ಮಂಗಳವಾರ, ಜನವರಿ 17, 2017

ನೈವೇದ್ಯವನ್ನು ತಿನ್ನುವನೇನು?

ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು? ಇದು ನಂಬಿಕೆಯಿಲ್ಲದವರ ಪ್ರಶ್ನೆ.  ಇದಕ್ಕೆ ಒಂದು ಕತೆಯ ಮೂಲಕ ವಿವರಣೆ. 
ಒಬ್ಬ ಗುರು ಮತ್ತು  ಶಿಷ್ಯರ ಸಂವಾದ ಹೀಗೆ ನಡೆದಿತ್ತು. ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ. 
   ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ  ತಯಾರಾಗಲು ಆದೇಶಿಸಿದರು.  ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ' ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು.   
   ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ  ಕಂಠಸ್ಥ ಹೇಳಿ, ಒಪ್ಪಿಸಿದ.  
   ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ  ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ. 
   " ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು  " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು.  
   ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.   
  "ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. 

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ