ಶುಕ್ರವಾರ, ಮಾರ್ಚ್ 11, 2016

ಹಾರುವ ತಟ್ಟೆ

 ಹಾರುವ ತಟ್ಟೆಗಳ ಒಂದು ಕಾಲ್ಪನಿಕ ಚಿತ್ರಆದಿ,ಅಂತ್ಯಗಳಾವುದೂ ಇಲ್ಲದ ಈ ಬ್ರಹ್ಮಾಂಡವೆಂಬುದು ಕಲ್ಪನಾತೀತವಾದುದು. ಈ ಅಖಂಡ ವಿಶ್ವದ ಯಾವುದೋ ಒಂದು ಕಡೆಯಲ್ಲಿ ಅಡಕವಾಗಿದೆ ಕ್ಷೀರ ಪಥ(Milky way)ವೆಂದು ಕರೆಯಲ್ಪಡುವ ನಮ್ಮ ಆಕಾಶ ಗಂಗೆ (Galaxy). ಈ ಆಕಾಶಗಂಗೆಯೇ ನಾವು ಊಹಿಸಲಾರದಷ್ಟು ವಿಸ್ತಾರವಾಗಿದೆ. ಅದರ ಯಾವುದೋ ಒಂದು ಬಿಂದುವಿನಲ್ಲಿ ನಮ್ಮ ಸೌರ ಮಂಡಲದ ಸದಸ್ಯರಾದ ಸೂರ್ಯ,ಭೂಮಿ ಮತ್ತಿತರ ಗ್ರಹಗಳಿವೆ. ಹೀಗೆ ಅನಂತಾನಂತವಾಗಿ ಹರಡಿರುವ ಈ ವಿಶ್ವದಲ್ಲಿ ಏನೇನಿವೆ ಏನೇನಿಲ್ಲ ಎಂಬುದು ಅಷ್ಟು ಸುಲಭವಾಗಿ ನಿರ್ಧರಿಸಲಾಗದ ವಿಷಯ.
   ವಿಶ್ವದ ಹೊಸ ಹೊಸ ವಿಷಯಗಳನ್ನರಿಯಲು ಮಾನವನು ನಿರಂತರ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾನೆ. ಈ ರೀತಿಯ ಸಂಶೋಧನೆಗಳಲ್ಲಿ ಹಲವಾರು ನೂತನವಾದ ಹಾಗೂ ವಿಸ್ಮಯಕಾರಿಯಾದ ಸಂಗತಿಗಳನ್ನು ಆತ ಕಂಡುಕೊಂಡಿದ್ದಾನೆ ಹಾಗೂ ಮಂಡಿಸಿದ್ದಾನೆ. ಎಲ್ಲ ಪ್ರತಿಪಾದನೆಗಳಿಗೂ ಸಾರ್ವತ್ರಿಕ ಒಪ್ಪಿಗೆ ಸಿಗದೇ ಇರಬಹುದು ಆದರೆ ಹೊಸ ಹೊಸ ಪ್ರತಿಪಾದನೆಗಳು ಬಂದಾಗಲೆಲ್ಲ ಅವು ಜನರಲ್ಲಿ ಹೊಸ ಕುತೂಹಲ ಹಾಗೂ ಸಂಚಲನವನ್ನಂತೂ ಸೃಷ್ಟಿಸಿವೆ. ಅಂತಹ ಒಂದು ಪ್ರಯತ್ನವೇ ಹಾರುವ ತಟ್ಟೆಗಳು ಅಥವಾFlying saucers.
   ಖಗೋಳ ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಹಾರುವ ತಟ್ಟೆಗಳು Unidentified Flying Objects (UFO) ಅಥವಾ ಅಪರಿಚಿತ ಹಾರಾಡುವ ವಸ್ತುಗಳು ಎಂಬ ಗುಂಪಿಗೆ ಸೇರತ್ತವೆ. ಇದುವರೆಗೂ ಗುರುತಿಸಲ್ಪಡದೇ ಇರುವಂಥಹ ವಿಸ್ಮಯಕಾರಿ ವಸ್ತುಗಳೆಲ್ಲವೂ ಇದೇ ಗುಂಪಿಗೆ ಸೇರುತ್ತವೆ. ಹಾಗಾಗಿ ಅಂತರಿಕ್ಷದಲ್ಲಿ ಹಾರಾಡಿದಂತೆ ಕಾಣುವ ವಿಸ್ಮಯಕಾರಿ ಅಪರಿಚಿತ ಆಕಾಶ ಕಾಯಗಳೇ ಹಾರುವ ತಟ್ಟೆಗಳು ಎಂಬುದಾಗಿ ವ್ಯಾಖ್ಯಾನಿಸಬಹುದು. ಭೂಮಿಯನ್ನು ಬಿಟ್ಟು ಜೀವಿಗಳನ್ನು ಹೊಂದಿರುವ ಗ್ರಹಗಳು ಈ ಬ್ರಹ್ಮಾಂಡದಲ್ಲಿ ಬೇರೆಲ್ಲೋ ಇದ್ದು ಅಲ್ಲಿಂದಲೇ ಈ ಹಾರಾಡುವ ವಸ್ತುಗಳು ಬರುತ್ತವೆ ಎಂದೂ ಸಹ ಹಲವರು ನಂಬುತ್ತಾರೆ. 
   ಈ ಹಾರುವ ತಟ್ಟೆಗಳ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಶತಮಾನಗಳಿಂದಲೂ ಈ ವಿಷಯದ ಮೇಲೆ ಚರ್ಚೆಗಳು ನಡೆಯುತ್ತಲೇ ಬಂದಿವೆ. 1947 ರಲ್ಲಿ ಅಮೇರಿಕದ ವಾಶಿಂಗ್ಟನ್ ನಗರದ ಕೆನತ್ ಆರ್ನಾಲ್ಡ್ ಎಂಬ ವ್ಯಕ್ತಿಯೋರ್ವನು ಖಾಸಗಿ ವಿಮಾನವೊಂದರಲ್ಲಿ ಪಯಣಿಸುತ್ತಿದ್ದಾಗ ವಿಚಿತ್ರವಾದ,ತಟ್ಟೆಯಂತಹ ಆಕೃತಿಯುಳ್ಳ ಸುಮಾರು 9 ವಸ್ತುಗಳು ಪರ್ವತಗಳ ಮೇಲಿನಿಂದ ಹಾದು ಹೋದವು, ಹಾಗೂ ಅವು ಅತ್ಯಂತ ವೇಗವಾಗಿ ಅಂದರೆ ಗಂಟೆಗೆ ಸುಮಾರು 2500 ಕಿ.ಮೀ, ಗೂ ಹೆಚ್ಹಿನ ವೇಗದಲ್ಲಿ ಚಲಿಸುತ್ತಿದ್ದವು ಎಂಬುಗಾಗಿ ವರದಿ ಮಾಡಿದನು. 
    ಅನ್ಯಗ್ರಹಗಳಿಂದ ಭೂಮಿಗೆ ಹಾರಿಬರುತ್ತಿರುತ್ತವೆ ಎನ್ನಲಾಗುವ `ಹಾರುವ ತಟ್ಟೆಗಳು' (ಯುಎಫ್ಓ - ಅನ್ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ಸ್) ನಿಜವಾಗಿಯೂ ಇವೆಯೆ?ಈ ಪ್ರಶ್ನೆಗೆ ಖಚಿತ ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ ಅವುಗಳನ್ನು ಕಂಡೆವು ಎಂದು  ಸಾವಿರಾರು ಜನರು ನೂರಾರು ವರ್ಷಗಳಿಂದ ಹೇಳಿದ್ದಾರೆ. ಅವುಗಳ ಫೋಟೋಗಳಿವೆ. ವೀಡಿಯೋಗಳಿವೆ. ಆದರೂ ಸರಕಾರಗಳು ಅಧೀಕೃತವಾಗಿ ಅವುಗಳ ಅಸ್ತಿತ್ವವನ್ನು ಖಚಿತಪಡಿಸಿಲ್ಲ.
     ಕೆಲವರು ಸುಳ್ಳು ಹೇಳಬಹುದು. ಕಂಪ್ಯೂಟರ್ ಚಮತ್ಕಾರಿ ಚಿತ್ರಗಳನ್ನು ತಮ್ಮ ಸುಳ್ಳಿಗೆ ಆಧಾರವಾಗಿ ನೀಡಬಹುದು. ಆದರೆ ಬಹಳ ಹಿಂದಿನಿಂದಲೂ ಹಾರುವ ತಟ್ಟೆಗಳ ಬಗ್ಗೆ ವರದಿಗಳಿವೆ. ಅನೇಕ ಚಿತ್ರಗಳು ಚಮತ್ಕಾರಿ ಚಿತ್ರಗಳಲ್ಲ ಎಂಬುದು ಸಾಬೀತಾಗಿದೆ. ಕೆಲವು ವರ್ಷಗಳ ಹಿಂದಷ್ಟೇ ನ್ಯೂಜಿಲ್ಯಾಂಡಿನಲ್ಲಿ ಒಂದು ಹಾರುವ ತಟ್ಟೆ ಕಾಣಿಸಿಕೊಂಡಿದೆ ಎಂದು ದೊಡ್ಡದಾಗಿ ವರದಿಯಾಗಿತ್ತು. ಅದರ ಫೋಟೋ ಸಹ ಪ್ರಕಟವಾಗಿತ್ತು. ಅದಾದ ನಂತರ ಬ್ರಿಟನ್ನ ಹಳ್ಳಿಗಾಡಿನಲ್ಲಿ ರಾತ್ರಿ ಆಕಾಶದಲ್ಲಿ ಐದು ಬೆಳಕಿನ ಚುಕ್ಕೆಗಳು ಒಂದೇ ಸಮನೆ ಹಾರಾಟ ನಡೆಸಿದ್ದನ್ನು ನೂರಾರು ಜನರು ನೋಡಿದ್ದಾಗಿ `ದಿ ಡೈಲಿ ಮೇಲ್' ವರದಿ ಮಾಡಿತ್ತು. ಈ ಬೆಳಕಿನ ಚುಕ್ಕಿಗಳು ಮಾನವ ನಿಮಿ೯ತ ವಸ್ತುಗಳೋ ಅಲ್ಲವೋ ಗೊತ್ತಿರಲಿಲ್ಲ. ಈ ಬಗ್ಗೆ `ಏರ್ ಟ್ರಾಫಿಕ್ ಕಂಟ್ರೋಲ್ ಸೆಂಟರ್' ಬಳಿ ಯಾವುದೇ ಮಾಹಿತಿ ಇರಲಿಲ್ಲ. 
    ಜನರು ನಿಜವಾಗಿಯೂ ಹಾರುವ ತಟ್ಟೆಗಳನ್ನು ನೋಡಿದ್ದಾರೆಯೆ ಎಂಬ ಬಗ್ಗೆ ಬ್ರಿಟಿಷ್ ರಕ್ಷಣಾ ಸಚಿವಾಲಯ ಹಿಂದಿನಿಂದಲೂ ವಿಚಾರಣೆ ನಡೆಸಿಕೊಂಡು ಬರುತ್ತಿದೆ. ಸಚಿವಾಲಯ ಹಾಗೂ ಜನರ ಸಂವಾದವಿರುವ ಫೈಲುಗಳನ್ನು (`ಎಕ್ಸ್-ಫೈಲ್ಸ್') ಅದು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಹಾರುವ ತಟ್ಟೆಗಳ ಬಗ್ಗೆ ಪ್ರತಿವರ್ಷ ಸಚಿವಾಲಯಕ್ಕೆ ಕನಿಷ್ಠ ನೂರು ವರದಿಗಳು ಬರುತ್ತವಂತೆ. ಅವುಗಳ ಸತ್ಯಾಂಶ ಎಷ್ಟು ಎಂದು ಸಚಿವಾಲಯ ಖಚಿತಪಡಿಸಿಲ್ಲ. ಹಿಂದೆ ಅಮೆರಿಕದ ಸೇನೆ ಸಹ ಈ ರೀತಿ ವಿಚಾರಣೆ (`ಪ್ರಾಜೆಕ್ಟ್ ಬ್ಲ್ಯೂಬುಕ್') ನಡೆಸಿತ್ತು. `ಹಾರುವ ತಟ್ಟೆಗಳೆಲ್ಲ ಕೇವಲ ಕಲ್ಪನೆ' ಎಂದು ವರದಿ ನೀಡಿತ್ತು. ಆದರೆ ಅದು ರಹಸ್ಯವಾಗಿ ತನ್ನ ತನಿಖೆ ಮುಂದುವರಿಸಿದೆ ಎನ್ನುವವರೂ ಇದ್ದಾರೆ.ಹಾರುವ ತಟ್ಟೆಗಳು ನಿಜವೋ ಸುಳ್ಳೋ ಗೊತ್ತಿಲ್ಲ. ಈ ಬಗ್ಗೆ ಯಾವುದನ್ನೂ ಖಚಿತವಾಗಿ ಸಾಬೀತು ಮಾಡಲಾಗಿಲ್ಲ. ಅದನ್ನು ನೋಡಿರುವುದಾಗಿ ಹೇಳುವ ಜನರಂತೂ ತಮ್ಮ ಮಾತು ನಿಜ ಎಂದು ವಾದಿಸುತ್ತಾರೆ.
   1947ನೆಯ ಜೂನ್ 24ರಂದು ಕೆನ್ನೆತ್ ಆರ್ನಾಲ್ಡ್ ಎಂಬ ವೈಮಾನಿಕನೊಬ್ಬನು ಹಾರಾಡುತ್ತಿದ್ದಾಗ ವಾಷಿಂಗ್‌ಟನ್ ಸ್ಟೇಟಿನ ಮೌಂಟ್ ರೇಯ್ನರ್ ಶಿಖರದ ಸುತ್ತಮುತ್ತಣ ಆಕಾಶದಲ್ಲಿ ಗಂಟೆಗೆ ಸಾವಿರ ಮೈಲಿ ವೇಗದಲ್ಲಿ ಹಾರಾಡಿ ಸುತ್ತುಹಾಕುತ್ತಿದ್ದ ಪ್ರಕಾಶಮಾನವಾದ ಚಕ್ರಕಾರದ ತಟ್ಟೆಗಳನ್ನು ಕಂಡನು. ಆ ಒಂದೊಂದು ತಟ್ಟೆಯೂ ಅವನಿಗೆ ಬೋರಲು ಹಾಕಿದ್ದ ಸಾಸರ್‌ಗಳಂತೆ ಕಾಣಿಸಿದ್ದರಿಂದ ಅವನು ಅವುಗಳನ್ನು ಸುದ್ದಿಪತ್ರಿಕೆಗಳಿಗೆ ವರ್ಣಿಸುವ ಫ್ಲೈಯಿಂಗ್ ಸಾಸರ್ಸ್(ಹಾರುವ ತಟ್ಟೆ) ಎಂದು ಹೆಸರು ಕೊಟ್ಟನು. ಅಂದಿನಿಂದ ಆ ಆಕಾಶದ ವಸ್ತುಗಳಿಗೆ ಹಾರುವ ತಟ್ಟೆಗಳು ಎಂಬ ಹೆಸರು ಪ್ರಚಲಿತವಾಯಿತು.
    ಅಮೆರಿಕಾದ ವೈಮಾನಿಕ ಪಡೆಯ ವಿಜ್ಞಾನಿಗಳು ಆ ಅಜ್ಞಾತ ಆಕಾಶವಸ್ತುಗಳಿಗೆ ಗೊತ್ತಿಲ್ಲದ ಹಾರಾಡುವ ವಸ್ತು (ಗೊ.ಹಾ.ವ) U.F.O. (ಯು.ಎಫ್.ಓ.) ಅಥವಾ Umodentified Flying Objects ಎಂದು ನಾಮಕರಣ ಮಾಡಿದ್ದಾರೆ.ಅಂದಿನಿಂದ ಈ ಆಕಾಶದ ಅನಿರ್ವಚನೀಯ ವ್ಯಾಪಾರವನ್ನು ಹತ್ತಲ್ಲ, ನೂರಲ್ಲ, ಸಾವಿರವಲ್ಲ, ಲಕ್ಷಾಂತರ ಜನರು-ಸಾಮಾನ್ಯರು, ತಜ್ಞರು, ಇಂಜಿನಿಯರುಗಳು, ವಿಜ್ಞಾನಿಗಳು, ರಕ್ಷಣಾ ದಳದವರು, ಪ್ರೊಫೆಸರುಗಳು, ಪಾದ್ರಿಗಳು, ಗುಂಪುಗುಂಪಾಗಿ, ಒಬ್ಬೊಬ್ಬರಾಗಿ, ಆಕಸ್ಮಾತ್ತಾಗಿ, ಅದೇ ಪರೀಕ್ಷಾರ್ಥಿವಾಗಿ-ನೋಡಿದ್ದಾರೆ. ಅನೇಕ ಸಚಿತ್ರವಾದ ಪುಸ್ತಕಗಳನ್ನೂ ಬರೆದಿದ್ದಾರೆ. ಕೆಲವರು ಟೆಲಿಸ್ಕೋಪ್‌ಗಳನ್ನು ಉಪಯೋಗಿಸಿ ಫೋಟೊ ಗಳನ್ನೂ ತೆಗೆದಿದ್ದಾರೆ. ಕೆಲವರು ಭೂಮಿಗಿಳಿದ ಹಾರುವ ತಟ್ಟೆಗಳನ್ನು ಸಮೀಪಿಸಿ, ಅದರೊಳಗಿದ್ದವರನ್ನು ಕಂಡೆವು ಎಂದೂ ಹೇಳಿದ್ದಾರೆ. ಮತ್ತೆ ಕೆಲವರು ಆ ಹಾರುವ ತಟ್ಟೆಗಳಿಂದ ಹೊರಗಿಳಿದು ಬಂದ ವಿಚಿತ್ರ ಉಡುಪು ಧರಿಸಿದ ಮನುಷ್ಯರಂತೆಯೆ ಇರುವ ವ್ಯಕ್ತಿಗಳ ಫೋಟೊ ತೆಗೆದುಕೊಂಡು, ಅವರೊಡನೆ ಒಂದು ರೀತಿಯ ಸಂವಾದವನ್ನೂ ನಡೆಸಿ, ಆ ಚಿತ್ರಗಳನ್ನೂ ಸಂವಾದ ಸ್ವರೂಪವನ್ನೂ ಒಳಗೊಂಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಷ್ಟಾದರೂ ಇದುವರೆಗೂ ಆ ಗೊ.ಹಾ. ವಸ್ತುಗಳಲ್ಲಿರುವವರು ಯಾರು? ಎಲ್ಲಿಂದ ಬಂದವರು? ಏಕೆ ಬರುತ್ತಿದ್ದಾರೆ? ಏಕೆ ಮನುಷ್ಯನಾಗರಿಕತೆಯೊಡನೆ ಸಂಬಂಧ ಕಲ್ಪಿಸಿಕೊಳ್ಳದೆ ಹೋಗುತ್ತಿದ್ದಾರೆ? ಎಂಬ ವಿಚಾರವಾಗಿ ಯಾರೂ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. 
    ಮೊದಮೊದಲು ಅವರು ನಮ್ಮ ಈ ಸೌರವ್ಯೂಹದ ಬೇರೆ ಗ್ರಹಗಳಿಂದ-ಚಂದ್ರನಿಂದ, ಶುಕ್ರನಿಂದ, ಮಂಗಳನಿಂದ ಇತ್ಯಾದಿ-ಬರುತ್ತಿದ್ದಾರೆ ಎಂದು ಊಹಿಸಿದ್ದರು. ಆದರೆ ಮನುಷ್ಯನೇ ಚಂದ್ರನ ಮೇಲೆ ಕಾಲಿಟ್ಟ ಮೇಲೆ ಮತ್ತು ಮಾನವ ಯಂತ್ರಗಳಲ್ಲಿರುವ ಚಿತ್ರಗ್ರಹಣದ ಸಾಮರ್ಥ್ಯದ ಉಪಕರಣಗಳೇ ಶುಕ್ರ, ಮಂಗಳ, ಗುರು, ಶನಿ ಇತ್ಯಾದಿ ಗ್ರಹಗಳ ಬಳಿಸಾರಿ ಜ್ಞಾನ ಸಂಪಾದಿಸಿದ ಮೇಲೆ ಆ ಫ್ಲೈಯಿಂಗ್‌ಸಾಸರ್‌ನವರು ನಮ್ಮ ಸೌರವ್ಯೂಹದಿಂದ ಬರುತ್ತಿಲ್ಲ. ಸೌರವ್ಯೂಹಾತೀತವಾದ ಬಹುದೂರದ ನಕ್ಷತ್ರಗಳಲ್ಲಿರಬಹುದಾದ ಗ್ರಹಗಳಿಂದ ಬರುತ್ತಿರಬಹುದು ಎಂದು ಊಹಿಸುತ್ತಿದ್ದಾರೆ. ಆದರೆ ಅತ್ಯಂತ ಹತ್ತಿರದ ನಕ್ಷತ್ರವೂ ನಮಗೆ ಒಂಭತ್ತು ಹತ್ತು ಬೆಳಕಿನ ವರ್ಷಗಳ ದೂರದಲ್ಲಿ, ಎಂದರೆ ಕೋಟಿ ಕೋಟಿ ಕೋಟಿ ದಶದಶದಶ ಲಕ್ಷಾಂತರ ಮೈಲಿಗಳ ದೂರದಲ್ಲಿ-ಇವೆ ಎಂಬುದನ್ನು ತಿಳಿದಾಗ, ನಮ್ಮಂತೆಯೆ ಇರಬಹುದಾದ ಆ ಜೀವಿಗಳು ಅಷ್ಟು ತಲೆತಿರುಗಿಸುವಷ್ಟು ದೂರದಿಂದ ಹಾರುವ ತಟ್ಟೆಗಳಲ್ಲಿ ಹೇಗೆ ಪ್ರಯಾಣ ಮಾಡುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲವಾಗಿದೆ. 
    ಹಾಗಾಗಿ, ವಿಜ್ಞಾನ ಇಷ್ಟು ಮುಂದುವರಿದಿರುವ ಈ ಇಪ್ಪತ್ತನೆಯ ಶತಮಾನದ ಯುಗದಲ್ಲಿಯೂ ಈ ಹಾರುವ ತಟ್ಟೆಗಳ  ಸಮಸ್ಯೆ ಅತ್ಯಂತ ಬಿಡಿಸಲಾಗದ ನಿಗೂಢ ರಹಸ್ಯವಾಗಿಯೆ ಉಳಿದು ವಿಜ್ಞಾನಿಗಳ ತಲೆ ತಿನ್ನುತ್ತಿದೆ. ತಲೆ ಕೆಡಿಸುತ್ತಿದೆ. 
    ಈ ಹಾರುವ ತಟ್ಟೆ ಎಂದು ಕರೆಯಿಸಿಕೊಳ್ಳುತ್ತಿರುವ ಆಕಾಶಕಾಯ ವ್ಯಾಪಾರಗಳು ನಮ್ಮ ಭೂಮಿಯ ಮೇಲೆ ಎಷ್ಟೋ ಶತಶತಮಾನಗಳಿಂದಲೂ ತರತರದ ರೂಪದಲ್ಲಿ ನಡೆಯುತ್ತಲೆ ಇವೆ.
              (ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ