ಬದ ನೀತಿಯಾಗಿದೆ. ಇಂದ್ರನ ಪತ್ನಿ ಇಂದ್ರಾಣಿಯು ಬೃಹಸ್ಪತಿಯ ಸಲಹೆಯಂತೆ ರೇಷ್ಮೆದಾರವನ್ನು ರಕ್ಷಣೆ ಹಾಗೂ ಯುದ್ಧದಲ್ಲಿ ಗೆದ್ದು ಬರಲು ಜನುಮದ ಸಂಕೇತವಾಗಿ ಇಂದ್ರನ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರ ಯುದ್ಧದಲ್ಲಿ ಜಯಗಳಿಸುತ್ತಾನೆ. ರಜಪೂತರು ಯುದ್ಧದ ಸಮಯದಲ್ಲಿ ಹೊರಡುವಾಗ ಗಂಡು ಮಕ್ಕಳ ಹಣೆಗೆ ಕುಂಕುಮ ಹಚ್ಚಿ ರಕ್ಷಣೆಯ ಸಂಕೇತವಾಗಿ ರೇಷ್ಮೆದಾರ ಕಟ್ಟಿ ಜಯ ಸಾಧಿಸಲೆಂದು ಹಾರೈಸುತ್ತಿದ್ದರು. ಹಿಂದು ರಾಣಿಯರು ರಾಜರಿಗೆ ರಾಖಿಕಟ್ಟಿ ಸಹೋದರತೆಯ ಸಂಬಂಧ ಬೆಳೆಸುತ್ತಿದ್ದರು. ಈ ರೀತಿ ರಕ್ಷಾಬಂಧನವು ಪವಿತ್ರತೆಯ ಸಂಕೇತದ ಹಬ್ಬವಾಗಿದೆ. ಅಂದಿನ ದಿನ ಹಿಂದೂಗಳಲ್ಲಿ ಜನಿವಾರದ ಹಬ್ಬವೆಂದೂ ಮಂತ್ರಸಿದ್ಧಿ ಆಗಲು ಗಾಯಿತ್ರಿದೇವಿಯ ಉಪಾಸನೆ ಮಾಡುತ್ತಾರೆ.
ರಾಘವೇಂದ್ರ ಸ್ವಾಮಿಗಳ ಆರಾಧನೆ – ಯಾವುದೇ ವಿದ್ಯೆಗೆ ಗುರುವಿನ ಅನುಗ್ರಹಬೇಕು. ಆದ್ದರಿಂದಲೇ ನಾವು ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ. ಗುರುಸಾಕ್ಷಾತ್‍ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಎಂದು ದಿನವೂ ಹೇಳುತ್ತೇವೆ. ಆದ್ದರಿಂದ ಆಗ ಮಂತ್ರಾಲಯ ಗುರುಗಳ ಆರಾಧನೆ ಶ್ರಾವಣಮಾಸದಲ್ಲಿ 3 ದಿನ ಬರುತ್ತದೆ. ಅವರ ಅನುಗ್ರಹ ನಮ್ಮೆಲ್ಲರ ಮೇಲೆ ಆಗಲಿ ಎಂದು ಕೇಳೋಣ.
ಮಂಗಳಗೌರಿ ವ್ರತ – ಶ್ರಾವಣಮಾಸದ ಮೊದಲ ಮಂಗಳವಾರದಿಂದ ಕೊನೆಯ ಮಂಗಳವಾರದವರೆಗೆ ಗೌರಿಯವ್ರತ ಮಾಡುವರು. ಮಾಂಗಲ್ಯಭಾಗ್ಯ ಕೋರಿ ಮದುವೆಯಾದ ಹೆಣ್ಣುಮಕ್ಕಳು 5 ವರ್ಷ ಈ ಪೂಜೆ ಆಚರಿಸುವರು.
ಶ್ರಾವಣ ಶನಿವಾರ – ಪ್ರತಿ ಶ್ರಾವಣ ಶನಿವಾರ ಕುಲದೇವತೆ ವೆಂಕಟರಮಣನ ವಾರವೆಂಬ ಪ್ರತೀತಿ ಇದೆ. ಅಂದು ಆ ಸ್ವಾಮಿಯನ್ನು ಪೂಜಿಸಿ ಪಡಿಯನ್ನು ಬೇಡುವ ಪದ್ಧತಿ ಕೆಲವರಲ್ಲಿ ಇದೆ. ಪಡಿಕೇಳುವವರಿಂದ ಅಹಂ, ಕೋಪತಾಪ ಕಡಿಮೆಯಾಗುವುದೆಂಬ ನಂಬಿಕೆ ನಮ್ಮ ಜನರಲ್ಲಿದೆ. ಇಂಥಹ ಅಮೂಲ್ಯ ಸಂದರ್ಭದಲ್ಲಿ ದೇವತೆಗಳ ವಿಶೇಷ ಪೂಜೆ, ಹೋಮ ಹವನ, ಧರ್ಮಚಿಂತನೆ, ಕಾರ್ಯಸಿದ್ಧಿಯ ಸಂಕಲ್ಪಗಳ ಮುಖಾಂತರ ಬದುಕಿನಲ್ಲಿ ಸೌಹಾರ್ದ, ಸಹಬಾಳ್ವೆ, ಸಾತ್ವಿಕ ಸಂಪನ್ನತೆ ನಮಗೆಲ್ಲ ತಂದು ಕೊಡುತ್ತದೆ. ಆದ್ದರಂದ ನಾವೆಲ್ಲ ಶುಭಶ್ರಾವಣಮಾಸ ಆಚರಣೆ ಮಾಡಿ ನಮ್ಮ ಜೀವನದಲ್ಲಿ ನೆಮ್ಮದಿ, ಸುಖಶಾಂತಿಯನ್ನು ಕಂಡುಕೊಳ್ಳೋಣ. ಎಲ್ಲರಿಗೂ ಶುಭವಾಗಲಿ.

-ಶ್ರೀಮತಿ ಗಿರಿಜಾ. ಎಸ್‍. ದೇಶಪಾಂಡೆ,ಬೆಂಗಳೂರು.

ಭಾನುವಾರ, ಆಗಸ್ಟ್ 5, 2018

ಮಾಧವಿ ಕುಲಕರ್ಣಿ ಕಯ್ಯೂರು ಹುತಾತ್ಮರ ವೀರ ಸ್ಮರಣೆಗೆ ರಕ್ತ ನಮಸ್ಕಾರ !*

*ಪುಸ್ತಕಾವಲೋಕನ*

*ಅಂಕಣ ೪*

*೩.೦೮.೨೦೧೮. ಶುಕ್ರವಾರ*

*ಚಿರಸ್ಮರಣೆ*

*ಕಯ್ಯೂರು ಬಾಂಧವರಿಗೆ ರಕ್ತ ನಮಸ್ಕಾರ !*

*ಕಯ್ಯೂರು ಹುತಾತ್ಮರ ವೀರ ಸ್ಮರಣೆಗೆ ರಕ್ತ ನಮಸ್ಕಾರ !*

*ಕಯ್ಯೂರು ವೀರ ಯೋಧರ ಚಿರಸ್ಮರಣೆಗೆ ರಕ್ತ ನಮಸ್ಕಾರ !*

*ಅದು ಮಾರ್ಚ 29*

*ಕಲೆಕ್ಟರ ಮುಖಗಳಿಗೆ ಮುಸುಕು ಹಾಕಿ !*

*" ಇಲ್ಲ ಮುಸುಕು ಬೇಕಾಗಿಲ್ಲ! "*
*ಉರುಳು ಒಂದೊಂದು ಕೊರಳಿಗೂ ಆಭರಣವಾಯಿತು. ಉಚ್ಛ ಕಂಠದಿಂದ ಚಿರುಕಂಡ ಕೂಗಿದ.*
           *" ಇಂಕ್ವಿಲಾಬ್ "*

*ಅಪ್ಪು..ಕುಂಞಂಬು ಅಬೂಬಕರ್ ಉತ್ತರವಿತ್ತರು*
          
*" ಜಿಂದಾಬಾದ್ ! "*
         
*" ಸಾಮ್ರಾಜ್ಯ್ ಶಾಹಿ "*
         
*" ನಾಶವಾಗಲಿ "*
          
*"ಕ್ರಾಂತಿಗೆ"*
          
*" ವಿಜಯವಾಗಲಿ "*

*ಅಧಿಕಾರಿ ಸನ್ನೆ ಮಾಡಿದ. ಉರುಳುಗಳು ಕತ್ತನ್ನು ಹಿಸುಕುವುದು, ಹೊರಡಲು ಸಿದ್ಧವಾಗಿದ್ದ ಸ್ವರಗಳನ್ನು ತಡೆದವು.ನಾಲ್ಕೂ ದೇಹಗಳೂ ಕಂದಕದಲ್ಲಿ ತೂಗಾಡಿದವು. ಉರುಳು ಮತ್ತಷ್ಟೂ ಬಿಗಿಯಾಯಿತು. ಸಾಯುವವರೆಗೂ ನೇಣು.......*

         
                  ಹೌದು, ಪುಟ್ಟ ಕಯ್ಯೂರು ಕೇರಳದ ಗ್ರಾಮ. ಗ್ರಾಮದ ಶಾಂತ ತೇಜಸ್ವಿನಿ ನದಿಯ  ತಟದ ಕ್ರಾಂತಿಕಾರಿ ಎಳೆಯರ ಮನಮಿಡಿಯುವ ಜೀವನ ಚಿತ್ರಣ .....
ಓದುತ್ತಾ ಓದುತ್ತಾ ಕಣ್ಣೀರಿನ ತರ್ಪಣ........

ಇದು ಹಸಿದವರ ಮತ್ತು ಕಸಿದವರ ನಡುವಿನ ಹೋರಾಟ. ಈ ಚಿರಸ್ಮರಣೆಯ ರಚನಾಕರ್ತರು ನಿರಂಜನರು. ಸತ್ಯದ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುವುದರ ಜೊತೆಗೆ, ಪಾತ್ರ ಪೋಷಣೆಗೆಂದು ತಮ್ಮದೇ ಕಲ್ಪನೆಯ ಮೂಸೆಯಲ್ಲಿ ಮತ್ತೆ ಕೆಲವು ಪಾತ್ರಗಳನ್ನು ಸೃಷ್ಠಿಸಿದ್ದಾರೆ.
    
                     ಕಾದಂಬರಿ ರಚನೆಯಾಗಿ 20 ವರ್ಷಗಳಾದ ಮೇಲೆ ಮಲೆಯಾಳಂ, ತೆಲಗು, ತಮಿಳು, ಮರಾಠಿ, ಬಂಗಾಳಿ, ತುಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅನುವಾದಗೊಂಡಿತು.
       
        ನನ್ನ ಮನಸ್ಸಿನಲ್ಲಿ ಚಿರಸ್ಮರಣೆ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿದಿದೆ.

             ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ       ಕಯ್ಯೂರಿನ ನಾಲ್ವರು ಯುವತರುಣರ ಕೆಚ್ಚೆದೆಯ ಹೋರಾಟ ಮತ್ತು ದಿಟ್ಟ ತನದಿ ಎದೆಗೊಟ್ಟು  ನಿಂತು ಮರಣವನ್ನು ಆಹ್ವಾನಿಸಿದ ವೀರತ್ವಕ್ಕೊಂದು ಮಹತ್ತರ ಸ್ಥಾನವಿದೆ.

      ಎಳೆಯರಾದ ಅಪ್ಪು, ಮತ್ತು ಚಿರುಕಂಡ ಎಂಬ ಗೆಳೆಯರು ತಮ್ಮ ಮಾಸ್ತರರೊಡನೆ ಕೇವಲ ಪಾಠವನ್ನಷ್ಟೇ ಅಲ್ಲದೇ ದಾಸ್ಯತ್ವದ ಶೃಂಖಲೆಯನ್ನು ಕಿತ್ತೊಗೆಯುವ ಜ್ಞಾನವನ್ನೂ ಪಡೆದುಕೊಂಡರು. ಸ್ವಯಂ ಸೇವಕ ಸಂಘವನ್ನೂ ಸ್ಥಾಪಿಸಿದರು.

   ಸಂಘದ ನಿರ್ಮಾಣಕ್ಕಾಗಿ ಪೂಡವರ ಕುಂಞಂಬು  ತನ್ನ ಹೊಲದಲ್ಲಿ ಜಾಗ ಕೊಡುವನು. ಮತ್ತೊಬ್ಬ ಸ್ನೇಹಿತನಾದ ಅಬೂಬಕ್ಕರ್ ಎಂಬ ಮುಸಲ್ಮಾನ ಬಾಂಧವ ಸ್ವಯಂ ಸೇವಕ ಸಂಘದ ನಾಯಕನಾಗಿದ್ದ.ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಇಂದಿನಂತೆ ಹಿಂದೂ ಮುಸ್ಲಿಂರ ಕಿತ್ತಾಟಗಳು ಇರಲಿಲ್ಲ. ಅಂದು ಆ ಅಬೂಬಕರ್ ಸಂಘದ ನಾಯಕನಾಗಿದ್ದ ಆದರೆ ಇಂದು ಮುಸಲ್ಮಾನ ಬಂಧುಗಳಿಗೂ ಮತ್ತು ಸಂಘಕ್ಕೂ ಎತ್ತಣಿಂದತ್ತ ಸಂಭಂಧವಯ್ಯ ಎಂಬಂತಾಗಿದೆ. ಅಲ್ಲವಾ ಸ್ನೇಹಿತರೆ. !

           ಮನುಷ್ಯನು ತನ್ನ ಬದುಕಿನ ಹಲವಾರು ಸಂದರ್ಭಗಳಲ್ಲಿ ಪ್ರಕೃತಿಯನ್ನು ತನ್ನ ಸಂಗಾತಿಯಂತೆ ಬಳಸಿಕೊಂಡು ತನ್ನ ಸುತ್ತಲಿನ ವಾತಾವರಣವನ್ನು ಪಶು ಪಕ್ಷಿ , ಗಿಡ ಮರಗಳನ್ನು ಪ್ರಶ್ನಿಸುತ್ತಾ ತನಗಾದ ಮನೋ ವ್ಯಾಕುಲಗಳನ್ನು ತೋಡಿಕೊಳ್ಳುತ್ತಾನೆ. ಇದೇ ರೀತಿ ತೇಜಸ್ವಿನಿ ನದಿಯ ತಟದಲ್ಲಿದ್ದ ಕಯ್ಯೂರು ತನ್ನ ಸಂದರ್ಭಗಳ ಸುತ್ತಲೆಲ್ಲ ಪ್ರಕೃತಿಯನ್ನಿಟ್ಟುಕೊಂಡೇ ಲೇಖಕ ನಿರಂಜನರ ಕಣ್ಣ ಮುಂದೆ ನಿಲ್ಲುತ್ತದೆ.

ಆದ್ಯ ವಚನಗಾರ್ತಿಯಾದ ಅಕ್ಕಮಹಾದೇವಿಯು ವಚನಗಳಲ್ಲಿ ತರು ಲತೆಗಳನ್ನು ಕುರಿತು ತನ್ನ ಚೆನ್ನ ಮಲ್ಲಿಕಾರ್ಜುನನ್ನು ನೀವು ಕಾಣಿರೆ ? ನೀವು ಕಾಣಿರೆ ? ಅಂತ ಪ್ರಶ್ನಿಸುವ ಪರಿ ಮನುಜನ ಮತ್ತು ಪ್ರಕೃತಿಯ ಒಡನಾಟವನ್ನು ತಿಳಿಸುತ್ತದೆ.

ಇದರಂತೆ ರಾಮಾಯಣದ ಸೀತಾಪರಿತ್ಯಾಗದಲ್ಲೂ ತುಂಬು ಗರ್ಭಿಣಿಯಾದ ಸೀತೆ ಮೂರ್ಛಿತಳಾಗಿ ಬಿದ್ದಾಗ ವನದೊಳಿರುವ ತರುಲತೆಗಳ ಜೊತೆಗೆ ವನಜೀವಿಗಳೂ ಅವಳ ಸೇವೆಯನ್ನು ಮಾಡಿ ಸಂತೈಸುವುದಿಲ್ಲವೆ? ಅದೇನೇ ಇರಲಿ ಲೇಖಕರು ಕಾದಂಬರಿಯುದ್ದಕ್ಕೂ ನಿಸರ್ಗವನ್ನೇ ಸಾಕ್ಷಿಯಾಗಿಟ್ಟುಕೊಂಡಿದ್ದಾರೆನ್ನಬಹುದು. ಪ್ರಕೃತಿಯ ವರ್ಣ ನೆಯೂ ಕಾದಂಬರಿಯ ಸೌಂದರ್ಯವನ್ನು ಹೆಚ್ಚಿಸಿದೆ ಎನ್ನಬಹುದು.

                       ರೈತರಿಗೆ ಕೊಟ್ಟ ಸಾಲವನ್ನೇ ನೆಪ ಮಾಡಿಕೊಂಡು ಜಮೀನ್ದಾರನಾದ ನಂಬಿಯಾರನು ಎಲ್ಲ ರೈತರ ಹೊಲಗಳನ್ನು ಆಕ್ರಮಿಸಿಕೊಳ್ಳತೊಡಗಿದ. ಇದರಿಂದ ಮನನೊಂದ ಮಾಸ್ತರರು ಕರಪತ್ರಗಳನ್ನು,ದಿನಪತ್ರಿಕೆಗಳನ್ನು ಓದಿ ಹೇಳುವುದರ ಮೂಲಕ ರೈತರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚುತ್ತಾರೆ. ಇದರ ಫಲಶೃತಿಯೇ ಕಯ್ಯೂರಿನಲ್ಲಿ ಸಂಘದ ಸ್ಥಾಪನೆ.ದಿನೇ ದಿನೇ ರೈತರಲ್ಲಿ ಮೂಡುತ್ತಿರುವ ಜಾಗೃತಿಯಿಂದಾಗಿ ಕುಪಿತನಾದ ನಂಬಿಯಾರನು ಬ್ರಿಟೀಷ್ ಸರ್ಕಾರಕ್ಕೆ ವರದಿ ಕಳಿಸಿದಾಗ ರೈತರ ಹೋರಾಟವನ್ನು ಹತ್ತಿಕ್ಕಲೆಂದು ಸುಬ್ಬಯ್ಯನೆಂಬ ಪೇದೆ ಕಯ್ಯೂರಿಗೆ ಬರುತ್ತಾನೆ.
ಇತ್ತ ರೈತ ಸಮ್ಮೇಳನಕ್ಕೆಂದು ಸಂಘದ ಕಾರ್ಯಕರ್ತರೆಲ್ಲ ಬಾವುಟ ಹಿಡಿದು ಮೆರವಣಿಗೆ ಹೊರಡುತ್ತಾರೆ.
*ಇಂಕ್ವಿಲಾಬ್ ಜಿಂದಾಬಾದ್*
ಎಂಬ ಘೋಷ ವಾಕ್ಯವನ್ನು ಕೇಳಿದ ಸುಬ್ಬಯ್ಯನು ಅವರನ್ನು ವಿರೋಧಿಸುತ್ತಾ ನದಿಯಲ್ಲಿ ಬಿದ್ದು ಪ್ರಾಣ ಬಿಡುತ್ತಾನೆ.ಈ ಪ್ರಕರಣವನ್ನೇ ನಂಬಿಯಾರನು ತನ್ನ ಅನುಕೂಲಕ್ಕೆ ಬಳಸಿಕೊಂಡು ಸಂಘದವರೆಲ್ಲ ಸುಬ್ಬಯ್ಯನನ್ನು ಕೊಂದಿದ್ದಾರೆ ಎಂದು ಸುಳ್ಳು ಆರೋಪ ನೀಡಿ ಅವರೆಲ್ಲರ ಜೊತೆ ಊರಿನ ರೈತರೂ ಸೇರಿ ಅರವತ್ತು ಜನರನ್ನು ಜೈಲಿಗೆ ಕಳಿಸುತ್ತಾನೆ.ಏನೇನೋ ವಿಚಾರಣೆಯ ನಂತರ ಒಂದಷ್ಟು ಜನರಿಗೆ ಬಿಡುಗಡೆಯಾಗುತ್ತದೆ.
ಮತ್ತೊಂದಷ್ಟು ಜನರಿಗೆ ೫ ವರ್ಷ ಶಿಕ್ಷೆಯಾಗುತ್ತದೆ. ಅಪ್ಪು,ಚಿರುಕಂಡ,ಕುಂಞಂಬು,ಅಬೂಬಕ್ಕರ್ ನಿಗೆ ಗಲ್ಲು ಶಿಕ್ಷೆಯಾಗುತ್ತದೆ.

                  ಮಾಸ್ತರರು ಕ್ರಾಂತಿಪರ ವಿಚಾರಗಳಿಂದ ಕಯ್ಯೂರಿನಲ್ಲಿ ಹೆಣ್ಣಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡುತ್ತಾ *ಶಿಕ್ಷಣವು ದುರ್ಬಲರ ಮೇಲೆ ಕೈ ಮಾಡೋದಕ್ಕಲ್ಲ,ಇದು ಆತ್ಮ ರಕ್ಷಣೆಗೆ-ನ್ಯಾಯ ಸಾಧನೆಗೆ* ಎಂದು ಹೇಳುತ್ತಾ ಶಿಕ್ಷಣ ಕ್ರಾಂತಿಯನ್ನೂ ಕೈಗೊಳ್ಳುತ್ತಾರೆ.

              ಬಡ ರೈತರ ಮೂಗಿನಲ್ಲಿ ಕಿಡಿ ಹೊತ್ತಿಸಿದ ಸಿಗರೇಟಿನಿಂದ ಸುಡುವುದು ,ಸೂಜಿಯಿಂದ ಕೈ ಬೆರಳಿನ ಉಗುರುಗಳಿಗೆ ಚುಚ್ಚುವುದು,ಕೈ ಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಹೇಸಿಗೆ ಸುರಿಸಿಕೊಂಡು ವಿಚಿತ್ರವಾದ ಚಿತ್ರಹಿಂಸೆಗಳಿಗೆ ಗುರಿಯಾಗಿ ಸಾವು ನೋವುಗಳನ್ನು ಅನುಭವಿಸಿ ನಮ್ಮವರು ನಮಗೆ ಸ್ವಾತಂತ್ರ್ಯ   ತಂದು ಕೊಟ್ಟರು.ಇಂಥ ಕೃತ್ಯಗಳನ್ನೆಲ್ಲ ಹೇಗೆ ಸಹಿಸಿದರೋ ಅನುಭವಿಸಿದರೋ ಕಲ್ಪನೆ ಮಾಡಿಕೊಂಡರೆ ಕಣ್ಣು ಹನಿಸುವುದು.
ಸ್ವಾತಂತ್ರ್ಯಕ್ಕಾಗಿ ತರ್ಪಣಗೈದ ಅವರ ಆತ್ಮಗಳ ನಿಟ್ಟುಸಿರು ಅವರ ಕಥನಗಳನ್ನೋದಿದಾಗ ಬಿಸಿ ಗಾಳಿಯ ಮೂಲಕ ತೇಲಿ ಬಂದು ಓದುಗನನ್ನು ತಟ್ಟುವುದೇನೋ ಅಂತ ಅನ್ನಿಸುತ್ತದೆ.

                  ನೇಣಿಗೇರಿಸುವ ಹಿಂದಿನ ದಿನ ಜೇಲರು ಕೇಳಿದ ಕೊನೆಯ ಆಸೆಗೆ ಆ ನಾಲ್ವರು ಹುಡುಗರೂ ಮಾಸ್ತರರನ್ನು ಕೊನೆಯ ಬಾರಿ ನೋಡಬೇಕೆಂದು ಕೇಳುತ್ತಾರೆ.
ಸಂಘದ ವಿಷಯದಲ್ಲಿ ಅತ್ಯಂತ ಶಿಸ್ತಿನವನಾಗಿದ್ದ  ಚಿರುಕಂಡನು ಆತ್ಮೀಯ ಮಾಸ್ತರರಿಗೆ "ನಾಳೆ ಬೆಳಗ್ಗೆ ನಾವೆಲ್ಲ ಹೋಗ್ತೇವೆ ಸರ್" ಎಂದು ಹೇಳಿ ಕೊನೆಯ ನಮಸ್ಕಾರವನ್ನು ಮಾಡುತ್ತಾನೆ.
ಅಷ್ಟೇ  ಭಾರವಾದ ಕಂಠದಿಂದ ಅಪ್ಪುವೂ "ನಮ್ಮನ್ನು ಮರೀಬೇಡಿ ಸರ್ "ಎನ್ನುತ್ತಾನೆ.
ತಡೆಯಲಾರದ ಸಂಕಟದ ಕ್ಷಣಗಳನ್ನು ಅನುಭವಿಸುತ್ತ ನಾನು ಅತ್ತುಬಿಟ್ಟರೆ ಹುಡುಗರು ಅಧೈರ್ಯರಾಗಬಹುದೆಂದು ಮಾಸ್ತರರು
**ಎಲ್ಲಾರೂ ಕೊನೆಯ* *ಕ್ಷಣದವರೆಗೆ ಜೊತೇಲೇ *ಇರಿ**ಎಂದು ಹೇಳಿ ಕೈ ಮುಗಿದು
*ರಕ್ತ ನಮಸ್ಕಾರ ಬಾಂಧವರೆ* ಎಂದು ಬೀಳ್ಕೊಡುತ್ತಾರೆ.

           ಮರುದಿನ ನಸುಕಿನ ಜಾವವೇ ಸಾವೆಂಬ ಹೇಡಿ ಹಗ್ಗದ ಕುಣಿಕೆಯೊಡನೆ ಅವರ ಕೊರಳನ್ನು ಬಂಧಿಸಲು ಕತ್ತಲೆ ಬೆಳಕಿನ ನಡುವೆ ಒದ್ದಾಡುತ್ತಲೇ ಬರುತ್ತದೆ.
ಸಾವು ಯಾಕೆ ಒದ್ದಾಡುತ್ತದೆ ಅದು ತಾನು ನುಸುಳಬಯಸಿ ಬರುವ ದೇಹವನ್ನು ಒದ್ದಾಡಿಸುತ್ತದೆಯೇ ಹೊರತು ಅದೆಂದಿಗೂ ಒದ್ದಾಡುವುದಿಲ್ಲ ಅಲ್ಲವಾ?.ಆದರೆ ಇಲ್ಲಿರುವ ನಮ್ಮ ತರುಣ ನಾಯಕರು ಆ ಹೇಡಿ ಸಾವಿಗೆ ಹೆದರದೆ ಎದೆ ಸೆಟೆಸಿ ಸ್ವಾಗತಿಸಿದಲ್ಲವೆ? ಸ್ವೀಕರಿಸಿದರಲ್ಲವೆ?  ಅದಕ್ಕೆಂದೇ ಆ ಭೀಕರ ಸಾವು ಇಂದು ಹೇಡಿಯಂತೆ ಅವರ ಮುಂದೆ ಬಂದು ತಲೆ ಬಾಗಿ  ನಿಂತಿತು.......
ಭೂಗತರಾಗಿ ಜಾಗೃತಿಯನ್ನು ಮೂಡಿಸಿದ ನಮ್ಮ ನೆಲದ ತರುಣರು ನೋಡ ನೋಡುತ್ತಿದ್ದಂತೆ ಅಮರ ರಾದರು....
ಇತಿಹಾಸವಾದರು.....
ಭಾರತಮಾತೆಯ ವೀರ ಕುವರರಾದರು.
ಕಯ್ಯೂರಿನ ವೀರರ ಅಜರಾಮರ ವಾರ್ತೆ ದೇಶದಗಲಕ್ಕೂ ಹರಡಿತು.ಅವರ ಪ್ರಾಣ ಜ್ಯೋತಿ ನಂದಿದ ಆ ರಾತ್ರಿ ಕಯ್ಯೂರಿನ ಯಾವ ಮನೆಯಲ್ಲೂ ದೀಪ ಬೆಳಗಲೇಯಿಲ್ಲ.......
ತುಂಬಾ ಅಳುತ್ತಿದ್ದ ಮಗುವನ್ನು ರಮಿಸಲೆಂದು ಅಪ್ಪುವಿನ ಹೆಂಡತಿ ಜಾನಕಿ ಆಕಾಶಕ್ಕೆ ಬೆರಳು ಮಾಡಿ ಅಮರತ್ವದ ಸಂಕೇತದಂತೆ ಕಂಡ ನಾಲ್ಕು ಚುಕ್ಕಿಗಳಲ್ಲೊಂದನ್ನು ತೋರಿಸುತ್ತಾ ಅಪ್ಪ ನೋಡ್ತಿದ್ದಾರೆ ಕುಟ್ಟಿ "ನೀ ಅತ್ತರೆ ಅವರಿಗೆ ದುಃಖವಾಗ್ತದೆ "ಎಂದಳು......
ಪಾತ್ರ ಪೋಷಣೆಗೆಂದು ಲೇಖಕರು ಸೃಷ್ಟಿಸಿದ ಕಣ್ಣ..ದೇವಕಿಯರೂ ಮನದಲ್ಲಿ ಉಳಿಯುತ್ತಾರೆ.

                 ಕೊನೆಯಲ್ಲಿ ರಕ್ತಬಾಂಧವರಿಗೂ ನಮಸ್ಕಾರ ......
ಅವರನ್ನು ಹೆತ್ತು ಅವರಿಗೊದಗಿದ ಸಾವನ್ನು ಅದೆಷ್ಟು ಗಟ್ಟಿ ಮನಸ್ಸು ಮಾಡಿ ಒಪ್ಪಿಕೊಂಡರೋ ಆ ಹೆತ್ತವರು?ಅವರಿಗೂ ಒಂದು ದೊಡ್ಡ ನಮಸ್ಕಾರ .🙏🏻.....

ಭಾರವಾದ ಮನಸ್ಸಿನೊಂದಿಗೆ ಬರೆದ ಅಕ್ಷರಗಳಿವು.

ನಮ್ಮ ನೆಲವನ್ನು ನಮಗೇ ಸಿಗುವಂತೆ ಮಾಡಿ,
ನಮ್ಮ ದಾಸ್ಯದ ಜೀವನವನ್ನು ತಮ್ಮ ಬಲಿದಾನ ಕೊಟ್ಟು ಕಾಪಾಡಿ ಹರಸಿದ ನನ್ನ ದೇಶದ ಸಾವಿರ ಸಾವಿರ ಸ್ವಾತಂತ್ರ್ಯ ಹೋರಾಟಗಾರರಿಗೆ  ನನ್ನ ಉಸಿರಿರುವ ತನಕ ನಮನಗಳು......

*ನಮಸ್ಕಾರ ರಕ್ತಬಂಧವರೇ!!!!!*
*ನಿಮ್ಮ ನೆನಪಿದು ಅವಿಸ್ಮರಣೀಯ ....*

*ನಿರಂಜನರ ಚಿರಸ್ಮರಣೆ ನನ್ನಾತ್ಮಕ್ಕೆ ತುಂಬಾ ಹತ್ತಿರವಾದ ಗೃಂಥ.......*

ಕಾದಂಬರಿಯನ್ನು ಓದಿ ಅನುಭವಿಸಿದ್ದಷ್ಟೂ ಅನುಭವಗಳು ನನಗೆ ಅಕ್ಷರ ರೂಪದಲ್ಲಿ ಇನ್ನೂ ಸಿಕಿಲ್ಲ......

(ಸ್ವಾತಂತ್ರ್ಯೋತ್ಸವದ ಹಾಗೂ ಕ್ರಾಂತಿಕಾರಿ ಸಂಗೊಳ್ಳಿ  ರಾಯಣ್ಣನ ಜಯಂತಿಯ ಈ ಸಂದರ್ಭದಲ್ಲಿ  ನಮ್ಮ ಹುತಾತ್ಮರನ್ನು, ಮಹಾತ್ಮರನ್ನು ಸ್ಮರಿಸುವ ಕುರಿತಾಗಿ ಒಂದು ಚಿಕ್ಕ ಪ್ರಯತ್ನವಿದು.🙏🏻)

*ಧನ್ಯವಾದಗಳೊಂದಿಗೆ*

*ಮಾಧವಿ ಕುಲಕರ್ಣಿ.*

ನ್ಯಾಯ ದೇವತೆ ಆಗಲಿಲ್ಲ...

ನ್ಯಾಯ ದೇವತೆ ಆಗಲಿಲ್ಲ....
ಗಾಂಧಾರಿ ನೀನಾದರೂ ತಿಳಿ ಹೇಳಬೇಕಿತ್ತು ಸುಯೋಧನಾದಿಗಳಿಗೆ...
ಧೃತರಾಷ್ಟ್ರನಂತೆ ಕುರುಡು ಪಟ್ಡ ಕಟ್ಟಿಕೊಂಡೆ
ನ್ಯಾಯ ದೇವತೆ ಆಗಲಿಲ್ಲ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿದರೂ..
ಮಮತೆಗೆ ಕಟ್ಟಿಬಿದ್ದು ನೀ ಕೊನೆಗೆ ನೋಡಿದ್ದಾದರೂ ಏನನ್ನು ...
ಸುರತ್ವಕ್ಕೇರಬೇಕಾದವ ಧುರ್ಯೋ್ದಮ ಏಕಾದ..
ಮಗನೆಂಬ ಮಮಕಾರದ ಮೋಹಕೆ
ವಾತ್ಸಲ್ಯವೂ ಕುರುಡಾಯಿತೇ..
ಕುರುವಂಶದ ಕುರುಪು ಕೆನೆಗಟ್ಡಿತು..
ಹಾಲೇ ಹಾಲಾಹಲದ ರುಚಿ ನೀಡಿತು..

-ಹನುಮಂತ.ಮ.ದೇಶಕುಲಕರ್ಣಿ.
ಯುವ ಬರಹಗಾರರು

ಶನಿವಾರ, ಆಗಸ್ಟ್ 4, 2018

ದೇಶಕುಲಕರ್ಣ ಅವರ ಕವನಗಳು

ರುದ್ರಗಣಿತ

ಮಾಧವಿ ಕುಲಕರ್ಣಿ ಅವರ ಹನಿಗತೆಗಳು

ಇಂದಿಗಾದರೂ
ನೀ ತೃಪ್ತನಾದೆಯಲ್ಲ
ದಿಗಂತದಾಚೆಗೆ ಹಾರಿದರೂ
ಚಿಂತಿಲ್ಲ ಪ್ರಾಣ ಪಕ್ಷಿ...
ಎಲ್ಲೇ ಇದ್ದರೂ ಮಿಡಿಯುವುದು
ನಿನಗಾಗಿ ನನ್ನ ಹೃತ್ಕುಕ್ಷಿ
Madhavi KULKARNi:

ನಿನ್ನ ಹೆಸರೇ
ನ ನ್ನೆದೆಯ ಹಸಿರು
ಸವಿಯುಲಿಯೆ ನೀನು
ಕರ್ಣಗಳಿಗೆ ಸುರಿದಂತೆ
ಕೋಕಿಲದ ನುಡಿಗಾನ.....
Madhavi KULKARNi:

ನಾನಿನ್ನು ಏನನ್ನೂ ಹೇಳಲಾರೆ
ನಿನ್ನಾಸೆ ಹೂವಿಗೆ ನಾನಿಂದು ತಾಯಿಯಾಗಿದ್ದೇನೆ....
ತಂದೆಯತನವನ್ನು ನೀ ತುಂಬಲೇಬೇಕಿದೆ
ಆ ಹೂವಿಗೆ ನಿನ್ನ ಕನಸ ಹೇಳುತ್ತಲೇ ಇರುತ್ತೇನೆ.......
-ಮಾಧವಿ ಕುಲಕರ್ಣಿ

ಬುಧವಾರ, ಆಗಸ್ಟ್ 1, 2018

ಮಾಧವಿ ಕುಲಕರ್ಣಿ "ಇವನಾಯ್ದುದೋ"

*ಇವನಾಯ್ದುದೋ*

ಕೇಳು ಕುಂತೀಪುತ್ರ
ಕೇಳೆನ್ನ ಮಾತ;
ನಾನೂ ಆರಿಸಲೆ?
ಹರವಿದ ಮುತ್ತುಗಳ..

ನನ್ನ ಭಾನುಮತಿಗೆ
ನಿನ್ನೊಡನಿರುವ
ಸ್ನೇಹವ ನೋಡಿ
ಮನ ಹರುಷದಿ ಸುಖಿಸಿದೆ...

ನಿಲ್ಲು ಕೋಮಲೆ
ನಾನಾಯುವೆ..
ಇಲ್ಲಿ ಮನವಿಡಬೇಡ
ಮಾತು ಮುಂದುವರೆಸು....

ದಾನಶೂರನ
ಮಧುರ ಸ್ನೇಹವೂ
ನಮಗೆ ದೊರೆತಿದ್ದು
ಬಲು ಅಗಾಧವು....

ಸ್ನೇಹ ಸಲುಗೆ
ಬಾಂಧವ್ಯ ಪ್ರೀತಿಯಲಿ
ಹೀಗಾಗುವುದು ಸಹಜ
ರಸಭಂಗವಾಯ್ತೇ?

ಯಾರೇನಂದಾರು
ಅನ್ನೋ ಭಯ ಬೇಕಿಲ್ಲ
ನಿಮ್ಮ ಸ್ನೇಹ ಸೇತುವೆಗೆ
ಈ ಸುಯೋಧನನಿರುವನಲ್ಲ

ಸಲುಗೆಯ ಚೆಲ್ಲಾಟದಿ
ಹರಡಿದ ಮುತ್ತುಗಳನಾಯ್ದು ಕೊಡಲೇ?
ನಲ್ಲೆ ಭಾನುಮತಿ.........

*ಮಾಧವೀ..ಕುಲಕರ್ಣಿ ....(ಕೃಷ್ಣಸುತೆ*)