ಬುಧವಾರ, ಜೂನ್ 15, 2016

ವಟ ಸಾವಿತ್ರಿ ವೃತ

ಎಲ್ಲ ಪವಿತ್ರ ವೃಕ್ಷಗಳ ತುಲನೆಯಲ್ಲಿ ವಟವೃಕ್ಷದ ಆಯುಷ್ಯವು ಹೆಚ್ಚಿನದ್ದಾಗಿದ್ದು ಅದರ ವಿಸ್ತಾರವೂ ಹೆಚ್ಚಿರುತ್ತದೆ. ಸ್ತ್ರೀಯರು ಇಂತಹ ವಟವೃಕ್ಷದ ಪೂಜೆಯನ್ನು ಮಾಡಿ ’ನನಗೆ ಹಾಗೂ ನನ್ನ ಪತಿಗೆ ಆರೋಗ್ಯ ಸಂಪನ್ನ ದೀರ್ಘಾಯುಷ್ಯ ಲಭಿಸಲಿ, ಧನಧಾನ್ಯ ಹಾಗೂ ಮಕ್ಕಳು – ಬಂಧು ಬಳಗದಿಂದ ನನ್ನ ಪ್ರಪಂಚವು ಸವಿಸ್ತಾರ ಹಾಗೂ ಸಂಪನ್ನವಾಗಲಿ’ ಎಂದು ಜ್ಯೇಷ್ಠ ಹುಣ್ಣಿಮೆ ದಿನ ಪ್ರಾರ್ಥನೆಯನ್ನು ಮಾಡುತ್ತಾರೆ.
ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ಮಾಡಿದಳು. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಈ ಚರ್ಚೆಯು ವಟ ವೃಕ್ಷದ (ಆಲದಮರ) ಕೆಳಗೆ ಆದುದರಿಂದ ವಟವೃಕ್ಷಕ್ಕೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು. ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವು ಹೆಚ್ಚಾಗಲಿ ಎಂದು ಸ್ತ್ರೀಯರು ಈ ವ್ರತವನ್ನು ಆರಂಭಿಸಿದರು.ಸಾವಿತ್ರಿಯೊಂದಿಗೆ ಬ್ರಹ್ಮನು ಈ ವ್ರತದ ಮುಖ್ಯ ದೇವತೆಯಾಗಿದ್ದಾನೆ.
ವಟವೃಕ್ಷವು ಶಿವರೂಪಿಯಾಗಿದೆ. ಶಿವರೂಪಿ ವಟವೃಕ್ಷದ ಪೂಜೆ ಮಾಡುವುದು, ಅಂದರೆ ವಟವೃಕ್ಷದ ಮಾಧ್ಯಮದಿಂದ ಒಂದು ರೀತಿಯಲ್ಲಿ ಶಿವರೂಪಿ ಪತಿಯನ್ನೇ ಸ್ಮರಿಸಿ, ಅವನ ಆಯುಷ್ಯವನ್ನು ಹೆಚ್ಚಿಸಿ ಅವನಿಂದ ಆಯುಷ್ಯದಲ್ಲಿ ಬರುವ ಪ್ರತಿಯೊಂದು ಕರ್ಮಕ್ಕೆ ಜೊತೆ ಸಿಗಲೆಂದು ಈಶ್ವರನನ್ನು ಪೂಜಿಸುವುದಾಗಿದೆ. ಕರ್ಮಕ್ಕೆ ಶಿವನ ಜೊತೆಯಿದ್ದಲ್ಲಿ, ಶಕ್ತಿ ಮತ್ತು ಶಿವ ಇವರ ಸಂಯುಕ್ತ ಕ್ರಿಯೆಯಿಂದ ವ್ಯವಹಾರದಲ್ಲಿನ ಕರ್ಮವು ಸಾಧನೆಯಾಗಿ ಅದರಿಂದ ಜೀವಕ್ಕೆ ಲಾಭವಾಗುತ್ತದೆ.
    ವಟವೃಕ್ಷದ ಮೇಲಿನ ಬಿರುಕಿನಲ್ಲಿ ಇರುವ ಸುಪ್ತ ಲಹರಿಗಳು ಶಿವತತ್ತ್ವವನ್ನು ಆಕರ್ಷಿಸಿ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ. ವಟವೃಕ್ಷಕ್ಕೆ ಹತ್ತಿಯ ದಾರದಿಂದ ಸುತ್ತುವಾಗ ಜೀವದ ಭಾವಕ್ಕೆ ಅನುಗುಣವಾಗಿ ಮರದಲ್ಲಿನ ಶಿವತತ್ತ್ವಕ್ಕೆ ಸಂಬಂಧಿತ ಲಹರಿಗಳು ಕಾರ್ಯ ನಿರತವಾಗಿ ಆಕಾರ ಪಡೆಯುತ್ತವೆ. ಜೀವಕ್ಕೆ ಹತ್ತಿಯ ದಾರದಲ್ಲಿನ ಪೃಥ್ವಿ ಮತ್ತು ಜಲ ತತ್ತ್ವಗಳ ಸಂಯೋಗದಿಂದ ಈ ಲಹರಿಗಳನ್ನು ಗ್ರಹಿಸಲು ಸುಲಭವಾಗುತ್ತವೆ.
    ಪ್ರಳಯವಾದರೂ ವಟವೃಕ್ಷವು ಇದ್ದೇ ಇರುತ್ತದೆ. ಅದು ಯುಗಾಂತ್ಯದ ಸಂಗಾತಿಯಾಗಿದೆ. ಬಾಲ ಮುಕುಂದನು ಪ್ರಳಯಕಾಲದಲ್ಲಿ ವಟದ ಎಲೆಯ ಮೇಲೆ ಮಲಗಿದ್ದನು.ಪ್ರಯಾಗದ ಅಕ್ಷಯ ವಟದ ಕೆಳಗೆ ರಾಮ, ಲಕ್ಷ್ಮಣ ಮತ್ತು ಸೀತೆಯರು ವಿಶ್ರಮಿಸಿದ್ದರು. ವಟವೃಕ್ಷವು ಬ್ರಹ್ಮ, ಶ್ರೀವಿಷ್ಣು, ಮಹೇಶ, ನೃಸಿಂಹ, ನೀಲ ಮತ್ತು ಮಾಧವರ ನಿವಾಸಸ್ಥಾನವಾಗಿದೆ.ವಟ, ಅಶ್ವತ್ಥ, ಅತ್ತಿ ಮತ್ತು ಶಮಿ (ಬನ್ನಿ) ಇವು ಪವಿತ್ರ ಮತ್ತು ಯಜ್ಞ ವೃಕ್ಷಗಳಾಗಿವೆ ಎಂದು ಹೇಳಲಾಗಿದೆ. ಇವೆಲ್ಲ ವೃಕ್ಷಗಳಲ್ಲಿ ವಟವೃಕ್ಷದ ಆಯುಷ್ಯವು ಅತ್ಯಧಿಕವಾಗಿದ್ದು ಕೊಂಬೆಗಳಿಂದ ನೆಲದ ವರೆಗೆ ಬರುವ ಬೇರುಗಳಿಂದ ಇದು ತುಂಬಾ ವಿಸ್ತಾರವಾಗುತ್ತದೆ.ಅದಕ್ಕೆ ಬೋಧಿವೃಕ್ಷವನ್ನು ಪೂಜಿಸಿ ಅಖಂಡ ಸೌಭಾಗ್ಯವತಿಯಾಗಲು ಆಶೀವಾ೯ದ ಬೇಡುತ್ತಾರೆ.
      -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ