ಮಂಗಳವಾರ, ಜನವರಿ 17, 2017

ಉಪವಾಸವನ್ನು ಏಕಾದಶಿಯಂದೇ ಏಕೆ ಮಾಡಬೇಕು?

 ಉಪವಾಸವನ್ನು ಏಕಾದಶಿಯಂದೇ ಏಕೆ ಮಾಡಬೇಕು? ದ್ವಾದಶಿ, ಪಂಚಮಿ, ಪಾಢ್ಯ ಏಕಾಗಬಾರದು? ಈ ಪ್ರಶ್ನೆಗೂ ವೈಜ್ಞಾನಿಕ ತಳಹದಿಯಲ್ಲಿ ನೀಡಿರುವ ಉತ್ತರ.*
  ಖಗೋಳ ಶಾಸ್ತ್ರದ ಪ್ರಕಾರ ಚಂದ್ರನು ಭೂಮಿಯ ಸುತ್ತ ಸುತ್ತುವಾಗ 24 ಗಂಟೆಗಳ ಅವಧಿಯ ಅಂತರದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಇದನ್ನೇ ಒಂದು ತಿಥಿ ಎನ್ನುವುದು. ಹೀಗೆ ಪೂರ್ಣಿಮೆ ಅಥವಾ ಅಮಾವಾಸ್ಯೆಯ ದಿನದಿಂದ ದಶಮಿ (10ನೇ ದಿನದ) ಹೊತ್ತಿಗೆ 120 ಡಿಗ್ರಿಗಳಷ್ಟು ಚಂದ್ರ ಸಂಚರಿಸಿರುತ್ತಾನೆ. ಅಂದರೆ ಏಕಾದಶಿಯ ಹೊತ್ತಿಗೆ ಚಂದ್ರನು 120 ಡಿಗ್ರಿಗೆ ಬಂದು 132 ಡಿಗ್ರಿ ಕೋನದಲ್ಲಿರುತ್ತಾನೆ. ಆಹೊತ್ತಿನಲ್ಲಿ ಭೂಮಿಯ ಮೇಲೆ ಚಂದ್ರನ ಆಕರ್ಷಣೆ ಹೆಚ್ಚು.
   ಈ ಅವಧಿಯಲ್ಲಿ ಚಂದ್ರನ ಆಕರ್ಷಣೆಯ ಪ್ರಭಾವ ಭೂಮಿಯ ಮೇಲೂ, ಜಲವರ್ಗಗಳ ಮೇಲೂ ಹೆಚ್ಚಾಗಿ ಉಂಟಾಗಿರುತ್ತದೆ. ಚಂದ್ರನು ಈ ಅವಧಿಯಲ್ಲಿ ಜಲ, ನೆಲ, ಗಾಳಿ, ಬೆಂಕಿ, ಆಕಾಶ ಎಂಬ ಪಂಚಭೂತಗಳಿಂದ ಆದ ಮಾನವನ ಶರೀರದ ಮೇಲೂ ಪರಿಣಾಮ ಉಂಟು ಮಾಡುತ್ತಾನೆ. ಮಾನವನ ಜೀರ್ಣಾಂಗಗಳು ಈ ಅವಧಿಯಲ್ಲಿ ಪ್ರಭಾವಕ್ಕೊಳಗಾಗಿರುತ್ತವೆ.
   ಹೀಗಾಗಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಮಾನವನ ಆರೋಗ್ಯ ಸಮೃದ್ಧಿಯಾಗಿರುತ್ತದೆ. ಅಂದು ಊಟ ಮಾಡುವುದರಿಂದ ಚಂದ್ರ ಪ್ರಭಾವಕ್ಕೆ ಒಳಗಾದ ಜೀರ್ಣಾಂಗಗಳಿಂದಾಗಿ ಅಜೀರ್ಣ ಸಂಬಂಧಿತ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ ಅವರು.
   ಹುಣ್ಣಿಮೆಯ ದಿನ ಚಂದ್ರನ ಆಕರ್ಷಣೆಗೆ ಸಾಗರದಲ್ಲಿ ಅಲ್ಲಕಲ್ಲೋಲಗಳುಂಟಾಗಿ, ಉಬ್ಬರದ ಅಲೆಗಳು ಮೂಡುವುದನ್ನು ನೀವು ಒಪ್ಪುವುದಾದರೆ, ಜೀರ್ಣಾಂಗಗಳ ಮೇಲೂ ಚಂದ್ರ ಪ್ರಭಾವ ಇರುತ್ತದೆ ಎಂಬುದನ್ನು ಒಪ್ಪಲೇ ಬೇಕು ಎನ್ನುತ್ತಾರೆ ಅವರು. ಏಕಾದಶಿಯ ದಿನ ಉಪವಾಸ ಮಾಡುವುದರಿಂದ, ನಿದ್ರೆ ಕಡಿಮೆ ಆಗುತ್ತದೆ. (ಹಸಿದಾಗ ನಿದ್ದೆ ಬಾರದು ಎಂಬುದು ಸಾಬೀತಾಗಿರುವ ಸಿದ್ಧಾಂತ) ಜಾಗರಣೆ, ಉಪವಾಸ ಈ ಎರಡರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಈ ಅತಿ ಉಷ್ಣದಿಂದ ದೇಹದಲ್ಲಿರುವ ರೋಗಾಣುಗಳು (ವೈರಸ್‌ - ಬ್ಯಾಕ್ಟೀರಿಯಾ) ಸಾವನ್ನಪ್ಪಿ. ಆರೋಗ್ಯ ವರ್ಧಿಸುತ್ತದೆ ಎಂಬುದು ಅವರ ವಿಶ್ಲೇಷಣೆ.
   ಪಾರಣೆಯ ವಿಶೇಷ : ಇದಾದ ನಂತರ ದ್ವಾದಶಿಯಂದು ಮಾಡುವ ಪಾರಣೆಯಲ್ಲಿ ಹೆಸರು ಬೇಳೆ ಪಾಯಸ ಮಾಡುತ್ತಾರೆ. ಇದು ಹಿಂದಿನ ದಿನ ಶರೀರದಲ್ಲಿ ಉತ್ಪತ್ತಿಯಾದ ಉಷ್ಣವನ್ನು ಶಮನ ಮಾಡುತ್ತದಂತೆ. ಅಗಸೆ ಸೊಪ್ಪಂತೂ ಇನ್ನೂ ಉತ್ತಮ ಆರೋಗ್ಯ ನೀಡುತ್ತದಂತೆ. ಅಗಸೆ ಸೊಪ್ಪು ಅಲೋಪತಿಯ ಆ್ಯಂಟಿ ಬಯೋಟಿಕ್‌ ರೀತಿಯಲ್ಲಿ ವರ್ತಿಸುತ್ತದೆ ಎನ್ನುತ್ತಾರೆ ಅಳಲೆಕಾಯಿ ಪಂಡಿತರು.
   ನೀವು ಈ ಸಿದ್ಧಾಂತವನ್ನು ಒಪ್ಪುವುದಾದರೆ ಏಕಾದಶಿಯಂದು ಉಪವಾಸ ಮಾಡಿ. ಇದೊಂದು ಕಾಗಕ್ಕ ಗುಬ್ಬಕ್ಕನ ಕಥೆ ಎಂದು ನೀವೆನ್ನುವುದಾದರೆ, ಓದಿ ಮರೆತುಬಿಡಿ. ಇಲ್ಲವೇ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಶೋಧನಗೆ ಸಿದ್ಧರಾಗಿ.*
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ