ಶುಕ್ರವಾರ, ಮಾರ್ಚ್ 11, 2016

ವಾಲ್ಮೀಕಿ ಆಗ ರತ್ನಾಕರ

   ಬೇಡ ಜಾತಿಯ ರತ್ನಾಕರ ಚ್ಯವನ ಋಷಿಯ ಮಗನಾಗಿದ್ದ. ಗಂಗಾ ತೀರದ ಕ್ರೌಂಚವೆಂಬ ದಟ್ಟಾರಣ್ಯದಲ್ಲಿ ತನ್ನ ಕುಟುಂಬದವರೊಂದಿಗೆ ಇವನು ವಾಸವಾಗಿದ್ದ. ಈ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳ ಬೇಟೆಯಾಡುವುದು ದಾರಿಹೋಕರನ್ನು ಕಾಡಿಸಿ ಪೀಡಿಸಿ ಅವರ ತಲೆ ಹೊಡೆದು ಅವರಲ್ಲಿದ್ದುದೆಲ್ಲವನ್ನು ಸುಲಿಗೆ ಮಾಡುವುದು, ವಿರೋಧಿಸಿದರೇ ಹತ್ಯೆ ಮಾಡುವುದು ಈ ಬೇಡನ ನಿತ್ಯದ ಕಾರ್ಯಕ್ರಮಾವಾಗಿತ್ತು. 
   ಇವನ ಧೈರ್ಯ ಸಾಹಸ ಎಂತವರ ಗುಂಡುಗೆಯನ್ನು ಗಡಗಡ ನಡುಗುವಂತೆ ಮಾಡಿತ್ತು. ಈ ಕಾಯಕದಿಂದಲೇ ತನ್ನ ಸಂಸಾರದ ಬಂಡಿ ಸುಖವಾಗಿ ಸಾಗುತಿತ್ತು.ಅದೊಂದು ದಿನ ಈ ಕಿರಾತ ಬೇಟೆಗಾಗಿ ಕಾಡಿಗೆ ಹೊರಟನು. ಅರಣ್ಯದಲ್ಲೆಲ್ಲ ತಿರುಗಾಡಿದರೂ ಒಂದು ಬೇಟೆಯೂ ಇವನಿಗೆ ಸಿಗಲಿಲ್ಲ. ಅಗ ದಟ್ಟಾರಣ್ಯದ ದಾರಿಯಲ್ಲಿ ಸಪ್ತರ್ಷಿಗಳ ಗುಂಪಿನ ದರ್ಶನವಾಯಿತು. ಅವರಲ್ಲಿರುವ ವಸ್ತುಗಳನ್ನು ಕೊಡುವಂತೆ ಪೀಡಿಸಿದ ಕಿರಾತ. ನೋಡು ಕಿರಾತ ಕುಟುಂಬದ ಪೋಷಣೆ ಮಾಡುವುದು ಗೃಹಸ್ಥನ ಕರ್ತವ್ಯವೆಂಬುದೇನೋ ನಿಜ.ಆದರೆ ಮುಗ್ದ ಜನರನ್ನು ಹಿಂಸಿಸಿ ಅವರ ಕೊಲೆ ಸುಲಿಗೆ ಮಾಡಿ ನೀನು ದ್ರವ್ಯಾರ್ಜನೆ ಮಾಡುವುದು ಮಹಾ ಪಾಪಕರ ಕೆಲಸ ಪರರನ್ನು ಹಿಂಸಿಸದೇ ಸತ್ಯದ ಹಾದಿಯಲ್ಲಿ ನಡೆದು ದುಡಿತದ ಶ್ರಮದಿಂದ ಉಪ ಜೀವನ ನಡೆಸಿದರೆ ನಿನಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಕೆಟ್ಟ ಕೆಲಸ ಮಾಡುವುದನ್ನು ಬಿಟ್ಟು ಪುಣ್ಯದ ಹಾದಿಯಲ್ಲಿ ಇಂದಿನಿಂದಲೇ ನೀನು ಸಾಗು.
    ನಿನ್ನ ತಂದೆ ತಾಯಿ ಹೆಂಡತಿ ಮಕ್ಕಳು ಇವರ್ಯಾರೂ ನಿನ್ನ ಪಾಪದಲ್ಲಿ ಪಾಲುದಾರರಾಗುವುದಿಲ್ಲ ಎಂದು ಸಪ್ತರ್ಷಿಗಳು ಬುದ್ದಿವಾದ ಹೇಳಿದರು. ನಮ್ಮ ಬಳಿ ಪವಿತ್ರಗೊಳಿಸುವ ರಾಮನಾಮವಿದೆ. ಈ ರಾಮನಾಮ-ತೀರ್ಥಗಳು, ಬೆಳ್ಳಿ-ಬಂಗಾರದ ಒಡವೆಗಳಲ್ಲಿ . ನಿನ್ನ ಪಾಪದ ರಾಶಿಯನ್ನು ನಾಶ ಮಾಡುವಂತಹ ಅಮೋಘ ಸಾಧನಗಳಿವು. ಇವುಗಳನ್ನು ನಮ್ಮಿಂದ ಸ್ವೀಕರಿಸಿದರೇ ಮಾತ್ರ ನೀನು ಪಾಪದಿಂದ ಮುಕ್ತಿ ಹೊಂದಿ ಉದ್ದಾರವಾಗುವೆ. ಈಗ ನೀನು ಪಕ್ಕದ ಗಂಗೆಯಲ್ಲಿ ಮಿಂದು ಬಾ ಹೋಗು ಎಂದರು ಸಪ್ತರ್ಷಿಗಳು. ಭಕ್ತಿ ಭಾವದಿಂದ ಸಪ್ತರ್ಷಿಗಳ ಸ್ಮರಣೆ ಮಾಡುತ್ತಾ ಗಂಗೆ ಕಡೆಗೆ ಕಿರಾತನಿಗೆ ಕಮಂಡಲದೊಲಗಿನ ತೀರ್ಥ ಕೊಟ್ಟು ಪಾವನಕರವಾದ ರಾಮನಾಮವನ್ನು ಉಪದೇಶಿಸಿದರು.ನೋಡು ಕಿರಾತ ನೀನು ಪಾಪವನ್ನು ನಾಶಗೊಳಿಸುವಂಥ ಪಾವನಕರ ರಾಮನಾಮವನ್ನು ಜಪಿಸುತ್ತ ಕುಳಿತುಕೋ. ಮನಸ್ಸನ್ನು ಅತ್ತಿತ್ತ ಹರಿದಾಡಗೊಡಗಬೇಡ. ತಂದೆ-ತಾಯಿ, ಹೆಂಡತಿ-ಮಕ್ಕಳ ವ್ಯಾಮೋಹಕ್ಕೆ ಒಳಗಾಗಬೇಡ. ನೀನು ನಮ್ಮಂತೆ ರಾಮನಾಮದ ತಪಸ್ಸನ್ನಾಚರಿಸಿದರೆ ನಿನ್ನ ಪಾಪರಾಶಿಯು ನಾಶವಾಗಿ ನಮ್ಮಂತೆ ತಪಸ್ವಿಯಾಗುವೆ.
    ಇವರ ಉಪದೇಶ, ಆಶೀರ್ವಾದ ಪಡೆದು ಕಿರಾತ ಹರ್ಷಿತನಾದ ಅಲ್ಲಿಯೇ ಮರದಡಿಯಲ್ಲಿ ಕುಳಿತು ಏಕಚಿತ್ತದಿಂದ ರಾಮ-ರಾಮ ಎಂದು ಪರಮಾತ್ಮನ ನಾಮಸ್ಮರಣೆ ಮಾಡತೊಡಗಿದನು.ಹಗಲು ರಾತ್ರಿ ಕೆವಲ ರಾಮನಾಮ ಜಪದಲ್ಲಿ ನಿರತನಾದ ಕಿರಾತ ಧ್ಯಾನದಲ್ಲಿ ಮೈಮರೆತ ಇವನ ಮೇಲೆ ದೊಡ್ಡ ಹುತ್ತವೇ ಬೆಳೆಯಿತು. ಆನೇಕ ವರ್ಷಗಳ ನಂತರ ಸಪ್ತರ್ಷಿಗಳು ಮತ್ತೇ ಅದೇ ಅರಣ್ಯದ ಮಾರ್ಗದಲ್ಲಿಯೇ ಬಂದಾಗ ಹಿಂದೆ ತಾವು ಉಪದೇಶಿಸಿದ್ದ ಕಿರಾತನ (ಬೇಡ) ನೆನಪಾಯಿತು. ಸಪ್ತರ್ಷಿಗಳು ಏ ಕಿರಾತ ಎಂದು ಜೋರಗಿ ಕೂಗಿದರು. ಇವರ ಕೂಗನ್ನು ಕೇಳಿ ಧ್ಯಾನದಿಂದ ಎಚ್ಚರಗೊಂಡ ಕಿರಾತ ಹುತ್ತವನ್ನು ಒಡೆದುಕೊಂಡು ಹೊರ ಬಂದನು. ಇವನನ್ನು ಕಂಡ ಸಪ್ತರ್ಷಿಗಳು ಹರ್ಷಗೊಂಡು ನಿಂತು ಕೈಗಳನ್ನೆತ್ತಿ ಆಶೀರ್ವದಿಸಿದರು. ಕಿರಾತನು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕೈ ಜೋಡಿಸಿ ಪ್ರಾರ್ಥಿಸತೊಡಗಿದನು. ಸಪ್ತರ್ಷಿಗಳು ಪರಮಾನಂದದಿಂದ ನೀನು ಮೈಮೇಲೆ ವಲ್ಮೀಕ ಬೆಳೆಯುವವರೆಗೂ ತಪಶ್ಚರ್ಯ ಮಾಡಿದ್ದರಿಂದ ನಿನಗೆ ಲೋಕದಲ್ಲಿ ವಾಲ್ಮೀಕಿ ಎಂಬ ಹೆಸರಿನಿಂದ ನಾಮಕರಣ ಮಾಡಿರುವೆವು, ನಿನ್ನ ಪರ್ವತಪ್ರಾಯವದ ಪಾಪರಾಶಿಯೆಲ್ಲವೂ ರಾಮಮಂತ್ರ ಜಪದಿಂದ ನಾಶವಾಗಿ ಅಮೋಘವಾದ ಪುಣ್ಯ ಸಂಚಯ ಮಾಡಿಕೊಂಡಿರುವೆ ನೀನು ಪರಮಜ್ಞಾನಿಯಾದ ಮಹರ್ಷಿಯಾಗುವೆ. ನಿನ್ನಿಂದ ಲೋಕಕಲ್ಯಾಣವಾದ ಕಾರ್ಯವಾಗಲಿ. ವಾಲ್ಮೀಕಿ ಮಹರ್ಷಿಯೇ ನೀನು ವಿಧಿವಸದಿಂದ ಕಿರಾತನಾಗಿ ಜನಿಸಿ ಅದೇ ಸಂಸ್ಕಾರದಿಂದ ಕುಕರ್ಮವನ್ನಾಚರಿಸಿದೆ. ಅದರೆ ಪರಿಪಕ್ವ ಕಾವೊದಗಿದೊಡನೆಯೇ ನಿನಗೆ ನಮ್ಮ ದರ್ಶನವಾಯಿತು. ನೀನು ವಿದ್ಯಾದಾನ ಮಾಡು ಮುಂದೆ ನಿನಗೆ ನಾರದ ಮಹರ್ಷಿಗಳು ಭೇಟಿಯಾಗುವರು ಅವರ ಆಜ್ಞೆಯಂತೆ ನೀನು ನಡೆಯಬೇಕು ಎಂದು ಆಶೀರ್ವದಿಸಿದರು.
   ಸಪ್ತರ್ಷಿಗಳ ಆಶೀರ್ವಚನದಿಂದ ವಾಲ್ಮೀಕಿ ಋಷಿಯು ಸಂತುಷ್ಠನಾದನು. ಭಕ್ತಿ ವಿನಯದಿಂದ ಸಪ್ತರ್ಷಿಗಳು ಕುರಿತು ಮಹಾತ್ಮರೇ ನಿಮ್ಮಂದಲೇ ನಾನು ಪುನರ್ಜನ್ಮ ಪಡೆದಿರುವೆ ದುಷ್ಟನಾಗಿದ್ದ ನನ್ನನ್ನು ನೀವು ಉದ್ದರಿಸಿದಿರಿ ನಿಮ್ಮ ಉಪಕರವನ್ನು ನಾನೆಂದು ಮರೆಯಲಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.ವಾಲ್ಮೀಕಿ ಮಹರ್ಷಿಯೇ ನಾವು ನಿಮಿತ್ತ ಮಾತ್ರರು. ನಿನ್ನನ್ನು ನೀನೇ ಉದ್ದರಿಸಿಕೊಂಡೆ ಏಕನಿಷ್ಠಿಯಿಂದ ರಾಮ ಮಂತ್ರ ಪುರಸ್ಚರನ ಮಾಡಿ ಪಾವನನಾದೆ, ಸರ್ವಸಂಗ ಪರಿತ್ಯಾಗ ಮಾಡಿ ಮನೋನಿಗ್ರಹಗಳಿಂದ ಯೋಗರುಢನಾಗಿ ಮೈಮೇಲೆ ವಲ್ಮೀಕಿ (ಹುತ್ತ) ಬೆಳೆಯುವವರೆಗೆ ಮಾಡಿದ ತಪಸ್ಸು ಸಾಮನ್ಯವಾದುದಲ್ಲ ನಿನ್ನ ನಿಷ್ಠೆಯೇ ನಿನ್ನನ್ನು ಉದ್ದರಿಸಿದೆ. ನೀನು ಪುರಸ್ಚರಣ ಮಾಡಿದ ರಾಮಮಂತ್ರದ ಮಹಿಮೆಯನ್ನು ಚೆನ್ನಾಗಿ ಅರಿತಿರುವೆ ಮುಂದೆ ದೇವರ್ಷಿ ನಾರದರು ಮಹಾಮಹಿಮನಾದ ರಾಮನ ಚರಿತ್ರೆಯನ್ನು ನಿನಗೆ ತಿಳಿಸುವರು ಶ್ರೀ ರಾಮ ಚರಿತೆಯ ಶ್ರವಣದಿಂದ ನಿನಗೆ ಒಳ್ಳೆಯ ಪ್ರಯೋಜನವಾಗುವುದೆಂದು ಶುಭಾಶೀರ್ವದಿಸಿದರು.
   ಸಪ್ತಷಿಗಳ ಅದೇಶದಂತೆ ನಾರದ ಮುನಿಗಳು ವಾಲ್ಮಿಕಿ ಮಹರ್ಷಿಯ ಆಶ್ರಮಕ್ಕೆ ಭೇಟಿ ಕೊಟ್ಟರು. ಸಜ್ಜನರ ರಕ್ಷಣೆಗೆ ಮತ್ತು ದುರ್ಜನರ ನಾಶಕ್ಕಾಗಿ ಈ ಭೂಮಿಯಲ್ಲಿ ಅವತರಿಸಿದ ಶ್ರೀರಾಮ ಚರಿತ್ರೆಯನ್ನು ಬರೆಯುವಂತೆ ನಾರದಮುನಿಗಳು ತಿಳಿಸಿದರು. ಒಮ್ಮೆ ಶಿಷ್ಯನೊಂದಿಗೆ ಗಂಗಾ ಸ್ನಾನಕ್ಕೆ ಹೊರಟ ವಾಲ್ಮೀಕಿಗೆ ಸರಸಸಲ್ಲಾಪದಲ್ಲಿದ್ದ ಕ್ರೌಂಚ ಪಕ್ಷಿ ದಂಪತಿಯನ್ನು ನೋಡಿದರು. ಅವರ ಕಣ್ಣಿದುರಿಗೆ ಬೇಡನ ಬಾಣಕ್ಕೆ ಬಲಿಯಾದ ಗಂಡು ಕ್ರೌಂಚ ಪಕ್ಷಿ ಕಂಡು ಮರುಗಿದ ವಾಲ್ಮೀಕಿ ಈ ಪಕ್ಷಿಯ ಸಾವಿಗೆ ಕಾರಣನಾದ ಬೇಡನಿಗೆ ಎಂದು ಏಳಿಗೆಯಾಗದಿರಲೆಂದು ಶಾಪ ಕೊಟ್ಟರು. ನಂತರ ಬೇಡ ತನ್ನ ಕಾಯಕದ ಬಗ್ಗೆ ವಾಲ್ಮೀಕಿಗೆ ಮನವರಿಕೆ ಮಾಡಿಕೊಟ್ಟಾಗ ಸತ್ಯ ತಿಳಿಯದೇ ಶಾಪ ಕೊಟ್ಟದ್ದು ತಪ್ಪಾಯಿತೆಂದು ವಾಲ್ಮೀಕಿ ಋಷಿಯೂ ಪಶ್ಚಾತ್ತಾಪ ಪಟ್ಟು ಮನಶಾಂತಿಗಾಗಿ ಪರಮಾತ್ಮನ ದರ್ಶನಕ್ಕೆ ತಪಶ್ಚರ್ಯ ಮಾಡಿದರು. ತಪಸ್ಸಿಗೆ ಲೋಕಕರ್ತನಾದ ಬ್ರಹ್ಮದೇವನು ಮೆಚ್ಚಿ ಇವನ ತಪೋವನಕ್ಕೆ ದರ್ಶನವಿತ್ತನು.ಆಗ ಪರಮಾತ್ಮನು ವಾಲ್ಮೀಕಿಯನ್ನು ಕುರಿತು ಪುಣ್ಯ ಶ್ಲೋಕಿಯಾದ ಮಹರ್ಷಿಯೇ ನಿನ್ನಿಂದ ಲೋಕಕಲ್ಯಾಣ ಮಹಾಕಾರ್ಯವು ಜರುಗಬೇಕಾಗಿದೆ. ಅದಕ್ಕಾಗಿಯೇ ಕ್ರೌಂಚವಧೆಯ ಘಟನೆಯು ನಿನ್ನ ಕಣ್ಮಂದೆ ನಡೆಯಿತು. ದೇವರ್ಷಿ ನಾರದರು ಕೇಳಿದ ಶ್ರೀರಾಮ ಚರಿತೆಯು ನಿನಗೆ ಪೂರ್ಣವಾಗಿ ಕರಗತವಾಗಿದೆ. ಈ ಪುಣ್ಯಪುರುಷನ ಚರಿತ್ರೆಯನ್ನು ನೀನು ಕಾವ್ಯರೂಪದಲ್ಲಿ ಬರೆಯಬೇಕು ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿಶಿಖರಗಳು, ನದಿ ಸಮುದ್ರಗಳಿರುವವೋ ಅಲ್ಲಿಯವರೆಗೆ ಈ ಲೋಕದಲ್ಲಿ ರಾಮಾಯಣ ಕಥೆಯು ಪ್ರಚಲಿತವಾಗಿರುತ್ತದೆ. ನಿನ್ನ ಶ್ರೀರಾಮಚರಿತ ಮಹಾಕಾವ್ಯದ ದಿವ್ಯಕೃತಿಯಿಂದ ಲೋಕೋಪಕಾರವಾಗುವುದು. ನಿನ್ನ ಕಾವ್ಯವು ತನ್ನ ಘನತೆಯಿಂದ ವೇದ ಪಟ್ಟಕ್ಕೇರುವುದು, ಕಾವ್ಯ ರಚನೆಯ ಕಾರ್ಯದಲ್ಲಿ ನೀನೇ ಮೊದಲಿಗನಾಗುವುದರಿಂದ ಆದಿಕವಿ ಎಂಬ ಖ್ಯಾತಿ ಕೂಡ ನಿನಗೆ ಸಲ್ಲತ್ತದೆ ಎಂದ ಬ್ರಹ್ಮದೇವ ವಾಲ್ಮೀಕಿ ಮಹರ್ಷಿಯೇ ಉಪದೇಶ ಮಾಡಿ ಕಣ್ಮರೆ ಹೊಂದಿದನು.    
  ಮರು ಕ್ಷಣವೇ ಮಹರ್ಷಿಯಲ್ಲಿ ರಾಮಾಯಣ ಕಾವ್ಯ ರಚನೆಯ ಸ್ಪೂರ್ತಿಯ ಉದಯವಾಯಿತು.ವಾಲ್ಮೀಕಿ ಮಹರ್ಷಿ ಪಾವನಕರವಾದ ಶ್ರೀರಾಮಚರಿತೆಯನ್ನು ಕಾವ್ಯರೂಪದಲ್ಲಿ ಶ್ರೀರಾಮ ಜನನದಿಂದ ಹಿಡಿದು ಅವನ ಪಟ್ಟಾಭೀಷೇಕದವರೆಗೆ ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ದಕಾಂಡಗಳೆಂಬ ಆರು ಕಾಂಡಗಲಲ್ಲಿ ಶ್ರೀರಾಮ ಚರಿತೆಯನ್ನು ರಚಿಸಿ ಹಾಡಿದ್ದಾನೆ. ಇದನ್ನೇ ನಾವು ವಾಲ್ಮೀಕಿ ವಿರಚಿರ ರಾಮಾಯಣವೆಮದು ಕರೆಯುತ್ತೇವೆ.ಆದಿಕವಿ ಮಹರ್ಷಿ ವಾಲ್ಮೀಕಿ ಕೇವಲ ವಾಲ್ಮೀಕಿ ನಾಯಕ ಜನಾಂಗದ ಸ್ವತ್ತಲ್ಲ. ಅವರೊಬ್ಬ ಪುಣ್ಯಪುರುಷ ರಾಗಿದ್ದಾರೆ. ಬೇಟೆಗಾರ, ದರೋಡೆಕೋರ ಪರಾವಲಂಬಿಯಾಗಿದ್ದ ಕಿರಾತ ರತ್ನಾಕರ ಸಪ್ತರ್ಷಿಗಳ ಉಪದೇಶದಿಂದ ಜ್ಞಾನೋದಯವಾಗಿ ರಾಮನಾಮ ಜಪಿಸಿ ಮಹರ್ಷಿ ವಾಲ್ಮೀಕಿಯಾಗಿ ಜಗತ್ಪ್ರಸಿದ್ದ ರಾಮಾಯಾಣ ರಚಿಸಿ ಆದಿಕವಿಯಾದ. ಇವರ ರಾಮಾಯಣ ಮಹಾಕಾವ್ಯ ಇಡೀ ಜಗತ್ತಿಗೆ ದಾರಿದೀಪವಾಗಿದೆ.
  ಇವರ ವಿಚಾರಧಾರೆಗಳು ಇಂದಿನ ತಪ್ಪು ದಾರಿ ತುಳಿವ ಪ್ರತಿಯೊಬ್ಬರಿಗೆ ದಾರಿದೀಪವಾಗಬೇಕು. ಇವರ ಚಿಂತನೆಗಳು ಜನ ಸಾಮಾನ್ಯರ ಮನ ತಲುಪಿ ಸನ್ಮಾರ್ಗದಲ್ಲಿ ನಡೆಯಬೇಕು.ಸಮಾಜದ ಕೆಳ ವರ್ಗದಲ್ಲಿ ಜನಿಸಿದ ಎಷ್ಟೋ ವ್ಯಕ್ತಿಗಳು ಅವರ ಸಾಧನೆಯಿಂದ ಉತ್ತುಂಗಕ್ಕೇರಿ ಇತಿಹಾಸದ ಪುಟಗಳಲ್ಲಿ ಅಜರಾಮರರಾಗಿದ್ದಾರೆ. 
    -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ