ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ
ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ ಬಂತು ಶ್ರಾವಣ ಎಂದು ಹಾಡನ್ನು ನೆನೆಸಿದಾಗ ಈಗ ನಡೆಯುತ್ತಿರುವ ವಿಳಂಬಿನಾಮ ಸಂವತ್ಸರ, ದಕ್ಷಿಣಾಯನ, ವರ್ಷಋತು, ಶ್ರಾವಣಮಾಸ ಬಂತೆಂದರೆ ನಮ್ಮಲ್ಲಿ ಸಡಗರ ಮತ್ತು ಸಂಭ್ರಮ. ಮಾಸಗಳ ರಾಜ ಎಂದರೆ ಶ್ರಾವಣಮಾಸ. ಶ್ರಾವಣಮಾಸದಲ್ಲಿ ನಡೆಯುವ ಧರ್ಮಾಚರಣೆಯ ವಿಧಿವಿಧಾನಗಳಾದ ಜಪ, ತಪ, ವ್ರತ, ನಿಯಮ, ಪೂಜಾನುಷ್ಠಾನ, ಪರಾಯಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಂಗ, ಪುಣ್ಯಕ್ಷೇತ್ರಗಳ ದರ್ಶನ, ಯಜ್ಞ, ಯಾಗ, ಹೋಮ, ಹವನ ಮುಂತಾದವು ಈ ಶ್ರಾವಣಮಾಸದಲ್ಲೇ ಶ್ರೇಷ್ಠವೆಂದು ಹೇಳಲಾಗುತ್ತದೆ.
ಮಹತ್ವ – ಶ್ರಾವಣದಲ್ಲಿ ಒಂದೇ ರೇಖೆಯಲ್ಲಿ ಬರುವ 17 ನಕ್ಷತ್ರಗಳು ಮಂಗಳಕರವಾದ ಮಳೆಗರೆದು, ಧರೆಯ ಜನರಿಗೆ ಉನ್ನತಫಲಗಳನ್ನು ನೀಡುತ್ತಿದೆ. ಸಿರಿಸಂಪತ್ತು ವೃದ್ಧಿಗಾಗಿ ವರಮಹಾಲಕ್ಷ್ಮಿವ್ರತ, ಸಂಪತ್ತು ಶುಕ್ರವಾರ, ಸಕಲ ಸಂಕಷ್ಟಗಳಿಂದ ಮುಕ್ತಗೊಳಿಸಿ ಸಮೃದ್ಧಿ ನೀಡುವ ಶ್ರೀಸತ್ಯನಾರಾಯಣ ಪೂಜಾವ್ರತ, ಮಂಗಳಗೌರಿವ್ರತ, ನಾಡಹಬ್ಬ, ನಾಗಪಂಚಮಿ ನಾಗದೇವತೆಗೆ ಹಾಲೆರೆಯುವುದು, ಸಹೋದರಿಯರ ರಕ್ಷಾಬಂಧನ, ಶ್ರಾವಣದಲ್ಲಿ ಸೋಮವಾರಕ್ಕೆ ಶಿವನ ಪೂಜೆಗೆ ಅಗ್ರಸ್ಥಾನವಿದೆ. ಈ ಮಾಸದಲ್ಲಿ ಬರುವ ಎಲ್ಲ ಶೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ. ಶ್ರವಣ ಎಂದರೆ ಆಲಿಸುವುದು, ಕೇಳುವುದು. ಸರ್ವಶ್ರೋತೃಗಳ ಶ್ರವಣೇಂದ್ರಿಯಗಳಿಗೆ ಯೋಗ್ಯವಾದ ಪಾರಮಾರ್ಥ ತತ್ವಧಾರೆಯನ್ನು ಶ್ರವಣ ಮಾಡಿಸುವ ಮಾಸವೇ ಶ್ರಾವಣ. ತತ್ವಪದ ಲಕ್ಷಣಗಳನ್ನು ಶೋಧಿಸಿದಾಗ ಅಶುದ್ಧಬುದ್ಧಿಯು ಶುದ್ಧವಾದ ನಂತರ ಗುರುಮುಖದಿಂದ ಉಪನಿಷದ್ ವಾಕ್ಯಗಳನ್ನು ಶ್ರವಣ ಮಾಡುವುದರಿಂದ ಅಪರೂಪ ಜ್ಞಾನವಾಗುವುದು. ಆಗ ಪರಮಾತ್ಮನೆಂಬ ಭಾವವು ಸುಸ್ಥಿರವಾಗುವುದು. ಈ ಮಾಸದಲ್ಲಿ ಬರುವ ಹಬ್ಬ ವ್ರತಗಳನ್ನು ಆಚರಿಸುವುದರಿಂದ ಜಾತಕದಲ್ಲಿರುವ ಗೃಹದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ಈ ಮಾಸದ ಆಗಮನಕ್ಕೆ ಮನೆಯಲ್ಲಿರುವ ಸ್ತ್ರೀಯರು ಶ್ರಾವಣಮಾಸ ಹಬ್ಬದ ಮಾಸ ಬಂತೆಂದು ಮನೆ ಬಾಗಿಲುಗಳನ್ನೆಲ್ಲ ಸ್ವಚ್ಛಗೊಳಿಸಿ ತಿಂಗಳಿಗಾಗುವಷ್ಟು ಅಡುಗೆಗೆ ಬೇಕಾದ ಪುಡಿಗಳನ್ನು ಮಾಡಿ ಇಟ್ಟುಕೊಳ್ಳುತ್ತಾರೆ. ಆಗ ಮೆಣಸಿನಕಾಯಿ ಹುರಿಯುವುದಿಲ್ಲ ಏಕೆಂದರೆ ಖಾರದ ಘಾಟಿಗೆ ಲಕ್ಷ್ಮಿಗೆ ತೊಂದರೆಯಾಗುವುದೆಂಬ ವಾಡಿಕೆ ಇದೆ. ಪೊರಕೆ, ಬುಟ್ಟಿಗಳ ಮರಗಳ ಖರೀದಿ ಕೂಡಾ ಶ್ರಾವಣದ ಮೊದಲು ಮಾಡುತ್ತಾರೆ. ಮನೆಯಲ್ಲಿ ಗೌರಿ ಕೂರಿಸುವವರು. ಒಡವೆಗಳನ್ನು ಕೈಗೆ ಬಳೆಗಳನ್ನು ಶ್ರಾವಣ ಮುಗಿಯುವವರೆಗೆ ತೆಗೆಯುವುದಿಲ್ಲ. ಈ ಮಾಸದಲ್ಲಿ ಮೊದಲು ಬರುವ ಹಬ್ಬ ನಾಗರಪಂಚಮಿ.
ನಾಗರಪಂಚಮಿ – ನಾಗರಪಂಚಮಿ ನಾಡಿಗೆ ದೊಡ್ಡದು ಎಂಬ ಹಾಡು ನಮ್ಮ ನೆನೆಪಿಗೆ ಬರುತ್ತದೆ. ಪಂಚಮಿ ಹಬ್ಬ ಅಣ್ಣ ಬರಲಿಲ್ಲ ಯಾಕೆ ಕರಿಯಾಕೆ – ಅನ್ನುವ ಸುಶ್ರಾವ್ಯ ಅಣ್ಣ ತಂಗಿಯರ ಹಬ್ಬವಾದ ಇದು ಸಂಭ್ರಮ ತರುವ ಹಬ್ಬ. ಜಾತಕದಲ್ಲಿ ನಾಗದೋಷ, ರಾಹುದೋಷ, ಆಶ್ಲೇಷ ನಕ್ಷತ್ರ ದೋಷ, ಕೇತು ದೋಷವಿದ್ದರೆ, ಸಂತಾನ ಭಾಗ್ಯಕ್ಕೆ ನಾಗದೋಷ, ಮಾಂಗಲ್ಯಭಾಗ್ಯ ದೋಷವಿದ್ದರೆ ನಾಗರಪಂಚಮಿಯ ದಿನ ನಾಗರಕಲ್ಲಿಗೆ ಅಥವಾ ಹುತ್ತಕ್ಕೆ ಹಾಲೆರೆಯಬೇಕು. ಚೌತಿಯ ದಿನ ಉಪವಾಸ ಮಾಡಿ ಮಾಡಿ ಅಣ್ಣತಮ್ಮಂದಿರಿಗೆ ಒಳ್ಳೆಯದಾಗಲೆಂದು, ಆಯಸ್ಸುವೃದ್ಧಿಯಾಗಲೆಂದು ಅಕ್ಕತಂಗಿಯರು ಚೌತಿಯ ತನಿ ಎರೆದು ಪಂಚಮಿಯೆಂದು ಹಬ್ಬ ಮಾಡಿ ಸಂಭ್ರಮಪಡುತ್ತಾರೆ. ಉತ್ತರ ಕರ್ನಾಟಕದ ಕಡೆಗೆ ತವರಿಗೆ ಹೆಣ್ಣುಮಕ್ಕಳನ್ನು ಕರೆದು ತರುತ್ತಾರೆ. ತಂಬಿಟ್ಟು ತುಂಬಾ ಶ್ರೇಷ್ಠ. ತಂಬಿಟ್ಟು, ಎಳ್ಳುಂಡೆ, ಹುರಿಕಡ್ಲೆ, ಶೇಂಗಾ ಉಂಡೆಗಳನ್ನು ತಯಾರಿಸುತ್ತಾರೆ. ನಾಗಪ್ಪನಿಗೆ ತಂಬಿಟ್ಟು ಇಷ್ಟವೆಂದು ಚಿಗಳಿ ಇಷ್ಟವೆಂದು ನಾಗದೇವರಿಗೆ ಸಮರ್ಪಿಸುತ್ತಾರೆ.
ಸಿರಿಯಾಳಷಷ್ಠಿ – ಈ ಹಬ್ಬವನ್ನು ಗಂಡುಮಕ್ಕಳಿರುವ ತಾಯಂದಿರು ಆಚರಿಸುತ್ತಾರೆ. ಜಾತಕದಲ್ಲಿ ಗಂಡುಮಕ್ಕಳ ಸಂತತಿಗೆ ದೋಷವಿದ್ದರೆ, ಗಂಡುಮಕ್ಕಳು ಹುಟ್ಟಿ ಮರಣಹೊಂದುತ್ತಿದ್ದರೆ ಅಂಥವರು ಶಿರಿಯಾಳ ಷಷ್ಠಿಯ ದಿನ ಹಸಿ ತರಕಾರಿ ದಾನ ನೀಡಿ ಗಂಡು ಮಕ್ಕಳನ್ನು ಪಡೆಯುತ್ತಾರೆ. ಇದನ್ನು ಮಕ್ಕಳಹಬ್ಬವೆಂದು ಕೂಡ ಕರೆಯುತ್ತಾರೆ.
ವರಮಹಾಲಕ್ಷ್ಮಿ ಹಬ್ಬ – ಈ ಹಬ್ಬದಂದು ಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸುತ್ತಾರೆ. ಶ್ರಾವಣದ ಎರಡನೆಯ ಶುಕ್ರವಾರದಂದು ಪೂಜಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಮೊದಲನೇ ಶುಕ್ರವಾರದಂದೇ ಗೌರಿಯನ್ನು ಕೂಡಿಸಿ ಸಂಭ್ರಮದಿಂದ ಪೂಜೆ, ಆರತಿ ಮಾಡಿ ಹಬ್ಬದ ಅಡುಗೆ ಮಾಡಿ, ಗೌರಿಯ ಹಾಡುಗಳಿಂದ ಹಬ್ಬ ಆಚರಿಸಿದರೆ, ಬೆಂಗಳೂರು ಮೈಸೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಎಲ್ಲ ಜನರೂ ಆಚರಿಸುವರು. ಲಕ್ಷ್ಮಿಯಲ್ಲಿ ಎರಡು ವಿಧ ಸ್ಥಿರಲಕ್ಷ್ಮಿ, ಚರಲಕ್ಷ್ಮಿ. ಎಲ್ಲರೂ ಸಾಮಾನ್ಯವಾಗಿ ಬಯಸುವರು ಸ್ಥಿರಲಕ್ಷ್ಮಿಯನ್ನು. ಲಕ್ಷ್ಮಿಗೆ ಶುಕ್ರಗ್ರಹ ಅಧಿಪತಿಯಾಗಿರುವನು. ವರಮಹಾಲಕ್ಷ್ಮಿ ಪೂಜೆ ಭಕ್ತಿಯಿಂದ ಮಾಡಿ ಲಕ್ಷ್ಮಿಯ ಕೃಪಾಕಟಾಕ್ಷ ಎಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸೋಣ.
ರಕ್ಷಾಬಂಧನ – ಸಹೋದರಿ – ಸಹೋದರರ ಹಬ್ಬ. ಸಹೋದರಿಯು ಸಹೋದರನ ರಕ್ಷೆಕೋರಿ ರಕ್ಷಾಬಂಧನವನ್ನು ಕಟ್ಟಿ ಈ ಹಬ್ಬ ಆಚರಿಸುತ್ತಾರೆ. ಶ್ರೀಕೃಷ್ಣನಿಗೆ ಕೈಗೆ ಗಾಯವಾಗಿ ರಕ್ತ ಬಂದಾಗ ದ್ರೌಪದಿಯು ತನ್ನ ಸೀರೆಯ ಒಂದು ತುಣುಕನ್ನು ಹರಿದು ಗಾಯಕ್ಕೆ ಕಟ್ಟುತ್ತಾಳೆ. ಅದೂ ಒಂದು ಪ್ರತೀತಿ ಇದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಮಹತ್ವ ಪಡೆದಿದೆ. ಪ್ರತಿಯೊಬ್ಬ ಸಹೋದರಿಯೂ ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಭ್ರಾತೃತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನದ ಹಬ್ಬದ ನೀತಿಯಾಗಿದೆ. ಇಂದ್ರನ ಪತ್ನಿ ಇಂದ್ರಾಣಿಯು ಬೃಹಸ್ಪತಿಯ ಸಲಹೆಯಂತೆ ರೇಷ್ಮೆದಾರವನ್ನು ರಕ್ಷಣೆ ಹಾಗೂ ಯುದ್ಧದಲ್ಲಿ ಗೆದ್ದು ಬರಲು ಜನುಮದ ಸಂಕೇತವಾಗಿ ಇಂದ್ರನ ಕೈಗೆ ಕಟ್ಟುತ್ತಾಳೆ. ನಂತರ ಇಂದ್ರ ಯುದ್ಧದಲ್ಲಿ ಜಯಗಳಿಸುತ್ತಾನೆ. ರಜಪೂತರು ಯುದ್ಧದ ಸಮಯದಲ್ಲಿ ಹೊರಡುವಾಗ ಗಂಡು ಮಕ್ಕಳ ಹಣೆಗೆ ಕುಂಕುಮ ಹಚ್ಚಿ ರಕ್ಷಣೆಯ ಸಂಕೇತವಾಗಿ ರೇಷ್ಮೆದಾರ ಕಟ್ಟಿ ಜಯ ಸಾಧಿಸಲೆಂದು ಹಾರೈಸುತ್ತಿದ್ದರು. ಹಿಂದು ರಾಣಿಯರು ರಾಜರಿಗೆ ರಾಖಿಕಟ್ಟಿ ಸಹೋದರತೆಯ ಸಂಬಂಧ ಬೆಳೆಸುತ್ತಿದ್ದರು. ಈ ರೀತಿ ರಕ್ಷಾಬಂಧನವು ಪವಿತ್ರತೆಯ ಸಂಕೇತದ ಹಬ್ಬವಾಗಿದೆ. ಅಂದಿನ ದಿನ ಹಿಂದೂಗಳಲ್ಲಿ ಜನಿವಾರದ ಹಬ್ಬವೆಂದೂ ಮಂತ್ರಸಿದ್ಧಿ ಆಗಲು ಗಾಯಿತ್ರಿದೇವಿಯ ಉಪಾಸನೆ ಮಾಡುತ್ತಾರೆ.
ರಾಘವೇಂದ್ರ ಸ್ವಾಮಿಗಳ ಆರಾಧನೆ – ಯಾವುದೇ ವಿದ್ಯೆಗೆ ಗುರುವಿನ ಅನುಗ್ರಹಬೇಕು. ಆದ್ದರಿಂದಲೇ ನಾವು ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ. ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಎಂದು ದಿನವೂ ಹೇಳುತ್ತೇವೆ. ಆದ್ದರಿಂದ ಆಗ ಮಂತ್ರಾಲಯ ಗುರುಗಳ ಆರಾಧನೆ ಶ್ರಾವಣಮಾಸದಲ್ಲಿ 3 ದಿನ ಬರುತ್ತದೆ. ಅವರ ಅನುಗ್ರಹ ನಮ್ಮೆಲ್ಲರ ಮೇಲೆ ಆಗಲಿ ಎಂದು ಕೇಳೋಣ.
ಮಂಗಳಗೌರಿ ವ್ರತ – ಶ್ರಾವಣಮಾಸದ ಮೊದಲ ಮಂಗಳವಾರದಿಂದ ಕೊನೆಯ ಮಂಗಳವಾರದವರೆಗೆ ಗೌರಿಯವ್ರತ ಮಾಡುವರು. ಮಾಂಗಲ್ಯಭಾಗ್ಯ ಕೋರಿ ಮದುವೆಯಾದ ಹೆಣ್ಣುಮಕ್ಕಳು 5 ವರ್ಷ ಈ ಪೂಜೆ ಆಚರಿಸುವರು.
ಶ್ರಾವಣ ಶನಿವಾರ – ಪ್ರತಿ ಶ್ರಾವಣ ಶನಿವಾರ ಕುಲದೇವತೆ ವೆಂಕಟರಮಣನ ವಾರವೆಂಬ ಪ್ರತೀತಿ ಇದೆ. ಅಂದು ಆ ಸ್ವಾಮಿಯನ್ನು ಪೂಜಿಸಿ ಪಡಿಯನ್ನು ಬೇಡುವ ಪದ್ಧತಿ ಕೆಲವರಲ್ಲಿ ಇದೆ. ಪಡಿಕೇಳುವವರಿಂದ ಅಹಂ, ಕೋಪತಾಪ ಕಡಿಮೆಯಾಗುವುದೆಂಬ ನಂಬಿಕೆ ನಮ್ಮ ಜನರಲ್ಲಿದೆ. ಇಂಥಹ ಅಮೂಲ್ಯ ಸಂದರ್ಭದಲ್ಲಿ ದೇವತೆಗಳ ವಿಶೇಷ ಪೂಜೆ, ಹೋಮ ಹವನ, ಧರ್ಮಚಿಂತನೆ, ಕಾರ್ಯಸಿದ್ಧಿಯ ಸಂಕಲ್ಪಗಳ ಮುಖಾಂತರ ಬದುಕಿನಲ್ಲಿ ಸೌಹಾರ್ದ, ಸಹಬಾಳ್ವೆ, ಸಾತ್ವಿಕ ಸಂಪನ್ನತೆ ನಮಗೆಲ್ಲ ತಂದು ಕೊಡುತ್ತದೆ. ಆದ್ದರಂದ ನಾವೆಲ್ಲ ಶುಭಶ್ರಾವಣಮಾಸ ಆಚರಣೆ ಮಾಡಿ ನಮ್ಮ ಜೀವನದಲ್ಲಿ ನೆಮ್ಮದಿ, ಸುಖಶಾಂತಿಯನ್ನು ಕಂಡುಕೊಳ್ಳೋಣ. ಎಲ್ಲರಿಗೂ ಶುಭವಾಗಲಿ.
-ಶ್ರೀಮತಿ ಗಿರಿಜಾ. ಎಸ್. ದೇಶಪಾಂಡೆ,ಬೆಂಗಳೂರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ