ಮಂಗಳವಾರ, ಜನವರಿ 17, 2017

ಗಣೇಶನ ಶಕ್ತಿ

  ವಿಷ್ಣು ಲಕ್ಷ್ಮೀದೇವಿಯನ್ನು ವಿವಾಹವಾಗುವಾಗ ದೇವತೆಗಳಿಗೆಲ್ಲ ಒಂದೊಂದು ಕೆಲಸವನ್ನು ಒಪ್ಪಿಸುತ್ತಾನೆ. ದೇವತೆಗಳಿಗೆ ಗಣೇಶ ಮದುವೆಗೆ ಬರುವುದು ಇಷ್ಟವಾಗುವುದಿಲ್ಲ. ಹೀಗಾಗಿ ಅವರು ಗಣೇಶನನ್ನು ಯಾವುದಕ್ಕೂ ಕರೆಯುವುದಿಲ್ಲ.
   ಅವನ ದೊಡ್ಡ ಹೊಟ್ಟೆ, ಮೊರದಂಥ ಅಗಲ ಕಿವಿಗಳು, ಹೊಟ್ಟೆಗೆ ಸುತ್ತಿದ ಹಾವು ಅವನ ದಪ್ಪದಪ್ಪ ಕಾಲುಗಳು "ಅಯ್ಯೋ ಛೀ ಈ ಗಣೇಶ ಬೇಡಪ್ಪಾ,ನಮ್ಮ ಜೊತೆ ಬರುವುದು ಅವನೋ ಅವನ ವೇಷವೋ' ಎಂದು ಮೂಗು ಮುರಿಯುತ್ತಾರೆ. ವಿಷ್ಣುಗೂ ಗಣೇಶ ಮದುವೆಗೆ ಬರುವುದು ಬೇಡ ಎಂದು ಹೇಳಿಕೊಡುತ್ತಾರೆ. ವಿಷ್ಣುಗೆ ಇದು ಇಷ್ಟವಾಗದಿದ್ದರೂ ದೇವತೆಗಳ ಒತ್ತಾಯಕ್ಕೆ ಕಟ್ಟುಬಿದ್ದು ಗಣೇಶನನು,° "ನೀನು ಸ್ವರ್ಗವನ್ನು ನೋಡಿಕೊಂಡು ಇಲ್ಲೇ ಇರು. ಮದುವೆಗೆ ಬರುವುದು ಬೇಡ' ಎಂದು ಹೇಳುತ್ತಾನೆ.
    ಗಣೇಶನಿಗೆ ನಿರಾಶೆಯಾದರೂ ಒಪ್ಪಿಕೊಳ್ಳುತ್ತಾನೆ. ಎಲ್ಲರೂ ಮದುವೆಗೆ ಹೊರಟುಬಿಡುತ್ತಾರೆ.ಕಲಹ ಪ್ರಿಯನಾದ ನಾರದನಿಗೆ ಇದು ಗೊತ್ತಾಗುತ್ತದೆ. ದೇವತೆಗಳ ಹುನ್ನಾರವೂ ತಿಳಿಯುತ್ತದೆ. ಅವನು ಓಡೋಡಿ ಬಂದು ಗಣೇಶನ ಬಳಿ ಇದೆಲ್ಲವನ್ನೂ ಹೇಳುತ್ತಾನೆ. ನೀನು ಮದುವೆಗೆ ಹೊಗುವುದು ಬೇಡ ಎಂದ ದೇವತೆಗಳಿಗೆ ಪಾಠ ಕಲಿಸು ಎಂದು ಒಂದು ಉಪಾಯವನ್ನು ಹೇಳಿಕೊಡುತ್ತಾನೆ.
   ಅದರಂತೆ ಗಣೇಶ ತನ್ನ ವಾಹನವಾದ ಮೂಷಿಕವನ್ನು ಕರೆದು ವಿಷ್ಣು ಹಾಗೂ ಲಕ್ಷ್ಮಿಯ ಮೆರವಣಿಗೆ ಹೊರಡುವ ರಸ್ತೆಯನ್ನು ಹಳ್ಳಕೊಳ್ಳಗಳಿರುವಂತೆ ಮಾಡು ಎಂದು ಆಜ್ಞೆ ಮಾಡುತ್ತಾನೆ. ಮೂಷಿಕವು ತನ್ನ ಸೈನ್ಯದೊಡನೆ ರಸ್ತೆಯನ್ನು ಕೊರೆದು ಒಳಗಡೆ ಡೊಗರು ಮಾಡಿಬಿಡುತ್ತದೆ. ಮೇಲ್ನೋಟಕ್ಕೆ ರಸ್ತೆ ಸರಿಯಾಗಿ ಕಂಡರೂ ಮೆರವಣಿಗೆ ಬಂದಾಗ ರಥಗಳು ಕುದುರೆಗಳು ಎಲ್ಲವೂ ಆ ಹಳ್ಳದಲ್ಲಿ ಪಲ್ಟಿಹೊಡೆಯುತ್ತದೆ. ದೇವತೆಗಳು ಎಷ್ಟು ಪ್ರಯತ್ನಿಸಿದರೂ ರಥಗಳನ್ನು ಮೇಲೆತ್ತಲು ಆಗುವುದಿಲ್ಲ.
    ಆಗ ಅಲ್ಲಿಯೇ ಹೋಗುತ್ತಿದ್ದ ಆ ಊರಿನ ರೈತನೊಬ್ಬನು ಕಾಣುತ್ತಾನೆ. ಅವನನ್ನು ಕರೆದು ಸಹಾಯ ಮಾಡಲು ಕೇಳಿಕೊಳ್ಳುತ್ತಾರೆ. ಅವನು ಜೈ ಗಣೇಶ ಎಂದು ಜೋರಾಗಿ ಕೂಗುತ್ತಾ ರಥವನ್ನು ಮೇಲೆತ್ತುತ್ತಾನೆ.
ರಥ ಸುಲಭವಾಗಿ ಮೇಲೆ ಬರುತ್ತದೆ. ದೇವತೆಗಳಿಗೆ ಆಶ್ಚರ್ಯವಾಗುತ್ತದೆ. "ನೀನು ರಥವನ್ನು ಮೇಲಕ್ಕೆತ್ತುವಾಗ ಜೈ ಗಣೇಶ ಎಂದು ಏಕೆ ಕೂಗಿದೆ' ಎಂದು ರೈತನನ್ನು ಕೇಳುತ್ತಾರೆ.
  ಅದಕ್ಕೆ ರೈತ ಹೇಳುತ್ತಾನೆ, "ಗಣೇಶನನ್ನು ನೆನೆದು ಯಾವ ಕೆಲಸ ಮಾಡಿದರೂ ಜಯವಾಗುತ್ತದೆ, ಹಾಗೂ ಗಣೇಶ ವಿಘ್ನ ನಿವಾರಕ. ಅವನನ್ನು ನೆನೆದರೆ ನಮ್ಮ ಕೆಲಸದಲ್ಲಾಗುವ ವಿಘ್ನಗಳನ್ನು ತಪ್ಪಿಸುತ್ತಾನೆ. ಅವನನ್ನು ನೆನೆಯದೆ ನಾವು ಯಾವ ಕೆಲಸವನ್ನೂ ಮಾಡುವುದಿಲ್ಲ'  
   ಇದನ್ನು ಕೇಳಿ ದೇವತೆಗಳಿಗೆ ನಾಚಿಕೆಯಾಗುತ್ತದೆ. ತಮ್ಮ ತಪ್ಪಿನ ಅರಿವಾಗುತ್ತದೆ. ಗಣೇಶನನ್ನು ಮದುವೆಗೆ ಆಹ್ವಾನಿಸಲು ವಿಷ್ಣುಗೆ ಕೇಳಿಕೊಳ್ಳುತ್ತಾರೆ. ವಿಷ್ಣು ಮನದಲ್ಲೇ ದೇವತೆಗಳ ಅಜಾನಕ್ಕೆ ನಗುತ್ತಾ ಗಣಪತಿಯನ್ನು ಮದುವೆಗೆ ಆಹ್ವಾನಿಸುತ್ತಾನೆ.
   ಗಣಪತಿ ಬಂದ ತಕ್ಷಣ ರಸ್ತೆ ಮೊದಲಿನಂತೆ ಸಮತಟ್ಟಾಗುತ್ತದೆ. ಮದುವೆಯ ಮೆರವಣಿಗೆ ನಿರ್ವಿಘ್ನವಾಗಿ ಸಾಗುತ್ತದೆ. ದೇವತೆಗಳು ಗಣೇಶನ ಕ್ಷಮೆ ಕೇಳುತ್ತಾರೆ.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ