ಬುಧವಾರ, ಜೂನ್ 15, 2016

ವಟ ಸಾವಿತ್ರಿ ವೃತ

ಎಲ್ಲ ಪವಿತ್ರ ವೃಕ್ಷಗಳ ತುಲನೆಯಲ್ಲಿ ವಟವೃಕ್ಷದ ಆಯುಷ್ಯವು ಹೆಚ್ಚಿನದ್ದಾಗಿದ್ದು ಅದರ ವಿಸ್ತಾರವೂ ಹೆಚ್ಚಿರುತ್ತದೆ. ಸ್ತ್ರೀಯರು ಇಂತಹ ವಟವೃಕ್ಷದ ಪೂಜೆಯನ್ನು ಮಾಡಿ ’ನನಗೆ ಹಾಗೂ ನನ್ನ ಪತಿಗೆ ಆರೋಗ್ಯ ಸಂಪನ್ನ ದೀರ್ಘಾಯುಷ್ಯ ಲಭಿಸಲಿ, ಧನಧಾನ್ಯ ಹಾಗೂ ಮಕ್ಕಳು – ಬಂಧು ಬಳಗದಿಂದ ನನ್ನ ಪ್ರಪಂಚವು ಸವಿಸ್ತಾರ ಹಾಗೂ ಸಂಪನ್ನವಾಗಲಿ’ ಎಂದು ಜ್ಯೇಷ್ಠ ಹುಣ್ಣಿಮೆ ದಿನ ಪ್ರಾರ್ಥನೆಯನ್ನು ಮಾಡುತ್ತಾರೆ.
ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ಮಾಡಿದಳು. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಈ ಚರ್ಚೆಯು ವಟ ವೃಕ್ಷದ (ಆಲದಮರ) ಕೆಳಗೆ ಆದುದರಿಂದ ವಟವೃಕ್ಷಕ್ಕೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು. ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವು ಹೆಚ್ಚಾಗಲಿ ಎಂದು ಸ್ತ್ರೀಯರು ಈ ವ್ರತವನ್ನು ಆರಂಭಿಸಿದರು.ಸಾವಿತ್ರಿಯೊಂದಿಗೆ ಬ್ರಹ್ಮನು ಈ ವ್ರತದ ಮುಖ್ಯ ದೇವತೆಯಾಗಿದ್ದಾನೆ.
ವಟವೃಕ್ಷವು ಶಿವರೂಪಿಯಾಗಿದೆ. ಶಿವರೂಪಿ ವಟವೃಕ್ಷದ ಪೂಜೆ ಮಾಡುವುದು, ಅಂದರೆ ವಟವೃಕ್ಷದ ಮಾಧ್ಯಮದಿಂದ ಒಂದು ರೀತಿಯಲ್ಲಿ ಶಿವರೂಪಿ ಪತಿಯನ್ನೇ ಸ್ಮರಿಸಿ, ಅವನ ಆಯುಷ್ಯವನ್ನು ಹೆಚ್ಚಿಸಿ ಅವನಿಂದ ಆಯುಷ್ಯದಲ್ಲಿ ಬರುವ ಪ್ರತಿಯೊಂದು ಕರ್ಮಕ್ಕೆ ಜೊತೆ ಸಿಗಲೆಂದು ಈಶ್ವರನನ್ನು ಪೂಜಿಸುವುದಾಗಿದೆ. ಕರ್ಮಕ್ಕೆ ಶಿವನ ಜೊತೆಯಿದ್ದಲ್ಲಿ, ಶಕ್ತಿ ಮತ್ತು ಶಿವ ಇವರ ಸಂಯುಕ್ತ ಕ್ರಿಯೆಯಿಂದ ವ್ಯವಹಾರದಲ್ಲಿನ ಕರ್ಮವು ಸಾಧನೆಯಾಗಿ ಅದರಿಂದ ಜೀವಕ್ಕೆ ಲಾಭವಾಗುತ್ತದೆ.
    ವಟವೃಕ್ಷದ ಮೇಲಿನ ಬಿರುಕಿನಲ್ಲಿ ಇರುವ ಸುಪ್ತ ಲಹರಿಗಳು ಶಿವತತ್ತ್ವವನ್ನು ಆಕರ್ಷಿಸಿ ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತವೆ. ವಟವೃಕ್ಷಕ್ಕೆ ಹತ್ತಿಯ ದಾರದಿಂದ ಸುತ್ತುವಾಗ ಜೀವದ ಭಾವಕ್ಕೆ ಅನುಗುಣವಾಗಿ ಮರದಲ್ಲಿನ ಶಿವತತ್ತ್ವಕ್ಕೆ ಸಂಬಂಧಿತ ಲಹರಿಗಳು ಕಾರ್ಯ ನಿರತವಾಗಿ ಆಕಾರ ಪಡೆಯುತ್ತವೆ. ಜೀವಕ್ಕೆ ಹತ್ತಿಯ ದಾರದಲ್ಲಿನ ಪೃಥ್ವಿ ಮತ್ತು ಜಲ ತತ್ತ್ವಗಳ ಸಂಯೋಗದಿಂದ ಈ ಲಹರಿಗಳನ್ನು ಗ್ರಹಿಸಲು ಸುಲಭವಾಗುತ್ತವೆ.
    ಪ್ರಳಯವಾದರೂ ವಟವೃಕ್ಷವು ಇದ್ದೇ ಇರುತ್ತದೆ. ಅದು ಯುಗಾಂತ್ಯದ ಸಂಗಾತಿಯಾಗಿದೆ. ಬಾಲ ಮುಕುಂದನು ಪ್ರಳಯಕಾಲದಲ್ಲಿ ವಟದ ಎಲೆಯ ಮೇಲೆ ಮಲಗಿದ್ದನು.ಪ್ರಯಾಗದ ಅಕ್ಷಯ ವಟದ ಕೆಳಗೆ ರಾಮ, ಲಕ್ಷ್ಮಣ ಮತ್ತು ಸೀತೆಯರು ವಿಶ್ರಮಿಸಿದ್ದರು. ವಟವೃಕ್ಷವು ಬ್ರಹ್ಮ, ಶ್ರೀವಿಷ್ಣು, ಮಹೇಶ, ನೃಸಿಂಹ, ನೀಲ ಮತ್ತು ಮಾಧವರ ನಿವಾಸಸ್ಥಾನವಾಗಿದೆ.ವಟ, ಅಶ್ವತ್ಥ, ಅತ್ತಿ ಮತ್ತು ಶಮಿ (ಬನ್ನಿ) ಇವು ಪವಿತ್ರ ಮತ್ತು ಯಜ್ಞ ವೃಕ್ಷಗಳಾಗಿವೆ ಎಂದು ಹೇಳಲಾಗಿದೆ. ಇವೆಲ್ಲ ವೃಕ್ಷಗಳಲ್ಲಿ ವಟವೃಕ್ಷದ ಆಯುಷ್ಯವು ಅತ್ಯಧಿಕವಾಗಿದ್ದು ಕೊಂಬೆಗಳಿಂದ ನೆಲದ ವರೆಗೆ ಬರುವ ಬೇರುಗಳಿಂದ ಇದು ತುಂಬಾ ವಿಸ್ತಾರವಾಗುತ್ತದೆ.ಅದಕ್ಕೆ ಬೋಧಿವೃಕ್ಷವನ್ನು ಪೂಜಿಸಿ ಅಖಂಡ ಸೌಭಾಗ್ಯವತಿಯಾಗಲು ಆಶೀವಾ೯ದ ಬೇಡುತ್ತಾರೆ.
      -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 

"ಹಿಂದೂ"

ಹಿಂದೂ" ಎಂಬ ಶಬ್ದವನ್ನು ವಿದೇಶಿಯರು ನೀಡಿದ್ದೇ..?" ಹಿಂದೂ" ಶಬ್ದದ ಉಲ್ಲೇಖ ನಮ್ಮ ವೇದಪುರಾಣ,ಶಾಸ್ತ್ರಗಳಲ್ಲಿಲ್ಲವೇ...? ಇದು ನಿಜವೇ...?"ಎಂಬ ಅನುಮಾನಗಳು ನಮ್ಮನ್ನು ಕಾಡಿರಬಹುದು.ಆ ಎಲ್ಲಾ ಅನುಮಾನಗಳನ್ನು ಪರಿಹರಿಸುವ ಯತ್ನ ನಮ್ಮದು."ಹಿಂದೂ" ಎಂಬ ಪದ ಅರಬಿಭಾಷೆಯದ್ದಲ್ಲ,ಇರಾನಿನ ಕೊಡುಗೆಯಲ್ಲ.ಇರಾನಿಗಳು,ಮುಸ್ಲಿಂಮರು ಭಾರತಕ್ಕೆ ಬರುವ ಮುನ್ನವೇ "ಹಿಂದೂ" ಎಂಬ ಶಬ್ದ ಬಳಕೆಯಲ್ಲಿತ್ತು.ಸನಾತನ ಧರ್ಮದ ಅನುಯಾಯಿಗಳನ್ನು ಹಿಂದೂಗಳೆಂದು ಕರೆಯಲಾಗುತ್ತಿತ್ತು.ಅದಕ್ಕೆ ಕೆಲವೊಂದು ಉದಾಹರಣೆಗಳನ್ನು ನೋಡೋಣ."ಮೇರುತಂತ್ರ" ಶೈವ ದರ್ಶನಕ್ಕೆ ಸಂಬಂಧಿಸಿದ ಗ್ರಂಥ,ಅದರಲ್ಲಿ.."ಹೀನಂ ಚ ದೂಷ್ಯತ್ಯೇವ ಹಿಂದೂರಿತ್ಯುಚ್ಯತೇ" ಎಂದು "ಹಿಂದೂ" ಶಬ್ದದ ಉಲ್ಲೇಖವಿದೆ.ಅಂದರೆ ಯಾರು ಅಜ್ಞಾನತೆ ಹಾಗೂ ಹೀನತೆಯನ್ನು ತ್ಯಾಗ ಮಾಡಿದ್ದಾರೋ ಅವರು ಹಿಂದೂಗಳು.ಇದೇ ವಾಕ್ಯವನ್ನು "ಶಬ್ದ ಕಲ್ಪದ್ರುಮ" ಎಂಬ ಗ್ರಂಥದಲ್ಲೂ ಕಾಣಬಹುದು."ಪಾರಿಜಾತ ಹರಣ" ಎಂಬ ಗ್ರಂಥದಲ್ಲೂ ಸಹ "ಹಿಂದೂ’ ಶಬ್ದದ ಉಲ್ಲೇಖವಿದೆ. "ಹಿನಸ್ತಿ ತಪಸಾ ಪಾಪಾಂ ದೈಹಿಕಾಂ ದುಷ್ಟಮಾನಸಾನ್ | ಹೇತಿಭಿಃ ಶತ್ರುವರ್ಗಂ ಚ ಸ ಹಿಂದುರಭಿಧೀಯತೆ ||""ಮಾಧವ ದಿಗ್ವಿಜಯ" ಎಂಬ ಗ್ರಂಥದಲ್ಲೂ ಸಹ ಹಿಂದೂ ಶಬ್ದವನ್ನು ಕಾಣಬಹುದು.."ಓಂಕಾರಮೂಲಮಂತ್ರಾಢ್ಯ ಪುನರ್ಜನ್ಮ ದೃಢಾಶಯಃ | ಗೋಭಕ್ತೋ ಭಾರತಗುರೂ ಹಿಂದುಹಿಂಸನದೂಷಕಃ ||" ಅಂದರೆ,ಓಂಕಾರಮೂಲಮಂತ್ರವನ್ನು ಹೊಂದಿರುವ,ಕರ್ಮದ ಮೇಲೆ ವಿಶ್ವಾಸವಿರುವ,ಪುನರ್ಜನ್ಮದ ನಂಬಿಕೆಯಿರುವ,ಗೋಭಕ್ತರಾಗಿರುವ,ಪಾಪಕರ್ಮಗಳನ್ನು ದೂರವೇ ಇರಿಸುವವವರು ಹಿಂದೂಗಳು.ಋಗ್ವೇದದಲ್ಲಿ (೮-೨-೪೧) "ವಿವಹಿಂದು" ಎಂಬ ರಾಜನ ವರ್ಣನೆಯಿದೆ.ಆತ ೪೬೦೦೦ ಗೋವುಗಳನ್ನು ದಾನ ಮಾಡಿದ್ದ.ವಿವಹಿಂದು ಬಹಳ ಪರಾಕ್ರಮಿಯೂ ಆಗಿದ್ದ.ಆತನದು ಹಿಂದೂ ವಂಶವಾಗಿತ್ತು.ಇಲ್ಲಿಯೂ ಸಹ "ಹಿಂದು" ಎಂಬ ಶಬ್ದವನ್ನು ಕಾಣಬಹುದು. ಋಗ್ವೇದದಲ್ಲಿ "ಸೈಂಧವ" ಎಂಬ ಋಷಿಯ ಉಲ್ಲೇಖವಿದೆ.ಅನಂತರ ಅದೇ ಋಷಿ "ಹೈಂದಾವ" ಅಥವಾ" ಹಿಂದವ" ಎಂಬ ಹೆಸರಿನಿಂದ ಪ್ರಚಲಿತನಾಗಿದ್ದ.ಇದು "ಹಿಂದೂ" ಶಬ್ದಕ್ಕೆ ಸಾಮೀಪ್ಯದ ಪದ. ಋಗ್ವೇದದ ಬೃಹಸ್ಪತೀ ಅಗ್ಯಮದಲ್ಲಿ ಹಿಂದೂ ಪದ.."ಹಿಮಾಲಯಂ ಸಮಾರಭ್ಯ ಯಾವತ್ ಇಂದುಸರೋವರೇ | ತಂ ದೇವನಿರ್ಮಿತಂ ದೇಶಂ ಹಿಂದುಸ್ಥಾನಂ ಪ್ರಚಕ್ಷ್ಯತೇ ||"ಹಿಮಾಲಯದಿಂದ ಇಂದೂಸರೋವರದವರೆಗಿರುವ,ಸಾಕ್ಷಾತ್ ಭಗವಂತನೇ ನಿರ್ಮಿಸಿರುವ ಈ ದೇಶವನ್ನು "ಹಿಂದೂಸ್ಥಾನ" ಎಂದು ಕರೆಯುತ್ತಾರೆ.ಈ ಎಲ್ಲಾ ಆಧಾರಗಳಿಂದ "ಹಿಂದೂ’ ಅಥವಾ "ಹಿಂದೂಸ್ಥಾನ" ಪರಕೀಯರು ನೀಡಿದ ಪದವಲ್ಲ. ನಮ್ಮ ಸನಾತನ ಸಂಸ್ಕೃತಿಯ ಪದಗಳೇ.ಸಂಶೋಧಿಸುತ್ತಾ ಹೋದರೆ ಇನ್ನೂ ಅನೇಕ ಆಧಾರಗಳು ಸಿಗಬಹುದು. ನಮ್ಮ ವೇದ-ಶಾಸ್ತ್ರ-ಪುರಾಣಗಳಲ್ಲೇ "ಹಿಂದೂ" ಪದ ಉಲ್ಲೇಖಿತವಾಗಿದೆ.ಆಧಾರವಿಲ್ಲದೇ ಮಾತಾಡುವವರ ಅವೇವೇಕಿತನಕ್ಕೆ ನಾವು ತಲೆಗೆಡಿಸಿಕೊಳ್ಳಬೇಕಿಲ್ಲ.
-ಹನುಮಂತ .ಮ.ದೇಶಕುಲಕಣಿ೯ 

kathe

ಪಟ್ಟಣಕ್ಕೆ ಪ್ರಸಿದ್ಧ ಜ್ಯೋತಿಷಿ ಬಂದಿದ್ದಾರೆ ಎಂದು ಕೇಳಿದ ರಾಯರು ಅವರನ್ನು ಕಾಣಲು ಹೋದರು. ತಮ್ಮ ಜಾತಕದ ಜೊತೆ 501/- ಕಾಣಿಕೆ ಇಟ್ಟು ಕೇಳಿದರು...
    ಗುರುಗಳೇ ನಾನು ಯಾವಾಗ, ಯಾವ.  ಸ್ಥಳದಲ್ಲಿ, ಯಾವ ಪರಿಸ್ಥಿತಿಯಲ್ಲಿ ಸಾಯುತ್ತೇನೆ  ಎಂದು ಕೇಳಿದರು. ಜ್ಯೋತಿಷಿಗಳು ರಾಯರ ಜಾತಕ ನೋಡಿದರು,  ಅವರ ಮುಖವನ್ನು ದಿಟ್ಟಿಸಿ ನೋಡಿದರು. ನಂತರ ಒಂದು ಹಾಳೆಯಲ್ಲಿ ಸಂಖ್ಯೆಗಳನ್ನು ಬರೆದು  ಕೂಡಿ ಕಳೆದು ಗುಣಿಸಿ ಭಾಗಿಸಿ ಮತ್ತೆ ರಾಯರ ಮುಖ ದಿಟ್ಟಿಸಿ ಗಂಭೀರವಾಗಿ ಹೇಳಿದರು..ನೋಡಿ ರಾಯರೇ, ನಿಮ್ಮ ಜಾತಕ ಅದ್ಭುತವಾಗಿದೆ. ಸ್ಪಷ್ಟವಾಗಿ ತಿಳಿಸುತ್ತದೆ. ಏನೆಂದರೆ, ನಿಮ್ಮ ತಂದೆಯಷ್ಟೇ ವರ್ಷ ಬದುಕುತ್ತೀರಿ, ಅವರು ಸಾಯುವ ಸ್ಥಳದಲ್ಲೇ ಸಾಯುತ್ತೀರಿ, ಅವರು ಸಾಯುವ ಪರಿಸ್ಥಿತಿಯಲ್ಲಿಯೆ ಸಾಯುತ್ತೀರಿ.
    ರಾಯರು ಇದನ್ನು ಕೇಳಿ ಗುರುಗಳಿಗೆ ವಂದಿಸಿ ಅವಸರದಲ್ಲಿ ತಲೆ ಕೆಟ್ಟವರಂತೆ ಓಡಿದರು......ಅರ್ಧ ಘಂಟೆಯೊಳಗೆ ಅಪ್ಪನನ್ನು ವೃದ್ಧಾಶ್ರಮದಿಂದ ಮನೆಗೆ ಕರೆತಂದರು.
-ಹನುಮಂತ. ಮ.ದೇಶಕುಲಕಣಿ೯