ಗುರುವಾರ, ಜುಲೈ 21, 2016

ಮಂಗಲ್ ಪಾಂಡೆ


ಈ ಹೆಸರು ಕೇಳಿದ ಕೂಡಲೇ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಏನೂ ಒಂದು ರೀತಿ ಸಂಚಲನ ಮೂಡುತ್ತದೆ.
ಇಂದು (ಜುಲೈ 19) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ವೀರ ಸೇನಾನಿ 'ಮಂಗಲ್ ಪಾಂಡೆ' ಅವರ ಜನುಮದಿನ.
ಮಂಗಲ್ ಪಾಂಡೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ, ನಾಗವ ಹಳ್ಳಿಯ ಬಡ ಬ್ರಾಹ್ಮಣ ಕುಟುಂಬವೊಂದರಲ್ಲಿ ದಿವಾಕರ್ ಪಾಂಡೆ ಹಾಗೂ ಅಭಯ್ ರಾಣಿ ಪಾಂಡೆಯವರ ಮಗನಾಗಿ 19 ನೇ ಜುಲೈ 1827ರಂದು ಜನಿಸಿದರು.
ಮಂಗಲ್ ಪಾಂಡೆ ಇನ್ನೂ ಮೂರು ವರ್ಷದ ಮಗುವಾಗಿದ್ದಾಗಲೇ ಅಂದಿನ ಬರಗಾಲದ ಪರಿಣಾಮವಾಗಿ ಕೃಷಿಯನ್ನೇ ಅವಲಂಬಿಸಿದ್ದ ಅವರ ತಂದೆ ದಿವಾಕರ್ ಪಾಂಡೆ ನಿಧನರಾದರು. ಕಷ್ಟಪಟ್ಟು ಬೆಳೆದ ಮಂಗಲ್ ಪಾಂಡೆ  ತಮ್ಮ 22 ನೇ ವಯಸ್ಸಿನಲ್ಲಿ(1849ರಲ್ಲಿ) ಈಸ್ಟ್ ಇಂಡಿಯಾ ಕಂಪನಿಯ ಸೇವೆಗೆ ಸೇರಿದರು.
ಅ ದಿನಗಳಲ್ಲಿ  ಬ್ರಿಟಿಷ್ ಸೇನೆಯಲ್ಲಿದ್ದ ಸೇವೆ ಸಲ್ಲಿಸುತ್ತಿದ್ದ ಭಾರತದ ಸಿಪಾಯಿಗಳನ್ನು ಅಗೌರವದಿಂದ ಕಾಣಲಾಗುತ್ತಿತ್ತು. ಬ್ರಿಟಿಷ್ ಸಿಪಾಯಿಗಳಿಗೆ ಹೋಲಿಸಿದರೆ ಭಾರತೀಯ ಸಿಪಾಯಿಗಳಿಗೆ ಸಿಗುತ್ತಿದ್ದ ಸಂಬಳವೂ ಕಡಿಮೆ ಎಂದು ಹೇಳಲಾಗುತ್ತದೆ. ಯುದ್ಧಗಳಲ್ಲಿ ಹೋರಾಡಲು ಭಾರತದಿಂದ ಬೇರೆ ಕಡೆಗೂ ಹೋಗಬೇಕಿತ್ತು. ಹಣೆಗೆ ತಿಲಕ ಇಟ್ಟುಕೊಳ್ಳುವುದು, ಗಡ್ಡ-ಮೀಸೆ ಬೆಳೆಸುವುದು ಕೂಡ ನಿಷಿದ್ಧವಾಗಿತ್ತು.ಕೊನೆಗೆ ಭಾರತದ ಸಿಪಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿ ಅವರೆಲ್ಲ ದಂಗೆ ಎದ್ದರು.
1857 ರ ಮಾರ್ಚ 29 ರಂದು ಬಂದೂಕನ್ನು ಕೈಗೆತ್ತಿಕೊಂಡು ಕವಾಯತು ಮೈದಾನಕ್ಕೆ ನುಗ್ಗಿ ತನ್ನ ಸೊದರ ಸಿಪಾಯಿಗಳಿಗೆ “ನಿಮ್ಮ ಧರ್ಮದ ಮೇಲಾಣೆ! ಬನ್ನಿ ವಂಚಕ ಶತ್ರುಗಳ ಮೇಲೆ ಧೈರ್ಯಗೆಡದೆ ಆಕ್ರಮಣ ಮಾಡೋಣ, ನಮ್ಮ ನಾಡಿನ ಸ್ವಾತಂತ್ರ್ಯವನ್ನು ಗಳಿಸೋಣ. ಎಂದು ಮೊದಲಿಗೆ ಕರೆಕೊಟ್ಟವರೇ ಈ ಮಂಗಲ್ ಪಾಂಡೆ.ಅಷ್ಟೇ ಅಲ್ಲ ಬ್ರಿಟಿಷ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದರು. ಅಲ್ಲಿ ಬಹಳಷ್ಟು ಅಚ್ಚರಿ ಬೆಳವಣಿಗೆಗಳು ನಡೆದವು ಆ ನಂತರದಲ್ಲಿ ಬ್ರಿಟಿಷರಿಗೆ ತಲೆಬಾಗಬಾರದೆಂಬ ಉದ್ದೇಶದಿಂದ ಸ್ವತಃ ಗುಂಡು ಹಾರಿಸಿಕೊಳ್ಳಲು ಯತ್ನಿಸಿದ ಅವರ ಪ್ರಯತ್ನ ವಿಫಲಗೊಂಡಿತು.ಗಾಯಗೊಂಡು ನೆಲಕ್ಕುರುಳಿದ ಮಂಗಲ್ ಪಾಂಡೆಯನ್ನು ಆಸ್ಪತ್ರೆಗೆ ಕರೆ ತರಲಾಯಿತು. ಗಾಯದಿಂದ ಚೇತರಿಸಿಕೊಂಡ ಮಂಗಲ್ ಪಾಂಡೆಯನ್ನು  ವಿಚಾರಣೆಗೊಳಪಡಿಸಲಾಯಿತು. ವಿಚಾರಣೆವೇಳೆ ಕ್ರಾಂತಿಯ ಸೂತ್ರಧಾರಿಗಳ, ಸಹಕಾರಿಗಳ ಹೆಸರುಗಳನ್ನು ತಿಳಸುವಂತೆ ಎಷ್ಟೇ ಬಲವಂತ ಪಡಿಸಿದರು, ಮಂಗಲ್ ಪಾಂಡೆ ಯಾರ ಹೆಸರನ್ನು ಹೇಳಲೇ ಇಲ್ಲ.ಕೊನೆಗೆ ನ್ಯಾಯಾಲಯದ ತೀರ್ಪಿನಂತೆ ಏಪ್ರಿಲ್ 8 ರಂದು ಮಂಗಲ್ ಪಾಂಡೆಯನ್ನು ಗಲ್ಲಿಗೇರಿಸುವಂತೆ ಆದೇಶಿಸಿತು. ಆದರೆ ಇಡೀ  ಊರಿನಲ್ಲಿ ಯಾರು ಮಂಗಲ್ ಪಾಂಡೆಯನ್ನು ನೇಣಿಗೆ ಹಾಕಲು ತಯಾರಿಲ್ಲದ ಕಾರಣಕ್ಕೆ ಕಲ್ಕತ್ತಾದಿಂದ ನಾಲ್ವರು ನೇಣುಹಾಕುವವರನ್ನು ಕರೆಯಿಸಿ, ಏಪ್ರಿಲ್ 8ರಂದು ಬೆಳಗಿನ ಸಮಯದಲ್ಲಿ ಮಂಗಲ್ ಪಾಂಡೆಯನ್ನು ಗಲ್ಲಿಗೇರಿಸಲಾಯಿತು.
ನಂತರ ಅಮರ ಹುತಾತ್ಮರ ಪಂಕ್ತಿಗೆ ಸೇರಿಬಿಟ್ಟರು ಮಂಗಲ್ ಪಾಂಡೆ ಮತ್ತು ಆತನ ಚೇತನ ಮಿಂಚಿನ ರೀತಿಯಲ್ಲಿ ಇಡೀ ದೇಶದ ತುಂಬಾ ಹಬ್ಬಿಕೊಂಡಿತು,ಅದು ಎಷ್ಟರಮಟ್ಟಿಗೆ ಎಂದರೆ ಮೇ 10, 1857ರಂದು ಮೀರತ್‌ನಲ್ಲಿದ್ದ ಬಂಗಾಲ ತುಕಡಿಯಲ್ಲಿನ ಭಾರತದ ಸಿಪಾಯಿಗಳೆಲ್ಲಾ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಬ್ರಿಟಿಷ್ ಅಧಿಕಾರಿಗಳ ಆದೇಶವನ್ನು ಸಾಮೂಹಿಕವಾಗಿ ಧಿಕ್ಕರಿಸಿ ಎಲ್ಲರೂ ದೆಹಲಿಯಲ್ಲಿ ಕವಾಯತು ಹೊರಟರು. ವಿವಿಧ ಪ್ರಾಂತ್ಯಗಳ ಸಿಪಾಯಿಗಳೂ ಅವರನ್ನು ಸೇರಿಕೊಳ್ಳತೊಡಗಿದರೆಂದರೆ  ತಿಳಿಯುತ್ತದೆ ಮಂಗಲ್ ಪಾಂಡೆಯ ಕರೆ ಎಷ್ಟರಮಟ್ಟಿಗೆ ಬದಲಾವಣೆಯ ಗಾಳಿ ಬೀಸಿತು ಎಂದು.
ವಿವಿಧ ಪ್ರಾಂತ್ಯದ ಸಿಪಾಯಿಗಳಾದ ನಾನಾಸಾಹೇಬ್ ಪೇಶ್ವೆ, ತಾತ್ಯಾ ಟೋಪೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬಿಹಾರದ ಕುನ್ವರ್‌ಸಿಂಗ್ ಹಾಗೂ ಇನ್ನೂ ಹಲವರು ವಿವಿಧ ಪ್ರಾಂತ್ಯಗಳಲ್ಲಿ ದಂಗೆಯ ನೇತೃತ್ವ ವಹಿಸಿಕೊಂಡಿದ್ದರು. ಉತ್ತರ ಪ್ರದೇಶದ ಬಹುತೇಕ ಹಳ್ಳಿಗಳು, ಪಟ್ಟಣಗಳು ದಂಗೆಯಲ್ಲಿ ಪಾಲ್ಗೊಂಡವು. ಬಂಗಾಲದಿಂದ ಬಿಹಾರ, ಒರಿಸ್ಸಾಗೂ ಸಮರದ ಜ್ವಾಲೆಗಳು ಹಬ್ಬಿದವು. ಔರಂಗಾಬಾದ್, ಕೊಲ್ಹಾಪುರ, ಸತಾರಾ ಹಾಗೂ ನಾಗ್ಪುರಗಳಲ್ಲೂ ಸಿಪಾಯಿಗಳು ದಂಗೆ ಎದ್ದರು.
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ  ಈ ಮಹಾನ್ ಚೇತನಕ್ಕೆ ಕೊನೆಯ ಪಕ್ಷ ಅವರ ಜನುಮ ದಿನದಂದು ನೆನಪಿಸಿಕೊಳ್ಳವುದು ಹಾಗೂ ಇಂತಹ ಮಹಾನ್ ಪುರುಷರ ಬಗ್ಗೆ ಮಕ್ಕಳಿಗೆ ತಿಳಿಸುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ ಅಲ್ವೇ ಸ್ನೇಹಿತರೇ ??
#ಜೈಭಾರತಮಾತೆ
ಸಾದ್ಯವಾದಲ್ಲಿ ಈ ಲೇಖನವನ್ನು ಶೇರ್ ಮಾಡಿ, ಮಂಗಲ್b ಪಾಂಡೆಯವರ ಬಗ್ಗೆ ತಿಳುವಳಿಕೆ ಇಲ್ಲದವರಿಗೆ ಸ್ವಲ್ಪ ತಿಳಿಸುವ ಪ್ರಯತ್ನ ಮಾಡೋಣ.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ