ಭಾನುವಾರ, ಡಿಸೆಂಬರ್ 1, 2019

ಡಾ. ಶೈಲಜಾ ಶರ್ಮಾ ಅವರ ಬರಹ: ಸಮಗ್ರ ಕಾಶಿ ಪರಿಚಯ

ಡಾ. ಶೈಲಜಾ ಶರ್ಮಾ ಅವರ ಬರಹ: ಸಮಗ್ರ ಕಾಶಿ ಪರಿಚಯ
[8/8, 18:31] Shailaja Sharma: ಅಂಕಣ : 2


ಕಾಶಿ/ ವಾರಣಾಸಿ : ಭಾಗ-1

ಸದಾಶಿವನ ಜ್ಯೋತಿರ್ಲಿಂಗ, ಶಕ್ತಿ ಪೀಠ, ಮೋಕ್ಷ ದಾಯಿನಿ ಗಂಗೆ, ಸಹಸ್ರಾರು ವರ್ಷಗಳ ಧಾರ್ಮಿಕ ಇತಿಹಾಸ ಎಲ್ಲವನ್ನೂ ಒಂದೆಡೆ ಒಳಗೊಂಡಿರುವ ಪುಣ್ಯ ಕ್ಷೇತ್ರ ಕಾಶಿ. ಧರ್ಮ ಕ್ಷೇತ್ರಗಳಲ್ಲಿ ಕಾಶಿಯನ್ನು ಮೀರಿಸು ಕ್ಷೇತ್ರ ಮತ್ತೊಂದು ಇಲ್ಲ.

ಭಾರತದಲ್ಲಿ ಇರುವ ದ್ವಾದಶಲಿಂಗಗಳಲ್ಲಿ ವಾರಣಾಸಿಗೆ ಮಹತ್ವದ ಸ್ಥಾನವಿದೆ. ಹಿಂದೂ ಧರ್ಮದ ಪರಮ ಪವಿತ್ರ ಕ್ಷೇತ್ರಗಳಲ್ಲಿ ಮೊದಲು ಹೇಳುವ ಪುಣ್ಯ ಭೂಮಿ ಇದು. ಮೋಕ್ಷ ಪ್ರದಾಯಕ "ಕಾಶಿ ವಿಶ್ವನಾಥ" ಎಂದೇ ಪ್ರಚಲಿತ.

ವಾರಣಾಸಿ ಇರುವುದು ಗಂಗಾನದಿಯ ಪಶ್ಚಿಮದ ದಡದ ಮೇಲೆ. ಪಟ್ಟಣದ ಉತ್ತರ ಮತ್ತು ದಕ್ಷಿಣದಲ್ಲಿ ಹರಿಯುವ 'ವಾರುಣ ಮತ್ತು ಅಸಿ' ನದಿಗಳು ಗಂಗೆಯನ್ನು ಸೇರುವುದು ಇಲ್ಲಿಯೇ. ಎರಡು ನದಿಗಳ ಹೆಸರಿನಿಂದಾಗಿ ವಾರಣಾಸಿ ಎಂಬ ಹೆಸರು ಪಡೆದಿದೆ.
ವಾರಣಾಸಿ ಪುರಾತನಕ್ಕಿಂತ ಪುರಾತನ ಎಂದು "ಮಾರ್ಕ್ ಟ್ವೇನ್" ವರ್ಣಿಸಿದ್ದಾರೆ. ಸುಮಾರು 3500 ವರ್ಷಗಳ ಲಿಖಿತ ಇತಿಹಾಸ ಇರುವ ಏಕಮಾತ್ರ ಭಾರತೀಯ ಪಟ್ಟಣ ಇದು ಎನ್ನುತ್ತಾರೆ. ಜನವಸತಿ ನಡೆದು ಬಂದಿರುವ ಜಾಗತಿಕ ಪಟ್ಟಣಗಳಲ್ಲಿ ಅತಿ ಪುರಾತನವಾದದ್ದು ವಾರಣಾಸಿ. ಆಂಗ್ಲರು ಇದನ್ನು "ಬನಾರಸ್" ಎಂದು ಕರೆಯುತ್ತಿದ್ದರು. ಇಂದಿಗೂ ಈ ಹೆಸರು ಕೇಳಿ ಬರುತ್ತದೆ.

ಕಾಶಿ ಅಂದರೆ ದಿವ್ಯ ಜ್ಯೋತಿಯ ಊರು ಎಂದರ್ಥ. ಆಕಾಶ ಪಾತಾಳಗಳನ್ನು ಒಂದು ಮಾಡುವ ಬೆಳಕಿನ ಶಲಾಕೆಯಾಗಿ ಭೂಮಿಯ ಮೇಲೆ ಜ್ಯೋತಿರ್ಲಿಂಗಗಳು ಆವಿರ್ಭವಿಸಿದವು ಎನ್ನುತ್ತಾರೆ. ಶಿವ ಪಾರ್ವತಿಯರು ಆದಿ ಕಾಲದಿಂದಲೂ ಇಲ್ಲಿ ವಾಸವಾಗಿದ್ದರು ಎನ್ನುತ್ತದೆ ಪುರಾಣ. ಕಾಶಿಯನ್ನು ದಿವೋದಾಸನೆಂಬ ರಾಜ ಆಳುತ್ತಿದ್ದ ಎಂದು ಸ್ಥಳ ಪುರಾಣ ಹೇಳುತ್ತದೆ.

ವೇದ, ಪುರಾಣ, ಗ್ರಾಮ್ಯ ಭಾಷೆಗಳಲ್ಲಿ ನೂರೆಂಟು ಹೆಸರುಗಳನ್ನು ಪಡೆದ ಊರು ಕಾಶಿ. ಮಹಾದೇವನಿಗೆ ಅತ್ಯಂತ ಪ್ರಿಯವಾದ ಸ್ಥಳವಿದು. ವಿಶ್ವನಾಥನ ಮಂದಿರದಲ್ಲಿರುವ ಜ್ಯೋತಿರ್ಲಿಂಗಕ್ಕೆ ಜನನ ಮರಣಗಳಿಂದ ಮುಕ್ತಿಯನ್ನು ಕೊಡುವ ಶಕ್ತಿ ಇದೆ.
ಶಿವನ ಪ್ರೀತಿಯ ತಾಣ ಎಂದು ನಂಬುವ ಹಿಂದೂ ಧಾರ್ಮಿಕರು ಗಂಟೆಯಲ್ಲಿ ಮಿಂದೆದ್ದು ಜನ್ಮಗಳ ಪಾಪ ಕಳೆದುಕೊಂಡು ವಿಶ್ವನಾಥನಿಗೆ ನಮಿಸಿ ಆತ್ಮತೃಪ್ತಿ ಪಡೆಯುತ್ತಾರೆ.

ಗುರು ಆದಿಶಂಕರಾಚಾರ್ಯರು, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಗೋಸ್ವಾಮಿ ತುಳಸೀ ದಾಸರು, ಸ್ವಾಮಿ ದಯಾನಂದ ಸರಸ್ವತಿ, ಗುರುನಾನಕ್ ಇನ್ನು ಮುಂತಾದ ಗುರುಗಳು, ಸಾಧು ಸಂತರು ವಿಶ್ವನಾಥನ ದರ್ಶನ ಪಡೆದು ಧನ್ಯರಾಗಿದ್ದಾರೆ. ಆದಿಕಾಲದ ಬೌದ್ಧ ಗ್ರಂಥಗಳಲ್ಲಿ "ಗೌತಮ ಬುದ್ಧ " ನ ಪ್ರಕಾರ ನಾಲ್ಕು ಪವಿತ್ರ ಕ್ಷೇತ್ರಗಳಲ್ಲಿ ಮೊದಲನೆಯದು ಕಾಶಿ ಎಂದಿದ್ದಾನೆ. ಗೌತಮಬುದ್ಧನು ಸಾಕ್ಷಾತ್ಕಾರದ ಬಳಿಕ ಮೊದಲು ಪ್ರವಚನ ನೀಡಿದ್ದು ವಾರಣಾಸಿ ಬಳಿಯ "ಸಾರಾನಾಥ" ದಲ್ಲಿ. ಜೈನ ತೀರ್ಥಂಕರರಾದ ಸುಪಾರ್ಶ್ವನಾಥ, ಶ್ರೀಯಾಂಶನಾಥ, ಪಾರ್ಶ್ವನಾಥರು ಜನಿಸಿದ್ದು ವಾರಣಾಸಿಯಲ್ಲಿ. "ಗುರುನಾನಕ್ ರು" ಮಹಾಶಿವರಾತ್ರಿಯಂದು ಭೇಟಿನೀಡಿದ್ದರು. "ಸಿಖ್ಖ್ " ಧರ್ಮ ಸ್ಥಾಪಿಸಲು ಅವರಿಗೆ ಪ್ರೇರಣೆಯಾಗಿದ್ದು ಇಲ್ಲಿಯೇ ಎನ್ನುವರು.

"ಆಯ್ನೀ ಬೆಸೆಂಟ್ ಥಿಯೋಸಫಿಯ" ಪ್ರಚಾರಕ್ಕಾಗಿ ವಾರಣಾಸಿಯಲ್ಲಿ ನೆಲೆಸಿದ್ದರು. 1898ರಲ್ಲಿ ಇವರು ಸ್ " ಸೆಂಟ್ರಲ್ ಹಿಂದೂ ಕಾಲೇಜ್" ಸ್ಥಾಪಿಸಿದರು. 1915ರಲ್ಲಿ "ಬನಾರಸ್ ಯುನಿವರ್ಸಿಟಿ "(ಕಾಶಿ ವಿಶ್ವ ವಿದ್ಯಾಲಯ) ಗೆ ಬುನಾದಿಯಾಯಿತು.


ಮುಂದುವರೆಯುವುದು.........
[8/8, 18:32] Shailaja Sharma: ಅಂಕಣ 3

ಕಾಶಿ/ವಾರಣಾಸಿ : ಭಾಗ 2

ಕಾಶಿ ವಿಶಾಲಾಕ್ಷಿ ಮಂದಿರ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಶಾಕ್ತ ಪಂಥೀಯರ ಪಾಲಿಗೆ ವಾರಣಾಸಿಯ ಗಂಗೆ ಶಕ್ತಿ ರೂಪಿಣಿ.

"ಕಣ್ಣು ಕೋರೈಸುವ ವೈಭವ"

ವೇದ ಕಾಲದಿಂದಲೂ ಮೊದಲ್ಗೊಂಡು ಮೊಘಲರ, ಬ್ರಿಟಿಷರ ಆಳ್ವಿಕೆಯಿಂದಲೂ ಕಾಶಿಯಲ್ಲಿ ಭಕ್ತರ ಪ್ರವಾಹ ಇದ್ದೆ ಇದೆ. ರಾಜ ಮಹಾರಾಜರು ಇಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸುತ್ತಿದ್ದರು. ಎಲ್ಲ ದೇವಾಲಯಗಳಿಗೆ ಅಪಾರ ಕಾಣಿಕೆಗಳನ್ನು ಕೊಡುತ್ತಿದ್ದರು.

7ನೇ ಶತಮಾನದಲ್ಲಿ ಇಲ್ಲಿಗೆ ಬಂದಿದ್ದ "ಹ್ಯೂಯನ್ ತ್ಸ್ಯಾಂಗ್" ಇಲ್ಲಿನ ವೈಭವವನ್ನು ವರ್ಣಿಸಿದ್ದಾನೆ. ಇವನ ಪ್ರಕಾರ ಈ ಪಟ್ಟಣವು ಶ್ರೀಮಂತ ಧಾರ್ಮಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ದೇವಾಲಯಗಳಲ್ಲಿ ವಜ್ರ ವೈಢೂರ್ಯಗಳಿಂದ ಅಲಂಕೃತವಾದ ವಿಗ್ರಹಗಳು ರಾರಾಜಿಸುತ್ತಿದ್ದವು. ನಗರದ ಮಧ್ಯ ಭಾಗದಲ್ಲಿ ನೂರು ಅಡಿ ಎತ್ತರದ "ಕಂಚಿನ ಮಹಾಶಿವನ ಮೂರ್ತಿ" ಇತ್ತು ಎಂದು ಹೇಳಿದ್ದಾರೆ.

1033 ರಿಂದ 1664 ರ ವರೆಗೆ ವಾರಣಾಸಿಯ ಮೇಲೆ ಸತತ ದಾಳಿಗಳು ನಡೆದಿದ್ದವು. ಪುರಾತನ ಕಾಶಿವಿಶ್ವನಾಥನ ದೇವಾಲಯವನ್ನು ಹಲವು ಬಾರಿ ನವೀಕರಿಸಲಾಗಿತ್ತು.

ಮೊಘಲ್ ದೊರೆ ಔರಂಗಜೇಬನು 1669ರಲ್ಲಿ ವಿಶ್ವನಾಥ ಮಂದಿರವನ್ನು ನಾಶಪಡಿಸಿ "ಗ್ಯಾನವ್ಯಾಪಿ" (ಜ್ಞಾನವಾಪಿ) ಮಸೀದಿ ಕಟ್ಟಿಸಿದ. ಈ ಮಸೀದಿಯ ಪಶ್ಚಿಮದ ಗೋಡೆಯಲ್ಲಿ ಪುರಾತನ ಮಂದಿರದ ಕುರುಹುಗಳು, ಸುಂದರವಾದ ಕೆತ್ತನೆಯ ಕಲಾಕೃತಿಗಳಿಂದ ಕೂಡಿರುವುದನ್ನು ಇಂದಿಗೂ ನೋಡಬಹುದು.

ಇಂದೋರಿನ ಮರಾಠಾ ರಾಣಿ "ಅಹಲ್ಯ ಬಾಯಿ ಹೋಳ್ಕರ್", 1777 ರಿಂದ 1780 ನಡುವೆ ಗ್ಯಾನ್ ವ್ಯಾಪಿ ಮಸೀದಿ ಯ ಪಕ್ಕದಲ್ಲಿ ಈಗಿರುವ ಕಾಶಿವಿಶ್ವನಾಥನ ಮಂದಿರವನ್ನು ಕಟ್ಟಿಸಿದಳು. 1835 ರಲ್ಲಿ ಪಂಜಾಬ್ ನ ಸಿಖ್ಖ್ ಮಹಾರಾಜ "ರಣಜಿತ್ ಸಿಂಗ್" ಕಾಣಿಕೆಯಾಗಿ ಕೊಟ್ಟ 1000 ಕಿಲೋ ಬಂಗಾರದಲ್ಲಿ ಮಂದಿರದ ಗೋಪುರಕ್ಕೆ "ಬಂಗಾರದ ತಗಡುಗಳ" ಅಲಂಕಾರ ಮಾಡಲಾಯಿತು. ಸುಮಾರು 15.5 ಮೀ ಎತ್ತರದ ಬಂಗಾರದ ಗೋಪುರ ಇರುವುದರಿಂದ ಆಗ "ಸ್ವರ್ಣ ದೇವಾಲಯ" ಎನ್ನುತ್ತಿದ್ದರು. ನೇಪಾಳದ ದೊರೆ ಮಂದಿರದ ಮಧ್ಯ ಭಾಗದಲ್ಲಿ ತೂಗಾಡಿಸಲು "ಬೃಹತ್ ಘಂಟೆಯನ್ನು" ಕಾಣಿಕೆ ನೀಡಿದ್ದ. ಇದರ ನಾದವು ಬಹಳ ದೂರದವರೆಗೂ ಕೇಳಿಸುತ್ತಿತ್ತು. ಇಂದಿಗೂ ಬೃಹತ್ ಘಂಟೆಯನ್ನು ನೋಡಬಹುದು.

ಮೂರು ದ್ವಾರಗಳನ್ನು ಹೊಂದಿರುವ ಚಿಕ್ಕ ಗರ್ಭಗುಡಿಯಲ್ಲಿ ನೆಲಮಟ್ಟದಲ್ಲಿ ಇರುವ ಆಕರ್ಷಕ "ಕೃಷ್ಣ ಶಿಲೆಯ ಲಿಂಗ ರೂಪದಲ್ಲಿ ವಿಶ್ವನಾಥ" ನೆಲೆಸಿದ್ದಾನೆ. ಸುತ್ತಲೂ ಬೆಳ್ಳಿಯ ವೇದಿಕೆ. ಪಾಣಿ ಪೀಠವಿಲ್ಲ. ಗರ್ಭಗುಡಿಯ ಒಂದು ಬದಿಗೆ ಮಹಾದೇವನಿದ್ದಾನೆ.

ವಿಶ್ವನಾಥನ ಮಂದಿರದ ಆವರಣದಲ್ಲಿ ಹಲವಾರು ಪುಟ್ಟ ಪುಟ್ಟ ಗುಡಿಗಳಿವೆ. ಇಲ್ಲಿ ಕೇಸರಿ ಗಣಪ, ವಿರೂಪಾಕ್ಷ, ವಿಷ್ಣು , ಗೌರಿ, ಅನ್ನಪೂರ್ಣೇಶ್ವರಿ, ಅವಿಮುಕ್ತೇಶ್ವರ, ಮಹಾಕಾಲ, ಕುಬೇರೇಶ್ವರ, ಕಪಿಲೇಶ್ವರ, ಕಾಲಭೈರವ, ಸೌಭಾಗ್ಯ ಗೌರಿ, ಶೃಂಗಾರ ಗೌರಿ, ಸಾವಿತ್ರಿ, ವ್ಯಾಸೇಶ್ವರರೊಂದಿಗೆ ಹಲವಾರು ಪುಟ್ಟ ಪುಟ್ಟ ಲಿಂಗಗಳಿವೆ. ವಿಶ್ವನಾಥನಿಗೆ ದಿನಕ್ಕೆ ಐದು ಸಲ ಆರತಿ ಪೂಜೆ ನಡೆಯುತ್ತದೆ. ಸಂಜೆಯ ಆರತಿಗೆ "ಶೃಂಗೇರಿ ಆರತಿ" ಎನ್ನುತ್ತಾರೆ. ಈ ಸಮಯದಲ್ಲಿ ಲಿಂಗವನ್ನು ಹೂಗಳಿಂದ ಅಲಂಕರಿಸಿರುತ್ತಾರೆ. ಸಾಮಾನ್ಯವಾಗಿ ಕಾಶಿವಿಶ್ವನಾಥನನ್ನು ಅಭಿಷೇಕದಿಂದಲೇ, ಅಲಂಕಾರ ಇಲ್ಲದೆಯೇ ನೋಡಿರುವುದು ಹೆಚ್ಚು.

ಶಿವನ ಮೊಟ್ಟ ಮೊದಲ ಜ್ಯೋತಿರ್ಲಿಂಗ ಉದ್ಭವವಾದದ್ದು ವಾರಣಾಸಿಯಲ್ಲಿ ಎಂಬ ನಂಬಿಕೆಯು ಇದೆ. ವಾರಣಾಸಿಯಲ್ಲಿರುವ ಒಂದೊಂದು ಘಾಟ್ಗಳು(ನದಿಯ ತೀರದಲ್ಲಿರುವ ಸ್ಥಳಗಳಿಗೆ ಒಂದೊಂದು ಹೆಸರಿದೆ) ಬಹಳ ಖ್ಯಾತಿ ಪಡೆದಿದೆ.

ಶಿವರಾತ್ರಿಯ ದಿನ ಕಾಶೀನರೇಶ (ಕಾಶಿಯ ರಾಜ) ವಿಶ್ವನಾಥ ಮಂದಿರದ ಮುಖ್ಯ ಪೂಜಾರಿ ಆಗುತ್ತಾರೆ. ಕಾಶೀನರೇಶರು ಪೂಜೆ ಮುಗಿಸಿದ ಬಳಿಕವೇ ಉಳಿದ ಪೂಜಾರಿಗಳು ಗರ್ಭಗುಡಿಯೊಳಗೆ ಪ್ರವೇಶಿಸುತ್ತಾರೆ.

ಹಿಂದೂಗಳ ಹೊರೆತು ಅನ್ಯಧರ್ಮೀಯರಿಗೆ ಮಂದಿರದೊಳಗೆ ಪ್ರವೇಶವಿಲ್ಲ. ವಿಶ್ವನಾಥನನ್ನು ನೋಡಲೇ ಬೇಕು ಎನ್ನುವ ಭಕ್ತರು "ನೌಬತ್ ಖಾನ್" ಎಂಬಲ್ಲಿಂದ ದರ್ಶನ ಪಡೆಯಬಹುದು.




ಮುಂದುವರೆಯುವುದು..............
[8/8, 18:32] Shailaja Sharma: ಅಂಕಣ 4

ಕಾಶಿ/ವಾರಣಾಸಿ : ಭಾಗ 3

ಹಿಂದೂಗಳ ಪರಮ ಪುಣ್ಯ ಭೂಮಿ, ಸಾಕ್ಷಾತ್ ಪರಶಿವನ ಆವಾಸಸ್ಥಾನ. ಪರಿವಾರ ದೇವತೆಗಳೊಂದಿಗೆ ನೆಲೆಸಿರುವ ಬೋಲೆನಾಥ, ಮುಕ್ತಿ ಪ್ರದಾಯಕ, ಮೋಕ್ಷಪ್ರದ ವಿಶ್ವನಾಥನ ದರ್ಶನ ಪಡೆಯಲು ಮುಖ್ಯ ರಸ್ತೆಯಿಂದ ನಾಲ್ಕು ದ್ವಾರಗಳಿವೆ. ಒಂದೊಂದಕ್ಕೂ ಸಂಖ್ಯೆಗಳಿವೆ. ಪ್ರತಿ ಗಲ್ಲಿಯೂ ಕಿರಿದಾಗಿದೆ. ಅಕ್ಕ ಪಕ್ಕದಲ್ಲಿ ವಿಧವಿಧದ ಅಂಗಡಿಗಳ ಸಾಲುಗಳು, ಪುಟ್ಟಪುಟ್ಟ ಗುಡಿ ಗೋಪುರಗಳಿವೆ.

* ಏಕ್ ನಂಬರ್ ಗೇಟ್ :

ಮೊದಲು "ಸಾಕ್ಷಿ ವಿನಾಯಕನ" ದರ್ಶನ. ಅಂಗಡಿಗಳ ಸಾಲಿನ ಮಧ್ಯದಲ್ಲಿದೆ. ಪುಟ್ಟ ಮಂದಿರ, ಸುಂದರವಾದ ಎತ್ತರದ ಮೂರ್ತಿ. ಗಣಪನ ಎಡ ಬಲದ ಗೋಡೆಗೆ ಕನ್ನಡಿಗಳನ್ನು ಅಳವಡಿಸಿದ್ದಾರೆ. ಯಾರು ಯಾರು ಕಾಶಿಗೆ ಬಂದು ವಿಶ್ವನಾಥನ ದರ್ಶನ ಪಡೆದರು ಎಂಬುದಕ್ಕೆ ಸಾಕ್ಷಿ ಹೇಳುತ್ತಾನಂತೆ.

ಸೀತಾರಾಮ ಲಕ್ಷ್ಮಣ, ಹನುಮಂತನ ಬಿಳಿಶಿಲೆಯ ಪುಟ್ಟ ಮೂರ್ತಿಗಳು ಮತ್ತೊಂದು ಮಂದಿರದಲ್ಲಿದೆ.

ಚಿಕ್ಕದಾದ ಕೇಸರಿ ಹನುಮನ ಅತೀ ಪುಟ್ಟ ಗುಡಿ ಇದೆ.

* ದೋ ನಂಬರ್ ಗೇಟ್:

"ಆದಿ ವಿಶಾಲಾಕ್ಷಿ" ಮಂದಿರ, ವಿಶ್ವನಾಥನ ಮಂದಿರದ ಪಕ್ಕದಲ್ಲಿ ಇದೆ. ಪುಟ್ಟ ವಿಗ್ರಹ ಆಕರ್ಷಕವಾಗಿದೆ.

ವಿಶಾಲಾಕ್ಷಿ ದೇವಾಲಯಕ್ಕೆ ಹೋಗುವ ದಾರಿಯೂ ಇದೆ ಆಗಿದೆ.

* ತೀನ್ ನಂಬರ್ ಗೇಟ್ :

"ಡುಂಢಿ ಗಣೇಶನ" ಪುಟ್ಟ ಗುಡಿ, ವಿಶಾಲ ಕೇಸರಿ ಗಣಪನದು ಕುಳಿತಿರುವ ಭಂಗಿ. ಎರಡು ದ್ವಾರಗಳಿವೆ. ಗುಡಿಯ ತುಂಬಾ ಗಣಪನೇ ಇದ್ದಾನೆ. ಮೂರು ಕಣ್ಣುಗಳು ಇರುವಂತೆ ಕಾಣುತ್ತದೆ. ಹೊರಗಿನಿಂದ ನಮಿಸ ಬೇಕು. ಈ ಗಣಪ ವಿಶ್ವನಾಥನನ್ನು ನೋಡಲು ಅನುಮತಿ ಕೊಡುವ ದೇವನೆಂದು ಪ್ರತೀತಿ.

ಒಂದನೇ ಗೇಟ್ ನಿಂದ ಬಂದರೂ ಇಲ್ಲಿಗೆ ಬರಬೇಕು.
ಇಲ್ಲಿ ಸೆಕ್ಯುರಿಟಿಗಳಿಂದ ತಪಾಸಣೆಗೊಂಡು ಒಳ ಬಂದರೆ .......

"ಶ್ರೀ ಅನ್ನಪೂರ್ಣೇಶ್ವರಿಯ" ದೇವಾಲಯ

ಸಾಕ್ಷಾತ್ ಶಿವನಿಗೆ ಅನ್ನದಾನ ಮಾಡಿದ ದೇವಿ.
ಸಾಧಾರಣ ಕಂಬಗಳಿರುವ ವಿಶಾಲ ದೇವಾಲಯ.
ತೆರೆದ ಸುಖನಾಸಿ ಮಂಟಪ, ವಿಶಾಲ ಗರ್ಭಗುಡಿಯಲ್ಲಿನ ದೇವಿಯ ಮೂರ್ತಿ ಬಹಳ ಸೊಗಸಾಗಿದೆ. ಎತ್ತರದ ಪಾಣಿಪೀಠದ ಮೇಲಿದೆ. ಪ್ರಾಕಾರದ ಸುತ್ತಲೂ ಹಲವಾರು ದೇವರ ಮೂರ್ತಿಗಳಿವೆ.

ಇಲ್ಲಿಯೂ ದೊಡ್ಡದಾದ ಘಂಟೆ ಇದೆ.

ಪ್ರದಕ್ಷಿಣೆ ಬರುವಾಗ ಗೌರಿಶಂಕರ ಮತ್ತು ಕುಬೇರೇಶ್ವರನ ಉಬ್ಬು ಶಿಲ್ಪಗಳಿವೆ.
ಸೂರ್ಯ ನಾರಾಯಣನದು ಪುಟ್ಟ ಗರ್ಭಗುಡಿ.
ಅನ್ನ ಪೂರ್ಣೆಯ ಉತ್ಸವ ಮೂರ್ತಿಗಳು.
ವಿಶಾಲವಾದ ಗಣಪನ ಮೂರ್ತಿಯ ಪಕ್ಕದಲ್ಲಿ ದೊಡ್ಡ ಕೋಣೆಯೊಳಗೆ ಪಕ್ಕ ಪಕ್ಕದಲ್ಲಿ ಬೃಹತ್ತಾದ ಮಹಾಕಾಳಿಯ ಕಪ್ಪು ಶಿಲೆಯ ಮೂರ್ತಿ, ಶಿವ ಪಾರ್ವತಿ,ಗಣೇಶ , ಲಕ್ಷ್ಮೀನಾರಾಯಣ, ಗಂಗಾವತರಣ, ಲಕ್ಷ್ಮಿ, ಸರಸ್ವತಿ, ಪಾರ್ವತಿಯರ ಪುಟ್ಟ ಬಿಳಿಶಿಲೆಯ ಮೂರ್ತಿಗಳು ನಂತರ ಮತ್ತೊಂದರಲ್ಲಿ ದೊಡ್ಡದಾದ ಲಕ್ಷ್ಮಿ ನರಸಿಂಹ ಸ್ವಾಮಿಯಮೂರ್ತಿ ಇದೆ. ಅಲ್ಲಿಂದ ಹೊರ ಬಂದರೆ ಗೋಡೆಗೆ ತಾಗಿದಂತೆ ಶಿವಲಿಂಗವಿದೆ. ಪಕ್ಕದಲ್ಲಿ ಸತ್ಯನಾರಾಯಣನ ಚಿಕ್ಕ ಮೂರ್ತಿ ಮತ್ತು ಆಂಜನೇಯನ ದೊಡ್ಡ ಮೂರ್ತಿಗೆ ನಮಸ್ಕರಿಸಿದ ಹೊರ ಬರುವ ಮುನ್ನ ಎಡಗಡೆಯ ತಗ್ಗಿನಲ್ಲಿ " ಶ್ರೀಯಂತ್ರ ಶಿವಲಿಂಗ" ಇರುವ ಪುಟ್ಟ ಮಂದಿರವಿದೆ. ಜಗುಲಿ ಹತ್ತಿ ಮೆಟ್ಟಿಲಿಳಿದು ನೋಡಬೇಕು. ಲಿಂಗದ ಮೇಲೆ ಯಂತ್ರದ ಕೆತ್ತನೆ ಇರುವುದು ವಿಶೇಷವಾದದ್ದು ಮತ್ತು ಅಪರೂಪದ್ದು ಆಗಿದೆ. ಇದನ್ನು 'ನವನಾರ(ನಾಥ)ಶಿವ ಎನ್ನುತ್ತಾರೆ.

ಅಂಗಡಿಗಳ ಸಾಲುಗಳು ಮಧ್ಯೆ ನಡೆಯುತ್ತಾ ಸಾಗಿದರೆ " ಶ್ರೀ ರಾಮೇಶ್ವರ ಲಿಂಗ" ಇರುವ ಮಂದಿರ ಸಿಗುತ್ತದೆ. 7-8 ಮೆಟ್ಟಿಲು ಹತ್ತಿ ನೋಡಬೇಕು. ನೆಲಮಟ್ಟದ ಶಿವಲಿಂಗ, ಇಲ್ಲಿರುವ ನಂದಿಯ ಮುಖ ಬಲು ಸೊಗಸಾಗಿದೆ. ಸೌಮ್ಯ ಭಾವದಲ್ಲಿದೆ.

ಹನುಮಂತನ ಉಬ್ಬು ಶಿಲ್ಪ ಮಂದಿರ ಚಿಕ್ಕದಿದೆ.

ಶನಿಮಹಾತ್ಮ ದೇವರ ದೇಗುಲವಿದೆ. ಇಲ್ಲಿ ದೀಪವನ್ನು ಬೆಳಗಿಸ ಬಹುದು. ಇಲ್ಲಿಯೇ ಸಿಗುತ್ತದೆ. ಪಕ್ಕದಲ್ಲಿ ಗೋಡೆಗೆ ತಾಗಿದಂತೆ ವೀರಭದ್ರನ ಮೂರ್ತಿಯೂ ಇದೆ.

ರಾಮನಮಂದಿರವು ಎಡಗಡೆಯಿದೆ. ಬಿಳಿಶಿಲೆಯ ರಾಮ, ಸೀತ, ಲಕ್ಷ್ಮಣ, ಹನುಮನದು ಪುಟ್ಟ ಮೂರ್ತಿಗಳು. ಇದರ ಎದುರಿಗೆ ಇರುವ ಗುಡಿಯಲ್ಲಿ ಕೇಸರಿ ಹನುಮನ ದೊಡ್ಡ ಮೂರ್ತಿ. ಇಲ್ಲಿ ಹಲವಾರು ರೀತಿಯ ಲಿಂಗಗಳಿವೆ.

ಶ್ರೀ ರಾಧಾಕೃಷ್ಣರ ಪುಟ್ಟ ಮೂರ್ತಿಗಳಿರುವ ಚಿಕ್ಕ ಗುಡಿ.

ಶ್ರೀ ಆದಿ ವಿಶಾಲಾಕ್ಷಿಯ ಪುಟ್ಟ ದೇವಾಲಯ. ಮಂದಹಾಸದ ಮುದ್ದಾದ ಪುಟ್ಟ ಮುಖ.

* ಚಾರ್ ನಂಬರ್ ಗೇಟ್ : ಗ್ಯಾನವ್ಯಾಪಿ

ಇಲ್ಲಿಯಂತೂ ಎಲ್ಲಕಡೆಗಳಿಗಿಂತಲೂ ಹೆಚ್ಚು ಸೆಕ್ಯುರಿಟಿಗಳಿರುತ್ತಾರೆ. ದೇವಾಲಯಕ್ಕೆ ತಾಗಿದಂತೆಯೇ ಇದೆ ಮಸೀದಿ. "ಗ್ಯಾನವ್ಯಾಪಿ" ಮಂದಿರ. ಇಲ್ಲಿರುವ ಬಾವಿಗೆ ಈ ಹೆಸರು ಇಟ್ಟಿದ್ದಾರೆ.
ಇತಿಹಾಸ: ಹಿಂದೆ ಮುಸಲ್ಮಾನರ ದಾಳಿಯ ಸಮಯದಲ್ಲಿ ಇಲ್ಲಿರುವ ವಿಶ್ವನಾಥನ ಲಿಂಗವನ್ನು ಭಿನ್ನ ಮಾಡುವರು ಎಂದು ಅರಿತ ಬ್ರಾಹ್ಮಣ ಮಂದಿರದ ಪುರೋಹಿತ ಶಿವಲಿಂಗದ ಸಮೇತ ಅಲ್ಲೇ ಇದ್ದ ಬಾವಿಗೆ ಹಾರಿದರಂತೆ. ಇಂದಿಗೂ ಬಾವಿಯಿದೆ. ಬಾವಿಯನ್ನು ಬಿಳಿವಸ್ತ್ರದಿಂದ ಮುಚ್ಚಿರುತ್ತಾರೆ. ಮಧ್ಯದಲ್ಲಿ ಲಿಂಗಾಕಾರವಿದೆ. ಇಲ್ಲಿ ತೀರ್ಥವನ್ನು ಕೊಡುತ್ತಾರೆ. ಇಲ್ಲಿ ಬೃಹತ್ತಾದ ನಂದಿ ಇದೆ. ಕೇಸರಿ ಬಣ್ಣದ ನಂದಿ ಸ್ವಲ್ಪ ಭಿನ್ನವಾಗಿದೆ. ಗಣಪನಿದ್ದಾನೆ. "ವ್ಯಾಸಮಹರ್ಷಿ" ಕುಳಿತು ಕೊಳ್ಳುತ್ತಿದ್ದ ಪೀಠವೂ ಇದೆ.

ಪುಟ್ಟದಾದ ಸಂತೋಷಿ ಮಾತಾ, ಸತಿ ಸಾವಿತ್ರಿಯ ಚಿಕ್ಕ ಮೂರ್ತಿಗಳೊಂದಿಗೆ ಸುಮಾರು ವಿವಿಧ ಗಾತ್ರದ ಶಿವಲಿಂಗಗಳಿವೆ. ಹನುಮಂತನ ದೊಡ್ಡ ಮೂರ್ತಿಯೂ ಇದೆ.

ಎಲ್ಲವನ್ನೂ ನೋಡಿಕೊಂಡು ಜೊತೆಗೆ ಮಂಗಗಳ ಆಟವಾ ನೋಡುತ್ತಾ ಬಂದರೆ ವಿಶ್ವನಾಥನ ಮಂದಿರದೊಳಗೆ ಇರುತ್ತೇವೆ.


ಮುಂದುವರೆಯುವುದು....................
[8/8, 18:33] Shailaja Sharma: ಅಂಕಣ - 5

ಕಾಶಿ/ವಾರಣಾಸಿ: 4

ಭಕ್ತರ ಚಿತ್ತವೆಲ್ಲ ವಿಶ್ವ ನಾಥನ ದರ್ಶನ ಪಡೆಯುವುದರಲ್ಲಿ ಇರುತ್ತದೆ. ಶಿವ ನಾಮಸ್ಮರಣೆ ಮಾಡುತ್ತಾ ಮಂದಿರದೊಳಗೆ ಅಡಿಯಿಟ್ಟು ಒಳ ಬಂದರೆ ಬೃಹತ್ತಾದ ಎರಡು ಗಂಟೆಗಳು ಕಾಣಿಸುತ್ತವೆ. ಆಕರ್ಷಕ ಕಂಬಗಳ ತೆರೆದ ಮಂಟಪದ ಮಧ್ಯೆ ಪುಟ್ಟ ಶಿವಲಿಂಗ. ಬಲಗಡೆ ಗರ್ಭಗುಡಿಯಲ್ಲಿ ಕೇದಾರ ನಾಥೇಶ್ವರ, ಪಾಣಿಪೀಠವಿಲ್ಲ.

ಕಾಶಿ ವಿಶ್ವನಾಥನ ದರ್ಶನ ದರ್ಶನಕ್ಕೆ ಎರಡೇ ಹೆಜ್ಜೆ, ಬೋಲೇನಾಥನ ಜಪ ಮಾಡುತ್ತ ಮುಖ್ಯ ಗರ್ಭಗುಡಿಯೊಳಗೆ ಬಂದಾಗ ಅತೀ ಸನಿಹದಲ್ಲೇ ಸಾಲಿಗ್ರಾಮ ಶಿಲೆಯ ಆಕರ್ಷಕ ಶಿವಲಿಂಗ ಕಾಶಿವಿಶ್ವನಾಥನ ವಾಗುತ್ತದೆ. ಲಿಂಗದ ಸುತ್ತಲೂ ಬೆಳ್ಳಿಯ ಕವಚ. ಪ್ರಕಾಶಮಾನವಾದ ಶಿವನ ನೋಡುತ್ತಿದ್ದರೆ, ಏನೋ ಒಂದು ರೀತಿಯ ನೆಮ್ಮದಿ ಮತ್ತು ವಿವರಿಸಲಾಗದಂತಹ ಸಂತೋಷ ಉಂಟಾಗುತ್ತದೆ. ಚಿಕ್ಕ ಗರ್ಭಗುಡಿಯ ಒಂದು ಬದಿಯಲ್ಲಿ ನೆಲೆಸಿರುವ ವಿಶ್ವನಾಥನಿಗೆ ನಮಿಸಿ ಹೊರ ಬರಲು ಮನಸ್ಸೇ ಬರುವುದಿಲ್ಲ.

* ವಿಶ್ವ ನಾಥನ ನೋಡಿ ಹೊರ ಬಂದರೆ ಮತ್ತೊಂದು ಎರಡು ದ್ವಾರದ ಗರ್ಭಗುಡಿಯಲ್ಲಿ ಅನ್ನಪೂರ್ಣೇಶ್ವರಿಯ ದರ್ಶನ. ಉಬ್ಬು ಶಿಲ್ಪದ ವಿಶಾಲವಾದ ಮುಖ, ನಿಂತಿರುವ ಮೂರ್ತಿಗೆ ಬೆಳ್ಳಿಯ ಹೊದಿಕೆ. ಇಲ್ಲಿಯೂ ಅನೇಕ ಚಿಕ್ಕ ಚಿಕ್ಕ ಲಿಂಗಗಳಿವೆ.

* ತಗ್ಗಿನಲ್ಲಿ ಕುಬೇರ ಲಿಂಗ ವಿದೆ.

*ಅನೇಕ ಲಿಂಗಗಳ, ದೇವತಾ ಮೂರ್ತಿ ಗಳಿವೆ.

* ಎರಡು ದ್ವಾರದ ಮತ್ತೊಂದು ಗರ್ಭಗುಡಿಯಲ್ಲಿ ಶ್ರೀ ಪಾರ್ವತಿದೇವಿ ನೆಲೆಸಿದ್ದಾಳೆ. ವಿಶಾಲ ನೇತ್ರೆ, ಅತ್ಯಾಕರ್ಷಕ ಮೂರ್ತಿ, ಕುಳಿತಿರುವ ಭಂಗಿ. ಈ ದೇವಿಯ ಮೂರ್ತಿ ವಿಶೇಷವಾಗಿದೆ. ದೇವಿಯ ಬಲಗಡೆ ಮುಂಭಾಗದಲ್ಲಿ ಗಣಪನೂ ಇದ್ದಾನೆ.

* ಪ್ರಾಕಾರದೊಳಗೆ ಬೇರೆ ಬೇರೆ ಗರ್ಭಗುಡಿಯಲ್ಲಿ ತಾರಕೇಶ್ವರ, ಅವಿಮುಕ್ತೇಶ್ವರ, ಹಾಟಕೇಶ್ವರ, ಶ್ರೀ ಸತ್ಯನಾರಾಯಣ, ಪಂಚ ಲಿಂಗಗಳು, ನಂದೀಶ್ವರ ರೊಂದಿಗೆ ಶ್ರೀ ಲಕ್ಷ್ಮೀ, ನಾರಾಯಣ ಪುಟ್ಟದಾದ ಉಬ್ಬು ಶಿಲ್ಪದ ಮೂರ್ತಿಗಳನ್ನು ಪ್ರದಕ್ಷಿಣಾ ಪಥದಲ್ಲಿ ನೋಡಬಹುದು.

ದೇವಾಲಯದ ಒಂದು ಬದಿಯ ಗೋಡೆಯಲ್ಲಿ ಅಮೃತ ಶಿಲೆಯಲ್ಲಿ ಶಿವನ ಪರಿವಾರದ ಉಬ್ಬು ಶಿಲ್ಪಗಳನ್ನು ನೋಡಬಹುದು. ಅದರಲ್ಲಿ ತಂದೆ ತಾಯಿಗೆ ನಟಿಸುತ್ತಿರುವ ಮುದ್ದು ಗಣಪನ ಮೂರ್ತಿ ಬಲು ಸುಂದರ.

ಗರ್ಭಗುಡಿಯ ಮೇಲಿರುವ ಗೋಪುರದಲ್ಲಿ 3 ಕಲಶಗಳಿವೆ. ಇವುಗಳು ಬಂಗಾರದ ಕಲಶಗಳು. ಎರಡು ಕಲಶಗಳು ಸಂಪೂರ್ಣವಾಗಿ ಸ್ವರ್ಣದಿಂದ ಮಾಡಿರುವುದಂತೆ. ಮತ್ತೊಂದು ಕಲಶಕ್ಕೆ ಬಂಗಾರದ ತಗಡಿನ ಹೊದಿಕೆ ಅಳವಡಿಸಲಾಗಿದೆ ಎನ್ನುತ್ತಾರೆ.

ಎಲ್ಲಿಯೂ ಕಾಣದಷ್ಟು ಸೆಕ್ಯುರಿಟಿಯನ್ನು ಈ ಮಂದಿರದಲ್ಲಿ ಕಾಣ ಬಹುದು.

ಶಿವನ ಆವಾಸಸ್ಥಾನವಾದ ಕೈಲಾಸ ದಲ್ಲಿ ನಂದಿ, ಭೃಂಗಿ, ಭಕ್ತ ಗಣಗಳು ಶಂಕರನ ಸುತ್ತಮುತ್ತಲೂ ಇರುವಂತೆ, ಇಲ್ಲಿಯೂ ಕಾಶಿ ವಿಶ್ವ ನಾಥನ ಮಂದಿರದ ಒಳಗೂ, ಹೊರಗೂ ಅನೇಕ ಪೋಲೀಸರು, ಅಧಿಕಾರಿಗಳು, ಮಿಲಿಟರಿ ಗಾರ್ಡ್ ಗಳು ಇನ್ನು ಮುಂತಾದವರು ಇರುತ್ತಾರೆ. ಇದೂ ಸಹ ಒಂದು ವಿಧದಲ್ಲಿ ಕೈಲಾಸ ವೇ ಆಗಿದೆ.

"ವಿಶಾಲಾಕ್ಷಿ ಮಂದಿರ"

ಶಕ್ತಿ ಪೀಠಗಳಲ್ಲಿ ಒಂದಾದ ದೇವಿ ದೇವಾಲಯ ಕ್ಕೆ ವಿಶ್ವನಾಥನ ಮಂದಿರದಿಂದ ಐದು ನಿಮಿಷದ ಕಿರಿದಾದ ದಾರಿ. ಮೀರ್ ಘಾಟ್ ಬಳಿ ಇದೆ.

ವಿಶಾಲ ಮಂದಿರದ ಮಧ್ಯಭಾಗದಲ್ಲಿ ನೆಲೆಸಿದ್ದಾಳೆ. ಇಲ್ಲಿ ಎರಡು ಮೂರ್ತಿಗಳಿವೆ. ಒಂದು ಮೂರ್ತಿಯನ್ನು ಉದ್ಭವ ಮೂರ್ತಿ ಎನ್ನುವರು. ಕೃಷ್ಣ ಶಿಲೆಯ ಕುಳಿತಿರುವ ಭಂಗಿಯದು ಸತಿದೇವಿಯ ಅಂಶ. ಇದರ ಮುಂಭಾಗದಲ್ಲಿ ಇರುವ ಮತ್ತೊಂದು ಮೂರ್ತಿಯನ್ನು ಆದಿಗುರು ಶಂಕರಾಚಾರ್ಯರು ಪ್ರತಿಷ್ಠಾಪಿಸಿದರಂತೆ. ಶ್ರೀಚಕ್ರ ವಿದೆ.

ಇತ್ತೀಚೆಗೆ ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ.



ಮುಂದುವರೆಯುವುದು.............
[8/8, 18:33] Shailaja Sharma: ಅಂಕಣ 6

ಕಾಶಿ/ವಾರಣಾಸಿ: 5

ಘಾಟ್ ಗಳು......

ಕಾಶಿ ಪಟ್ಟಣದ ಸುತ್ತಲೂ ಸುಮಾರು 7 ಕಿ. ಮೀ. ಉದ್ದದ ಗಂಗಾತೀರದಲ್ಲಿ 80 ಕ್ಕೂ ಹೆಚ್ಚು ಘಾಟ್ ಗಳಿವೆ. ಕೆಲವು ದೇವಾಲಯಗಳಿಗೆ ಸೇರಿದೆ ಹಾಗೂ ಖಾಸಗಿ ಒಡೆತನದಲ್ಲಿವೆ.

ಮಣಿಕರ್ಣೀಕ ಘಾಟ್ : ಕಾಶಿ ಗೆ ಬಂದವರು ಹೆಚ್ಚಾಗಿ ಇಲ್ಲಿಯೇ ಗಂಗಾನದಿಯಲ್ಲಿ ಸ್ನಾನ ಮಾಡುವುದು.

ಹರಿಶ್ಚಂದ್ರ ಘಾಟ್: ರಾಜಾ ಹರಿಶ್ಚಂದ್ರನಿದ್ದ ಸ್ಥಳ. ಅಂದಿನಿಂದ ಇಂದಿನವರೆಗೂ ಇಲ್ಲಿನ ತೀರದಲ್ಲಿ ದಹನ ಕ್ರಿಯೆ ನಿಂತೇ ಇಲ್ಲ ಎನ್ನುವರು.

ಹನುಮನ್ ಘಾಟ್ : ಹನುಮನ ಮಂದಿರವಿದೆ.

ಪಂಚಗಂಗಾ ಘಾಟ್: ಕಿರಣ, ಗಂಗಾ, ಯಮುನಾ, ಸರಸ್ವತಿ, ಧುತಪಾಪ ನದಿಗಳ ಸಂಗಮ ಸ್ಥಳ.

ಪ್ರಮುಖವಾದ ಬಿಂದು ಮಾಧವ ದೇವಾಲಯವಿದೆ.

ಕಾಶಿಯನ್ನು ವಿಷ್ಣು ಕಾಶಿ ಮತ್ತು ಶಿವ ಕಾಶಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮಣಿಕರ್ಣಿಕಾ ಘಾಟ್‌ನಿಂದ ಹಿಡಿದು ಆದಿ ಕೇಶವ ಘಾಟ್‌ವರೆಗೆ ವಿಷ್ಣು ಕಾಶಿ ಮತ್ತು ಮಣಿಕರ್ಣಿಕಾ ಘಾಟ್‌ನಿಂದ ಹಿಡಿದು ಅಸ್ಸಿ ಘಾಟ್‌ವರೆಗೆ ಶಿವ ಕಾಶಿ ಎಂದು ಹೇಳಲಾಗುತ್ತದೆ. ಗ್ರಂಥಗಳ ಪ್ರಕಾರ ಶಿವನ ವಿನಂತಿಯ ಮೇರೆಗೆ ವಿಷ್ಣು ಕಾಶಿಯನ್ನು ಶಿವನಿಗೆ ದಾನವಾಗಿ ನೀಡಿದ. ವಿಷ್ಣುವಿನಿಂದ ಶಿವನು ಕಾಶಿಯನ್ನು ಸ್ವೀಕರಿಸಿದ ನಂತರ ಅರ್ಧ ಭಾಗವನ್ನು ವಿಷ್ಣುವಿಗೇ ಹಿಂತಿರುಗಿ ದಾನವಾಗಿ ಕೊಟ್ಟಎಂದು ಹೇಳಲಾಗುತ್ತದೆ.

ವಾರಣಾಸಿಯ ಮುಖ್ಯ ದೇವಾಲಯಗಳಾದ ಕಾಶಿ ವಿಶ್ವನಾಥ, ಕಾಲಭೈರವ ಹಲವರಿಗೆ ತಿಳಿದಿದೆ. ಆದರೆ ಬಿಂದು ಮಾಧಮ ಮಂದಿರ ಹೆಚ್ಚಾಗಿ ತಿಳಿದಿರುವುದಿಲ್ಲ. ಆದರೆ ಬಿಂದು ಮಾಧವ ಮಂದಿರದ ದರ್ಶನವಿಲ್ಲದೆ ಕಾಶಿ ಪ್ರವಾಸ ಪೂರ್ಣಗೊಳ್ಳುವುದಿಲ್ಲ ಎಂದು ಹೇಳುತ್ತಾರೆ.

ವಿಷ್ಣು ಕುಂಡ

ವಿಷ್ಣುವಿಗೆ ಕೃತಜ್ಞತಾಪೂರ್ವವಾಗಿ ಶಿವನು ವಿಷ್ಣು ಕುಂಡವನ್ನು ರಚಿಸಿದನೆಂದು ಹೇಳಲಾಗುತ್ತದೆ. ಈ ಕುಂಡದಲ್ಲಿ ಭಕ್ತಾದಿಗಳು ಮಧ್ಯಾಹ್ನ 12 ಗಂಟೆಗೆ ಸ್ನಾನ ಮಾಡಿದರೆ ಅವರು ಹುಟ್ಟು ಮತ್ತು ಸಾವಿನಿಂದ ಮುಕ್ತಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಈ ವಿಷ್ಣು ಕುಂಡದಲ್ಲಿ ಒಮ್ಮೆ ಶಿವನ ಕಿವಿಯ ಆಭರಣದ ರತ್ನವು ಬಿದ್ದ ಕಾರಣ ಇದನ್ನು ಮಣಿಕರ್ಣಿಕಾ ಕುಂಡ ಎಂದೂ ಕರೆಯುತ್ತಾರೆ.

ದಶಾಶ್ವಮೇಧ ಘಾಟ್: ಅಶ್ವಮೇಧ ಯಾಗವನ್ನು ಮಾಡಿರುವ ಸ್ಥಳ. ಇಲ್ಲಿನ ಗಂಗಾರತಿ ಬಹಳ ಪ್ರಸಿದ್ಧಿ ಪಡೆದಿದೆ. ಗಂಗಾ ದೇವಿಯ ಮಂದಿರವಿದೆ.

ತುಳಸಿ ಘಾಟ್: ಸಂತ ತುಳಸಿದಾಸರು ಧ್ಯಾನಿಸುತ್ತಿದ್ದ ಜಾಗ.

ಮೀರಾ ಘಾಟ್: ನೇಪಾಳಿ ಶೈಲಿಯ ಮಂದಿರವಿದೆ.

ಲಲಿತಾ ಘಾಟ್: ಮರದಿಂದ ನಿರ್ಮಿಸಿರುವ ನೇಪಾಳಿ ಶೈಲಿಯ ಗಂಗಾ ಕೇಶವ ಮಂದಿರವಿದೆ.

ಮನಮಂದಿರ ಘಾಟ್: ಸವಾಯಿ ರಾಜಾ ಕಟ್ಟಿಸಿರುವ ಮಂದಿರ ಹಾಗೂ ಪ್ರಖ್ಯಾತ ವೇದ ಪಾಠ ಶಾಲೆಯಿದೆ.

ದಂಡಿ ಘಾಟ್: ಫಕೀರ ಬಾಬಾಗಳು, ಸಾಧುಗಳು ಹೆಚ್ಚಾಗಿ ಇರುವರು.

ಕೇದಾರ ಘಾಟ್: ಶ್ರೀ ಶೃಂಗೇರಿ ನಾರದ ದೇವಿಯ ಪುರಾತನ ಮಂದಿರವಿದೆ. ಇಲ್ಲಿ ಆದಿಗುರು ಶಂಕರಾಚಾರ್ಯರು ನೆಲೆಸಿದ್ದರು.

ಚಿಂತಾಹರಣ ಗಣೇಶ / ಚಿಂತಾಮಣಿ ಗಣೇಶನ ಮಂದಿರವಿದೆ. ನಿಂತಿರುವ ಕೇಸರಿ ಗಣಪನ ನಗು ಮುಖ ಮತ್ತೆ ಮತ್ತೆ ನೋಡುವಂತಾಗುತ್ತದೆ.


ಮುಂದುವರೆಯುವುದು.......
[8/8, 18:34] Shailaja Sharma: ಅಂಕಣ : 7

ಕಾಶಿ/ವಾರಣಾಸಿ : 6

"ಕಾಶಿ ವಿಶ್ವನಾಥನ ದೇವಾಲಯದಿಂದ 1 ರಿಂದ 15 ಕಿ. ಮೀ. ಅಂತರದಲ್ಲಿ ನೋಡ ಬೇಕಾದ ಪ್ರಮುಖ ಸ್ಥಳಗಳು"

*ಶ್ರೀ ಕವಡೆ ಗೌರಿ ದೇವಾಲಯ : ಶಿವನ ತಂಗಿ ಎಂದು ಹೇಳುತ್ತಾರೆ. ಪುಟ್ಟ ಮಂದಿರ. ಇಲ್ಲಿ ಕವಡೆಯನ್ನು ದೇವಿಯೇ ಮೇಲೆ ಅಕ್ಷತೆಯಂತೆ ಹಾಕುತ್ತಾರೆ.

* ಸಂಕಟಮೋಚನ ಹನುಮಾನ್ ಮಂದಿರ : ಪೂರ್ಣ ಮುಖ ದರ್ಶನ, ಕೇಸರಿ ಹನುಮನದು ನಿಂತಿರುವ ಭಂಗಿ. ಭೌತಿಕ ಸಂಕಟಗಳಿಂದ ಮುಕ್ತಿ ಕೊಡುವ ಹನುಮಂತ ಸ್ಥಳೀಯರ ಆರಾಧ್ಯ ದೈವ.

* ಕಾಲಭೈರವೇಶ್ವರ ದೇವಾಲಯ : ಕಾಶಿ ಕೊತ್ವಾಲ ನೆಂದು ಕರೆಯುವರು. ಇವನ ಅಪ್ಪಣೆ ಇಲ್ಲದೆ ಕಾಶಿಯಲ್ಲಿ ಇರಲು ಸಾಧ್ಯವೇ ಇಲ್ಲ ಎನ್ನುವರು. ಕಪ್ಪು ಶಿಲೆಯ ದೊಡ್ಡ ಮೂರ್ತಿ ಮಂದಸ್ಮಿತವಾಗಿದೆ.

*ತುಳಸಿ ಮಾನಸ ಮಂದಿರ : ಈ ಮಂದಿರದ ಗೋಡೆಗಳಲ್ಲಿ ಸಂಪೂರ್ಣ "ರಾಮಚರಿತ ಮಾನಸ" ವನ್ನು ಬರೆಯಲಾಗಿದೆ.

* ದುರ್ಗಾ ಮಾತೆ ಮಂದಿರ : ನಾಗರ ವಾಸ್ತು ಶೈಲಿಯ ಮಂದಿರ, ಸಾಧಾರಣ ಕಂಬಗಳಲ್ಲಿ ತೆರೆದ ಮಂಟಪ, ಗರ್ಭಗುಡಿಯಲ್ಲಿ ಚಿಕ್ಕದಾದ ಸುಂದರ ಮೂರ್ತಿ. ಇಡೀ ಮಂದಿರ ಕಂದುಕೆಂಪು ಬಣ್ಣದಲ್ಲಿದೆ. ಇಲ್ಲಿನ ಪುಷ್ಕರಿಣಿಯನ್ನು ದುರ್ಗಾ ಕುಂಡ ಎನ್ನುತ್ತಾರೆ. ಒಳಾವರಣದ ಗೋಡೆಯಲ್ಲಿ ಲಕ್ಷ್ಮಿ, ಸರಸ್ವತಿ ದೇವಿಯೇ ಉಬ್ಬು ಶಿಲ್ಪಗಳಿವೆ.
ಈ ಮಂದಿರದ ಪಕ್ಕದಲ್ಲಿ 'ಬಡಾ ಗಣೇಶನ' ಮಂದಿರವಿದೆ.

ಸಂತ ಕಬೀರ್ ಮಂದಿರ: ವಾರಣಾಸಿಯಲ್ಲಿ ಹುಟ್ಟಿ ಬೆಳೆದು, ಹಿಂದೂ ಮುಸಲ್ಮಾನರಿಗೆ ಸಾಮರಸ್ಯದ ಪಾಠವನ್ನು ಬೋಧಿಸಿದರು.

ಧರ್ಮ ಚಕ್ರ ಇಂಡೋ ಜಪಾನ್ ಶೈಲಿಯ ಮಂದಿರ:
1992 ರಲ್ಲಿ ಪ್ರತಿಷ್ಟಾಪನೆಗೊಂಡಿದೆ. ಇಲ್ಲಿರುವ ಮೂರ್ತಿಗಳೆಲ್ಲಾ ಶ್ರೀಗಂಧದಿಂದ ಮಾಡಲಾಗಿದೆ. ಮಲಗಿರುವ ಭಂಗಿಯ ಬುದ್ಧನ ಮೂರ್ತಿಯನ್ನು "ಸಿದ್ಧಪುರುಷನ ಮೂರ್ತಿ" ಎನ್ನುತ್ತಾರೆ.

"ಬನಾರಸ್ ಹಿಂದೂ ವಿಶ್ವವಿದ್ಯಾಲಯ" ಮತ್ತು ಬಿರ್ಲಾ ಮಂದಿರ.:
ಮದನ್ ಮೋಹನ್ ಮಾಲವೀಯ ಅವರಿಂದ ಸ್ಥಾಪಿತವಾದ ವಿವಿ. ಏಷ್ಯಾದಲ್ಲಿಯೇ ಅತೀ ದೊಡ್ಡ ವಿವಿ.

"ಆನಂದ ಭವನ"
ನೆಹರು ಅವರ ಮನೆ/ಬಂಗಲೆ ಇಂದು ವಸ್ತು ಸಂಗ್ರಹಾಲಯವಾಗಿದೆ. ಇಂದಿರಾ ಗಾಂಧಿಯವರು ಮದುವೆಯಾದ ಸ್ಥಳವೂ ಇದಾಗಿದೆ.

"ಸಾರಾನಾಥ್"

ಗೌತಮಬುದ್ಧ ತನ್ನ ಅಷ್ಟಾಂಗ ಮಾರ್ಗದ ಮೊದಲು ಬೋಧನೆ ಮಾಡಲು ಆಯ್ಕೆ ಮಾಡಿದ ಸ್ಥಳ. ಮೊದಲು ಇದು ಜಿಂಕೆಗಳ ಉದ್ಯಾನವಾಗಿತ್ತು. ಸಾರಂಗನಾಥ ಎಂಬ ಹೆಸರಿತ್ತು. ಅಂತರದಲ್ಲಿ ಸಾರಾನಾಥವಾಯಿತು. ಇಲ್ಲಿ "ಧಾಯಕ್ ಸ್ತೂಪ, ಚೌಖಂಡೀ ಸ್ತೂಪ, ಮಹಾಧರ್ಮರಾಜಿಕಾ ಸ್ತೂಪ, ಮೂಲ ಗಂಗಾಧರ ಕೋಟಿ" ಯೊಂದಿಗೆ ಇನ್ನು ಮುಂತಾದ ಬೌದ್ಧ ಧರ್ಮದ ಸ್ತೂಪ ಗಳನ್ನು ನೋಡಿ ಬಹುದು. ವಸ್ತು ಸಂಗ್ರಹಾಲಯವಿದೆ. ದೊಡ್ಡದಾದ
ಘಂಟೆ ಇದೆ. ಇದರ ಶಬ್ದವು ಸುಮಾರು 3 km ವರೆಗೂ ಕೇಳಿಸುತ್ತದೆಯಂತೆ. ಎತ್ತರದ ಬುಧ್ಧನೊಂದಿಗಿನ ಐದು ಜನ ಶಿಷ್ಯರ ಕಲಾಕೃತಿ ಆಕರ್ಷಕವಾಗಿದೆ.

"ರಾಮನಗರ / ವ್ಯಾಸ ಕಾಶಿ "
(ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ)
ರಾಮನಗರ ಅರಮನೆಯು ಇಂದು ವಸ್ತು ಸಂಗ್ರಹಾಲಯವಾಗಿದೆ. ಇಲ್ಲಿರುವ ಪುರಾತನ ವಸ್ತು ಗಳಲ್ಲಿ "ಆನೆಯ ಕಿರೀಟ" ಬಹುಬೇಗ ಆಕರ್ಷಿಸುತ್ತದೆ. ಇಲ್ಲಿ ನಡೆಸುವ "ರಾಮಲೀಲಾ" ಉತ್ಸವ ವಿಶ್ವ ಪ್ರಸಿದ್ಧವಾಗಿದೆ. ಅರಮನೆಯೊಳಗಿಂದಲೇ ಮಂದಿರಕ್ಕೆ ಬರಬೇಕು.

ಗಂಗೆಯ ಒಂದು ತಟದಲ್ಲಿ ಕಾಶಿ, ಮತ್ತೊಂದರಲ್ಲಿ ವ್ಯಾಸ ಕಾಶಿ ಇದೆ.

ವ್ಯಾಸ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಇಲ್ಲಿ ಮೂರು ಶಿವಲಿಂಗ ಗಳಿವೆ. ಇದನ್ನು ವಿಶ್ವನಾಥ, ವ್ಯಾಸ ಮುನಿ ಹಾಗೂ ಶುಕಮುನಿ ಶಿವಲಿಂಗಗಳು ಎನ್ನುವರು. ಕಾಶಿ ಯೊಂದಿಗೆ ವ್ಯಾಸ ಕಾಶಿ ನೋಡಿದರೆ ಯಾತ್ರೆಯ ಸಂಪೂರ್ಣ ಫಲಪ್ರಾಪ್ತಿ ಎನ್ನುವುದು ಹಲವಾರ ನಂಬಿಕೆ ಹಾಗೂ ಪ್ರತೀತಿ.

ಕಾಶಿಯ ಬಗೆಗಿನ ಅಲ್ಪ ಮಾಹಿತಿ ಮುಗಿಯಿತು.......
🙏🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ