ಗುರುವಾರ, ಮೇ 12, 2016

ಚಹಾ

 ಚಹಾವು ಕುಡಿಯದೆ ಇರುವ ದಿನವೇ ಇಲ್ಲ ಎನ್ನಬಹುದು.ಚಹಾ ನಮ್ಮ ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.ಚಹ ಎಲ್ಲರ ನೆಚ್ಚಿನ ಸಂಗಾತಿ.ಕೆಲವರ ಸಿಹಿ ಬದುಕಿನಿಂದಾಗಿ ಮಧುಮೇಹಕ್ಕೆ ಒಳಗಾದವರಿಗೂ ಚಹಾದ ನಂಟು ಬಿಡಲಾರದ್ದು.ಅವರು ಸಕ್ಕರೆಯಿಲ್ಲದ ಚಹಾ ಕುಡಿದಾದರೂ ತಮ್ಮ ಮತ್ತು ಚಹಾದ ಜೊತೆಗಿನ ಸಂಬಂಧದ ಕಡಿತವನ್ನು ಮಾಡಿಕೊಳ್ಳುವುದೇ ಇಲ್ಲ.
       ಚಹಾ ಕುಡಿಯೋಣ ಬರೀ., ಎಂಬ ಆತ್ಮಿಯ ಮಾತು ನಮ್ಮನ್ನು ಖುಷಿಗೊಳಿಸುತ್ತದೆ.ಅತಿಥಿಗಳ ಸತ್ಕಾರಕ್ಕೆ ಚಹಾವೇ ಮೊದಲು ಅರ್ಪಿತ.ಕೆಲವರು ಚಹಾ ನಿರಾಕರಿಸುತ್ತಾರೆ ಕಾರಣ ಅವರು  ಚಹಾದ ಸೋದರಿಯಾದ ಕಾಫಿಯನ್ನು ಬಹಳ ಇಷ್ಟಪಡುತ್ತಾರೆ."ಲೋಕೋ ಭಿನ್ನ ರುಚಿಃ"ಅಂತ ನಮ್ಮ ಪೂರ್ವಜರು ಹೇಳಿಲ್ಲವೇ?; ಚಹಾಕ್ಕಿಂತ ಬೇರೆ ಮೆಡಿಸಿನ್ ಇಲ್ಲ ಎಂದು ಹುಷಾರಿಲ್ಲದಾಗ ,ತಲೆನೋವಿದ್ದಾಗ ಹುಟ್ಟುವ ಗಾದೆಮಾತಿದು.
       ವಿದ್ಯಾರ್ಥಿಗಳು ಓದಲು ಆಗದೆ ಇದ್ದಾಗ   ಒಂದು ಸ್ಟ್ರಾಂಗ್ ಟೀ ಕುಡಿಯುವರೆಗೂ ಏಕಾಗ್ರತೆ ಬರಲ್ಲವೆಂದು ಸ್ವಲ್ಪ ವಿಶ್ರಾಂತಿ ಮನಸಿಗೆ ಜೊತೆಗೆ ತಲೆ ಚುರುಕಾಗಿ ಕೆಲಸ ಮಾಡಲು ಕಪ್ ನ ಹಬೆ ಆಘ್ರಾಣಿಸುತ್ತಾ ಗುಟುಕರಿಸುತ್ತೆವೆ. ಚಹಾ ನಮ್ಮ ಹತ್ತಿರದ ಸಂಗಾತಿಯಾಗಿ ಬದುಕಿನುದ್ದಕ್ಕೂ ಜೊತೆಯಾಗಿರುತ್ತೆ.ಹಾಲು ಇಲ್ಲದಾಗ ಕುಡಿಯುವ "ಡಿಕಾಕ್ಷನ್" ಚಹಾ ಆರೋಗ್ಯಕೆ ಒಳ್ಳೆಯದಂತೆ.ಹಾಗಾದರೆ ಇದನ್ನು ಓದಿದ ಮೇಲೆ ಒಂದ್ ಕಪ್ ಚಾ ಕುಡಿದು ಬಿಡಿ.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಎರೆಹುಳು

  ಅಕಶೇರುಕದ ಮುಖ್ಯ ವಂಶಗಳಲ್ಲೊಂದಾದ ವಲಯವಂತ ವಂಶದ (ಅನೀಲಿಡ) ಕೀಟೊಪೋಡ ವರ್ಗದ, ಆಲಿಗೋಕೀಟ ಗಣಕ್ಕೆ ಸೇರಿದೆ. ಕೀಟ ಎಂದರೆ ಈ ಹುಳುವಿನ ಚಲನಾಂಗಗಳಾದ ಸೀಟೆಗಳೆಂದರ್ಥ.
ಎರೆಹುಳುವಿನಲ್ಲಿ ನಾನಾ ಪ್ರಭೇದಗಳಿವೆ. ಲುಂಬ್ರಿಕಸ್ ಟೆರೆಸ್ಟ್ರಿಸ್ ಪ್ರಭೇದ ಯುರೋಪ್ ಮತ್ತು ಉತ್ತರ ಅಮೆರಿಕಗಳಲ್ಲಿದೆ. ಭಾರತದಲ್ಲಿ ಫೆರಿಟೀಮ ಪಾಸ್ತುಮ ಮತ್ತು ಮೆಗಾಸ್ಕೊಲೆಕ್ಸ್‌ ಎಂಬ ಎರಡು ಪ್ರಭೇದಗಳು ಸಾಮಾನ್ಯವಾಗಿ ಕಂಡುಬರುತ್ತವೆ.
    ಎರೆಹುಳು ಮಣ್ಣಿನಲ್ಲಿ ವಾಸಿಸುವ ಒಂದು ಹುಳು. ಇದು ಮಣ್ಣಿನ ಫಲವತ್ತತೆಯನ್ನು ಹೆಚ್ಚು ಮಾಡುತ್ತದೆ. ಅದರ ಜೀರ್ಣಕಾರಿ ವ್ಯವಸ್ಥೆಯು ಅದರ ಶರೀರದ ಉದ್ದಕ್ಕೂ ಹಾದು ಹೋಗುತ್ತದೆ.ರೈತನ ಮಿತ್ರ ನಿಸರ್ಗದ ನೇಗಿಲು ಎಂದೇ ಹೆಸರು ಮಾಡಿರುವ ಎರೆಹುಳ ಜೀವಿ ತಂತ್ರಜ್ಞಾನದ ಯಂತ್ರದಂತೆ ಎರೆಗೊಬ್ಬರ ತಯಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
     ಎರೆಹುಳು ತೇವದ ನೆಲದಲ್ಲಿ ವಾಸಿಸುವುದು , ಗದ್ದೆ, ಕೈತೋಟ ಅಡಕೆ ಮತ್ತು ಬಾಳೆತೋಟ ಹಾಗೂ ತೇವವಿರುವ ಎಲ್ಲ ಭೂಮಿಗಳಲ್ಲೂ ಚಿಕ್ಕ ಚಿಕ್ಕ ಬಿಲಗಳನ್ನು ತೋಡಿಕೊಂಡು ಅದರೊಳಗೆ ವಾಸಿಸುತ್ತದೆ. ಎರೆಹುಳು ಪಕ್ಷಿಗಳಿಗೆ ಉತ್ತಮ ಆಹಾರ, ಶತ್ರುಗಳಿಂದ ಪಾರಾಗಲು ಇದು ಹಗಲು ಬಿಲಗಳಲ್ಲಿ ಹುದುಗಿದ್ದು ರಾತ್ರಿಯಲ್ಲಿ ಮಾತ್ರ ಹೊರಬರುತ್ತದೆ. ಕೊಳೆಯುತ್ತಿರುವ ಎಲೆ, ಕಾಂಡ, ಹುಲ್ಲು ಇದರ ಪ್ರೀತಿಯ ಆಹಾರ. ಆಹಾರದೊಡನೆ ಮಣ್ಣನ್ನೂ ಸೇವಿಸುತ್ತದೆ. ಬಿಲಗಳನ್ನು ತೋಡುವುದರಿಂದ ಭೂಮಿ ಟೊಳ್ಳಾಗಿ ಗಾಳಿಯಾಡಲು ಅನುಕೂಲವಾಗುತ್ತದೆ. ವಿಸರ್ಜಿಸಿದ ಮಲ ಕಸ್ತೂರಿಮಾತ್ರೆಗಳಂತೆ ಭೂಮಿಯ ಮೇಲೆ ಕುಪ್ಪೆ ಕುಪ್ಪೆಯಾಗಿ ಬಿದ್ದಿರುತ್ತದೆ. ಇದಕ್ಕೆ ಕುಪ್ಪಲು ಮಣ್ಣು ಎಂದು ಹೆಸರು. ಇದು ಅತಿ ಫಲವತ್ತಾಗಿರುತ್ತದೆ. ಗಿಡಗಳ ಬೆಳೆವಣಿಗೆಗೆ ಬೇಕಾದ ಎಲ್ಲ ಲವಣಾಂಶಗಳು ಈ ಮಣ್ಣಿನಲ್ಲಿವೆ.
    ಡಾರ್ವಿನ್, ಒಂದು ಎಕರೆಯಲ್ಲಿ ವಾಸಿಸುವ ಎರೆಹುಳುಗಳು ಒಂದು ವರ್ಷದಲ್ಲಿ 18 ಟನ್ ಮಣ್ಣನ್ನು ತಿರುವಿಹಾಕುತ್ತವೆ ಎಂದು ಲೆಕ್ಕಾಚಾರ ಮಾಡಿದ್ದಾನೆ
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕವನದ ಕವಲುಗಳು....







k
ಹೊತ್ತಿಗೆ ಓದಲು ಹೊತ್ತೆಲ್ಲಿ
ಹೊತ್ತ ಹೊತ್ತಿಗೆ ಊಟವಿದ್ದಲ್ಲಿ!
ಘಮ್ಮೆನಿಸುತಿದೆ ಮನದ ಮೂಲೆಯಲ್ಲಿ
ಪ್ರೀತಿಯ ಒಗ್ಗರಣೆ ಸ್ವಾದ!
ಶೇಂಗಾ-ಹುರಿಗಡಲೆ ತಿಂದಂತೆ
ಹುರಿದು ಅರಿಯುವ ಬೆಚ್ಚನೆ ಪ್ರೀತಿ!
ಮುಗಿಲೆತ್ತರಕ್ಕೆ ಹಾರಾಡುವ ಗಾಳಿಪಟದ
ಅಂತೆ ನನ್ನೀ ಬಾಲಗೋಂಚಿ ಮನ!
ಕವಲೊಡೆದ ನೀರಿನ ಕಾಲುವೆಯಂತೆಯೇ
ಟಿಸಿಲೊಡೆದ ವಿಚಾರ ವೃಷ್ಟಿ ಸ್ಫುರಿಸಿದಂತೆ!
-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಹಾರಾಟದ ಹಂತಗಳ ಇತಿಹಾಸ..

  ಹಾರುವ ಆಸೆ ಮಾನವನ ಅತಿ ಪುರಾತನ ಕನಸುಗಳಲ್ಲೊಂದು. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು. ಹಾರಾಡುವ ಕನಸನ್ನು ಸುಲಭವಾಗಿ ನನಸಾಗಿಸುವ ಯಾವ ದಾರಿಯೂ ತೋಚದಾದಾಗ ದಂತಕತೆಗಳಲ್ಲಿ, ಪುರಾಣಗಳಲ್ಲಿ ಹಾರಾಟದ ಕಾಲ್ಪನಿಕ ಚಿತ್ರಗಳು ಮೂಡಿಬಂದವು.
    ತಮ್ಮ ಇಚ್ಛಾಶಕ್ತಿಯಿಂದಲೇ ಆಕಾಶದಲ್ಲಿ ಹಾರಾಡುವ ದೇವಾನುದೇವತೆಗಳ ಕತೆಗಳು, "ತ್ರಿಲೋಕಸಂಚಾರಿ" ನಾರದನ ಪಾತ್ರ, ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನದ ಉಲ್ಲೇಖ, ಹನುಮಂತನ ಸಾಗರೋಲ್ಲಂಘನ ಹಾಗೂ ರಾಮಾಯಣ - ಮಹಾಭಾರತ ಎರಡರಲ್ಲೂ ಯುದ್ಧಗಳ ಸಂದರ್ಭದಲ್ಲಿ ಕಂಡುಬರುವ "ಹಾರಾಡುವ ರಥ"ಗಳ ಕಲ್ಪನೆಗಳು ಈ ತರ್ಕಕ್ಕೆ ಅತ್ಯುತ್ತಮ ನಿದರ್ಶನಗಳು. ಭಾರತವಷ್ಟೇ ಅಲ್ಲದೆ ಪುರಾತನ ಗ್ರೀಸ್, ಈಜಿಪ್ಟ್, ಫಿನ್‌ಲ್ಯಾಂಡ್ ಹಾಗೂ ಪೆರು ದೇಶಗಳ ಪುರಾಣ-ದಂತಕತೆಗಳಲ್ಲೂ ಹಾರಾಡುವ ಮಾನವರ ಹಾಗೂ ಗೂಳಿ, ಕುದುರೆಗಳಂತಹ ಪ್ರಾಣಿಗಳ ಉಲ್ಲೇಖಗಳಿವೆ.
     ಹಾರುವ ಕನಸನ್ನು ಕಂಡು, ತಮ್ಮ ಸಂಶೋಧನೆ - ಪ್ರಯತ್ನಗಳಿಂದ ಅದನ್ನು ನನಸಾಗಿಸಲು ಶ್ರಮಿಸಿದ ಅನೇಕ ಕನಸುಗಾರನ್ನು ನಾವು ಆಧುನಿಕ ಇತಿಹಾಸದಲ್ಲಿ ಕಾಣಬಹುದು. ಇಂತಹ ಕನಸುಗಾರರ ಪಟ್ಟಿಯ ಮೊದಲನೆಯ ಸಾಲಿನಲ್ಲಿ ನಿಲ್ಲುವ ಹೆಸರು ಲಿಯೊನಾರ್ಡೊ ಡ ವಿನ್ಸಿಯದು.1452ರಲ್ಲಿ ಜನಿಸಿದ ಲಿಯೊನಾರ್ಡೊ ಡ ವಿನ್ಸಿ ಜನ್ಮತಃ ಇಟಲಿಯವನು; ಖ್ಯಾತ ಚಿತ್ರಕಾರ, ತತ್ವಜ್ಞಾನಿ, ಕವಿ, ಶಿಲ್ಪಿ, ಗಣಿತಜ್ಞ, ವಾಸ್ತುಶಿಲ್ಪಿ, ಅನ್ವೇಷಕ, ವಿಜ್ಞಾನಿ - ಎಲ್ಲವೂ ಆಗಿದ್ದ ಮಹಾನ್ ಮೇಧಾವಿ; ಮೋನಾಲಿಸಾ ಹಾಗೂ ದ ಲಾಸ್ಟ್ ಸಪ್ಪರ್‌ನಂತಹ ವಿಶ್ವವಿಖ್ಯಾತ ಕಲಾಕೃತಿಗಳ ಸೃಷ್ಟಿಕರ್ತ; ಪ್ಯಾರಾಚೂಟ್ ಹಾಗೂ ಹೆಲಿಕಾಪ್ಟರ್‌ಗಳ ಬಗೆಗಿನ ಮೊದಲ ಕಲ್ಪನೆಯೂ ಈತನದೇ.
   ವಾಯುವಿಗಿಂತ ಭಾರವಾಗಿರುವ ಪಕ್ಷಿಗಳು ಗಾಳಿಯಲ್ಲಿ ಹಾರಬಲ್ಲವಾದರೆ ಮಾನವ ಹಾರಾಡುವುದು ಅಸಾಧ್ಯವೇನಲ್ಲ ಎಂದು ಬಲವಾಗಿ ನಂಬಿದ್ದ ಈತ ಈ ಉದ್ದೇಶಕ್ಕಾಗಿ ರೆಕ್ಕೆಯಂತಹ ರಚನೆಯುಳ್ಳ ಒಂದು ವಾಹನವನ್ನು ನಿರ್ಮಿಸುವ ಯೋಜನೆ ತಯಾರಿಸಿದ್ದ. ಈ ಯಂತ್ರದೊಳಗೆ ಒಬ್ಬ ವ್ಯಕ್ತಿ ನಿಂತು ಎರಡು ರೆಕ್ಕೆಗಳನ್ನು ಸತತವಾಗಿ ಚಲಿಸುವಂತೆ ಮಾಡಿದರೆ ಆತ ಸುಲಭವಾಗಿ ಹಾರಾಡಬಹುದೆಂದು ಡ ವಿನ್ಸಿಯ ಆಲೋಚನೆಯಾಗಿತ್ತು.ಈತನ ಯೋಜನೆಗಳು ಪ್ರಾಯೋಗಿಕವಾಗಿ ಕಷ್ಟಸಾಧ್ಯವಾಗಿದ್ದರೂ ಸಹ, 15ನೆಯ ಶತಮಾನದಷ್ಟು ಹಿಂದೆಯೇ ಮಾನವನ ಹಾರಾಟಕ್ಕೆ ಅನುಕೂಲವಾಗುವ ವಾಹನಗಳ ರಚನೆಯ ಬಗೆಗೆ ಆಲೋಚಿಸಿದ್ದ ಲಿಯೊನಾರ್ಡೊ ಡ ವಿನ್ಸಿ ವಿಜ್ಞಾನದ ಇತಿಹಾಸದಲ್ಲಿ ಅಮರನಾಗಿ ಉಳಿದಿದ್ದಾನೆ.
   ಮುಂದೆ ಪೋರ್ಚುಗಲ್‌ನ ಬಾರ್ತೊಲೋಮಿಯೊ ಗುಸ್ಮಾವೊ ಎಂಬಾತ ಆಗಸ್ಟ್ 8, 1709ರಂದು ಬಿಸಿಗಾಳಿ ತುಂಬಿದ ಬಲೂನಿನ ತಳಕ್ಕೆ ಅಳವಡಿಸಿದ ಬುಟ್ಟಿಯಲ್ಲಿ ಕುಳಿತು ಅಲ್ಪಕಾಲದ ಹಾರಾಟ ನಡೆಸಿದನೆಂದು ಹಳೆಯ ದಾಖಲೆಗಳಿಂದ ತಿಳಿದುಬರುತ್ತದೆ. ಇಂತಹ ಬುಟ್ಟಿಯಲ್ಲಿ ಕುಳಿತು ದಿನಕ್ಕೆ 200 ಮೈಲುಗಳಷ್ಟು ದೂರವನ್ನು ಕ್ರಮಿಸಬಹುದೆಂದು ಗುಸ್ಮಾವೊ ನಂಬಿದ್ದನಂತೆ.
      ನಂತರದ ದಿನಗಳಲ್ಲಿ ಇದೇ ಬಗೆಯ ಪ್ರಯತ್ನ ನಡೆದದ್ದು ಫ್ರಾನ್ಸಿನಲ್ಲಿ. 1783ರ ಜೂನ್ 5ರಂದು ಜೋಸೆಫ್ ಮತ್ತು ಎಟೀನ್ ಮಾಂಟ್‌ಗಾಲ್ಫಿಯರ್ ಎಂಬ ಸೋದರರು ಬಟ್ಟೆಯಲ್ಲಿ ತಯಾರಿಸಿದ ಬಲೂನಿನಂತಹ ಬಿಸಿಗಾಳಿತುಂಬಿದ ಗೋಳವನ್ನು ಸುಮಾರು ಒಂದು ಮೈಲಿನಷ್ಟು ದೂರಕ್ಕೆ ಹಾರಿಸಿದ್ದರು.
     1783 ಸೆಪ್ಟೆಂಬರ್ 19ರಂದು ಈ ಸೋದರರು ಫ್ರಾನ್ಸಿನ ಅನೋನೇ ಪಟ್ಟಣದಲ್ಲಿ ಇಂತಹುದೇ ಬಲೂನಿನಲ್ಲಿ ಕುರಿ, ಕೋಳಿ ಹಾಗೂ ಬಾತುಕೋಳಿಗಳನ್ನಿರಿಸಿ ಹಾರಿಬಿಟ್ಟರಾದರೂ ಆ ಬಲೂನು ಸ್ವಲ್ಪ ಸಮಯದೊಳಗೇ ಸ್ಫೋಟಿಸಿ ನಾಶವಾಯಿತು. 1783ರ ನವೆಂಬರ್ 21ರಂದು ನಡೆದ ಮತ್ತೊಂದು ಹಾರಾಟದಲ್ಲಿ ಜೀನ್ ಫ್ರಾಂಕಾಯ್ಸ್ ಪಿಯಾತ್ರೆ ಡಿ'ರೋಜ಼್ಯೆರ್ ಹಾಗೂ ಫ್ರಾಂಕಾಯ್ಸ್ ಲಾರೆಂಟ್ ಮಾರ್ಕ್ವಿಸ್ ಡಿ'ಆರ್ಲ್ಯಾಂಡ್ಸ್ ಎಂಬುವವರು "ಮಾಂಟ್‌ಗಾಲ್ಫಿಯರ್ ಬಲೂನ್"ನಲ್ಲಿ ಕುಳಿತು 23 ನಿಮಿಷಗಳಲ್ಲಿ ಒಂಬತ್ತು ಕಿಲೋಮೀಟರುಗಳಷ್ಟು ದೂರ ಹಾರಾಟ ನಡೆಸಿದ್ದರು. ಸದ್ಯಕ್ಕೆ ಚಾಲ್ತಿಯಲ್ಲಿರುವ ದಾಖಲೆಗಳಂತೆ ಈ ಜೋಡಿಯನ್ನೇ ಆಕಾಶದಲ್ಲಿ ಸುದೀರ್ಘಕಾಲ ಹಾರಾಟ ನಡೆಸಿದ ಮೊದಲ ಮಾನವರೆಂದು ಗುರುತಿಸಲಾಗುತ್ತದೆ.
    ನಂತರದ ದಿನಗಳಲ್ಲಿ ಬಲೂನುಗಳ ಹಾರಾಟ ಸಾಮಾನ್ಯವಾದ ಸಂಗತಿಯಾಯಿತು. ಈಗಲೂ ಕೂಡ ವೈಜ್ಞಾನಿಕ ಸಂಶೋಧನೆಗಳಿಗಾಗಿ ಇಂತಹ ಬಲೂನುಗಳ ಹಾರಾಟ ನಡೆಯುತ್ತಿರುತ್ತದೆ. ಇಂತಹ ಬಲೂನುಗಳ ಹಾರಾಟ ಜನಪ್ರಿಯ ಸಾಹಸಕ್ರೀಡೆಯೂ ಹೌದು.
    ಉಗಿ ಇಂಜಿನ್ ಹಾಗೂ ಪೆಟ್ರೋಲ್ ಇಂಜಿನ್‌ಗಳ ಆವಿಷ್ಕಾರವಾದ ನಂತರ ಬಲೂನುಗಳ ನಿಯಂತ್ರಣ ಸಾಧ್ಯವಾಯಿತು. ಪ್ರಯತ್ನಗಳು ಮುಂದುವರಿದಂತೆ 1900ರಲ್ಲಿ ವಾನ್ ಜೆಫಲಿನ್ ಎಂಬ ಜರ್ಮನ್ ವ್ಯಕ್ತಿ ಅಲ್ಯೂಮಿನಿಯಂ ಹಾಳೆಗಳಿಂದ ತಯಾರಿಸಿದ ವಾಯುನಾವೆಯನ್ನು ನಿರ್ಮಿಸಿದ. ಹೀಗೆ ಪ್ರಪ್ರಥಮ ವಾಯುನೌಕೆಯ ನಿರ್ಮಾಣದೊಂದಿಗೆ ಮಾನವನ ಹಾರಾಟದ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ತರ ಮುನ್ನಡೆ ದೊರಕಿತು.
   ಮೊದಲನೇ ಮಹಾಯುದ್ಧದ ಸಮಯದಲ್ಲಿ ವಾಯುನಾವೆಗಳನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸಲಾಯಿತು. ಯುದ್ಧದ ನಂತರ ಇಂತಹ ವಾಯುನಾವೆಗಳನ್ನು ಪ್ರಯಾಣಕ್ಕಾಗಿಯೂ ವ್ಯಾಪಕವಾಗಿ ಬಳಸಲಾಯಿತು.ಈ ಬಗೆಯ ವಾಯುನೌಕೆಗಳು ಜಲಜನಕವನ್ನು ತುಂಬಿಸಿಕೊಂಡು ಹಾರಾಟ ನಡೆಸುತ್ತಿದ್ದುದರಿಂದ ಅವುಗಳ ಹಾರಾಟದಲ್ಲಿ ಅಪಾಯ ತಪ್ಪಿರಲಿಲ್ಲ. ಜರ್ಮನಿಯಿಂದ ಅಮೇರಿಕಾಗೆ ಹತ್ತುಬಾರಿ ಹಾರಾಟ ನಡೆಸಿ, 1002 ಪ್ರಯಾಣಿಕರನ್ನು ಕೊಂಡೊಯ್ದಿದ್ದ 'ಹಿಂಡನ್‌ಬರ್ಗ್' ಎಂಬ ವಾಯುನೌಕೆಯೊಂದು 1937ರಲ್ಲಿ ತನ್ನ ಹನ್ನೊಂದನೇ ಯಾನದ ಸಂದರ್ಭದಲ್ಲಿ ೩೬ ಜನ ಪ್ರಯಾಣಿಕರೊಂದಿಗೆ ಅಮೇರಿಕಾದ ಲೇಕ್‌ಹರ್ಸ್ಟ್‌ನಲ್ಲಿ ಸಿಡಿದು ನಾಶವಾಯಿತು.    ಇಂಧನವಾಗಿ ಬಳಸಲಾಗಿದ್ದ ಜಲಜನಕಕ್ಕೆ ಬೆಂಕಿ ತಗುಲಿದ್ದೇ ಸ್ಫೋಟಕ್ಕೆ ಕಾರಣವಾಯಿತೆಂದು ತಿಳಿಯಿತು.
    ಈ ಘಟನೆಯಿಂದಾಗಿ ವಾಯುನೌಕೆಗಳಲ್ಲಿ ಜಲಜನಕದಂತಹ ದಹ್ಯ ಅನಿಲಗಳ ಬದಲು ಹೀಲಿಯಂನಂತಹ ಉರಿಯದ ಅನಿಲಗಳ ಬಳಕೆಯತ್ತ ಜನರ ಗಮನ ಹರಿಯಿತು. ಆದರೆ ಇಷ್ಟರಲ್ಲೇ ವಿಮಾನ ನಿರ್ಮಾಣದ ಯತ್ನಗಳು ಯಶಸ್ವಿಯಾಗತೊಡಗಿದ್ದರಿಂದ ವಾಯುನೌಕೆಗಳ ಬೆಳವಣಿಗೆ ಅಷ್ಟಕ್ಕೇ ಸೀಮಿತವಾಯಿತು.
   1799ರಲ್ಲಿ ಇಂಗ್ಲೆಂಡಿನ ಸರ್ ಜಾರ್ಜ್ ಕೈಲಿ ಎಂಬಾತ ಗ್ಲೈಡರಿನ ಮಾದರಿಗಳನ್ನು ರಚಿಸಿದ. ವಾಯುಯಾನದ ಬಗೆಗೆ ಅನೇಕ ಗ್ರಂಥಗಳನ್ನು ರಚಿಸಿದ್ದ ಈತ ಗಾಳಿಗಿಂತ ಹಗುರವಾದ ವಿಮಾನ ಮಾತ್ರ ಹಾರಾಟ ಕೈಗೊಳ್ಳುವುದು ಸಾಧ್ಯ ಎಂದು ನಂಬಿದ್ದ.ದೊಡ್ಡಗಾತ್ರದ ಗ್ಲೈಡರ್‌ಗಳನ್ನು ರೂಪಿಸಿ ತನ್ನ ಅಧ್ಯಯನಗಳನ್ನು ಮುಂದುವರೆಸಿದ್ದ ಈತ 1853ರಲ್ಲೊಂದು ದಿನ ತನ್ನ ಕುದುರೆ ಬಂಡಿಯ ಚಾಲಕನನ್ನು ಗ್ಲೈಡರ್‌ನಲ್ಲಿ ಕೂರಿಸಿ ಎತ್ತರದ ಪ್ರದೇಶದಿಂದ ಆ ಗ್ಲೈಡರ್ ಅನ್ನು ಹಾರಿಬಿಟ್ಟ. ಸ್ವಲ್ಪಕಾಲದ ಹಾರಾಟದ ನಂತರ ಗ್ಲೈಡರ್ ಹಾಗೂ ಅದರ ಸವಾರ ಇಬ್ಬರೂ ಕ್ಷೇಮವಾಗಿ ಕೆಳಗಿಳಿಯುವುದರ ಜೊತೆಗೆ ಈ ಹಾರಾಟ ವಾಯುಯಾನ ಇತಿಹಾಸದ ಮಹತ್ವದ ಸಾಧನೆಗಳ ಲ್ಲೊಂದಾಗಿ ದಾಖಲಾಯಿತು.
    ಆದರೆ ಕೈಲಿಯ ಗ್ಲೈಡರುಗಳನ್ನು ಅದರ ಸವಾರ ನಿಯಂತ್ರಿಸುವುದು ಅಸಾಧ್ಯವಾಗಿತ್ತು. ಅಲ್ಲದೆ ಇವನ್ನು ಬಳಸಿ ಪ್ರಯಾಣಿಕರನ್ನಾಗಲೀ ಸಾಮಾನು-ಸರಂಜಾಮುಗಳನ್ನಾಗಲೀ ಸಾಗಿಸಲೂ ಆಗುತ್ತಿರಲಿಲ್ಲ. ಹೀಗಾಗಿ ಈ ಗ್ಲೈಡರುಗಳಿಂದ ಹೆಚ್ಚಿನ ಉಪಯೋಗವೇನೂ ಆಗಲಿಲ್ಲ.ಈ ನಡುವೆ ಫ್ರಾನ್ಸಿನ ಆಲ್ಫೋನ್ಸ್ ಪಿನಾಡ್ ಎಂಬ ವ್ಯಕ್ತಿ ರಬ್ಬರ್ ಪಟ್ಟಿಗಳನ್ನು ಬಳಸಿ ಪ್ರೊಪೆಲರ್‌ಗಳನ್ನು ತಿರುಗಿಸಿದರೆ ಗ್ಲೈಡರುಗಳ ಹಾರಾಟ ಸಾಧ್ಯವೆಂದು ತೋರಿಸಿದ. ರಬ್ಬರ್ ಪಟ್ಟಿಗಳನ್ನು ಅಳವಡಿಸಿದ ಪ್ರೊಪೆಲರುಗಳನ್ನು ಚೆನ್ನಾಗಿ ತಿರುಗಿಸಿದರೆ ಆ ಒತ್ತಡದಿಂದ ಮುಕ್ತವಾಗುವವರೆಗೂ ಅದು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾ ಗ್ಲೈಡರನ್ನು ಹಾರಿಸಲು ಶಕ್ತವಾಗಿತ್ತು. ಇದೇ ಬಗೆಯ ತಂತ್ರಜ್ಞಾನ ಮಕ್ಕಳ ಆಟಿಕೆಯ ವಾಹನಗಳಲ್ಲಿ ಬಳಕೆಯಾಗುತ್ತದೆ ಎಂಬುದು ಗಮನಾರ್ಹ.
    ಗ್ಲೈಡರ್‌ಗಳ ನಿರ್ಮಾಣದಲ್ಲಿ ಯಶಸ್ವಿಯಾದ ಮತ್ತೊಬ್ಬ ಸಾಹಸಿ ಒಟ್ಟೋ ಲಿಲಿಯಂಥಾಲ್; ವೃತ್ತಿಯಿಂದ ಇಂಜಿನಿಯರ್ ಆಗಿದ್ದ ಜರ್ಮನ್ ವ್ಯಕ್ತಿ.ಇವನು ಚಿತ್ರವಿಚಿತ್ರವಾದ ಆಕಾರಗಳನ್ನು ಹೊಂದಿದ್ದ ಗ್ಲೈಡರುಗಳನ್ನು ನಿರ್ಮಿಸಿ ಅವುಗಳನ್ನು ಹಾರಿಸುವುದರಲ್ಲಿ ನೈಪುಣ್ಯತೆ ಹೊಂದಿದ್ದ. ಸುಮಾರು ಹದಿನಾರು ವಿವಿಧ ಬಗೆಯ ಗ್ಲೈಡರುಗಳನ್ನು ನಿರ್ಮಿಸಿದ್ದ ಈತ 1891ರಿಂದ 1896ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ಎರಡು ಸಾವಿರದ ಐನೂರಕ್ಕೂ ಹೆಚ್ಚು ಬಾರಿ ಯಶಸ್ವಿ ಹಾರಾಟ ಕೈಗೊಂಡಿದ್ದ.ತಾನೇ ನಿರ್ಮಿಸಿದ ಗ್ಲೈಡರ್‌ನಲ್ಲಿ ಒಂದು ಬಾರಿಗೆ ಸುಮಾರು 450 ಮೀಟರ್‌ಗಳಷ್ಟು ದೂರವನ್ನು ಕ್ರಮಿಸುವಲ್ಲಿ ಯಶಸ್ಸುಕಂಡಿದ್ದ ಈತ ಆಗಸ್ಟ್ 9, 1896ರಂದು ಇಂತಹುದೇ ಇನ್ನೊಂದು ಪ್ರಯತ್ನದಲ್ಲಿ ತೊಡಗಿದ್ದಾಗ ಅಪಘಾತಕ್ಕೆ ಸಿಲುಕಿ ದುರ್ಮರಣಕ್ಕೀಡಾದ.ಮೊದಲ ಮಾನವ ನಿಯಂತ್ರಿತ ಗ್ಲೈಡರ್‌ನ ನಿರ್ಮಾತೃ ಒಟ್ಟೋ ಲಿಲಿಯಂಥಾಲ್‌ನ ಹೆಸರು ವಿಮಾನಯಾನ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.
    ವಿಮಾನ ಒಟ್ಟೊ ಲಿಲಿಯಂಥಾಲ್‌ನ ಸಮಕಾಲೀನನಾಗಿದ್ದ ವಿಲಿಯಂ ಸ್ಯಾಮ್ಯುಯೆಲ್ ಹೆನ್ಸನ್ ಎಂಬ ಬ್ರಿಟಿಷ್ ತಂತ್ರಜ್ಞ 1843ರಲ್ಲೇ ಉಗಿ ಇಂಜನ್ ಬಳಸಿ ಕಾರ್ಯನಿರ್ವಹಿಸುವ (ಸ್ಟೀಂ-ಡ್ರಿವನ್) ವಿಮಾನವೊಂದರ ವಿನ್ಯಾಸ ರೂಪಿಸಿದ್ದ. ಆಧುನಿಕ ವಿಮಾನದ ಅನೇಕ ಭಾಗಗಳನ್ನು ಹೊಂದಿದ್ದ ತನ್ನ ಈ ವಿನ್ಯಾಸಕ್ಕೆ ಸ್ವಾಮ್ಯವನ್ನು (ಪೇಟೆಂಟ್) ಕೂಡ ಪಡೆದುಕೊಂಡ ಈತ ತಾನು ನಿರ್ಮಿಸಿದ ಮಾದರಿಗಳು ಹಾರಾಟ ಕೈಗೊಳ್ಳುವಲ್ಲಿ ವಿಫಲವಾದಾಗ ವಿಮಾನ ನಿರ್ಮಿಸುವ ಪ್ರಯತ್ನವನ್ನೇ ಕೈಬಿಟ್ಟ. ಇಂತಹ ಇನ್ನೂ ಅನೇಕ ಯತ್ನಗಳು ನಡೆದರೂ ಸಹ ಸ್ವಶಕ್ತಿಯಿಂದ ಗಾಳಿಯಲ್ಲಿ ಹಾರಬಲ್ಲ ಯಂತ್ರಗಳ ನಿರ್ಮಾಣ ಇನ್ನೂ ಸಾಧ್ಯವಾಗಿರಲಿಲ್ಲ.ಗ್ಲೈಡರ್ ತಯಾರಿಕೆಯ ಪ್ರಯತ್ನಗಳ ಯಶಸ್ಸಿನಿಂದ ಉತ್ತೇಜಿತರಾದ ಅನೇಕ ಉತ್ಸಾಹಿಗಳು ಈ ರೀತಿಯ ಯಂತ್ರಗಳನ್ನು ತಯಾರಿಸಲು ಯತ್ನಿಸಿದರು. ಫ್ರಾನ್ಸಿನ ಕ್ಲೆಮೆಂಟ್ ಆಡರ್ ಹಾಗೂ ಅಮೆರಿಕಾದ ಸ್ಯಾಮ್ಯುಯೆಲ್ ಲ್ಯಾಂಗ್ಲಿ ಎಂಬ ವಿಜ್ಞಾನಿಗಳು ಅವರ ಪ್ರಯತ್ನಗಳಲ್ಲಿ ಅಲ್ಪಮಟ್ಟದ ಯಶಸ್ಸನ್ನೂ ಕಂಡಿದ್ದರು.ಅಮೆರಿಕಾ ಸಂಜಾತ ಬ್ರಿಟಿಷ್ ವಿಜ್ಞಾನಿ ಹಿರಮ್ ಮ್ಯಾಕ್ಸಿಂ ಎಂಬಾತ 1894ರಲ್ಲಿ ಭಾರೀಗಾತ್ರದ ಯಂತ್ರವೊಂದನ್ನು ರೂಪಿಸಿದ.ವಿಮಾನದಂತೆ  ಕಾರ್ಯನಿರ್ವಹಿಸಬೇಕಿದ್ದ ಈ ಯಂತ್ರ ಕೊಂಚಹೊತ್ತು ನೆಲ ಬಿಟ್ಟು ಮೇಲೆದ್ದಿತಾದರೂ ಯಶಸ್ವಿ ಹಾರಾಟ ಕೈಗೊಳ್ಳುವಲ್ಲಿ ವಿಫಲವಾಯಿತು.ಸರಿಸುಮಾರು ಇದೇ ಸಮಯಕ್ಕೆ ಅಮೆರಿಕಾದ ವಿಲ್ಬರ್ ರೈಟ್ ಹಾಗೂ ಆರ್ವಿಲ್ ರೈಟ್ ಎಂಬ ಸಹೋದರರೂ ವಿಮಾನ ರಚನೆಯಲ್ಲಿ ಬಹಳಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಮೊದಲು ಗ್ಲೈಡೆರ್‌ಗಳನ್ನು ನಿರ್ಮಿಸಿ ಹಾರಾಟ ನಡೆಸಿದ ಇವರು ಅವುಗಳಿಗೆ ಇಂಜಿನ್‌ಗಳನ್ನು ಅಳವಡಿಸುವುದರಲ್ಲೂ ಯಶಸ್ಸುಗಳಿಸಿ ಮುಂದೆ ಆಧುನಿಕ ವಿಮಾನದ ಸೃಷ್ಟಿಕರ್ತರೆಂದು ವಿಶ್ವವಿಖ್ಯಾತರಾದರು.
    ರೈಟ್ ಸಹೋದರರು ಎಂದೇ ವಿಶ್ವವಿಖ್ಯಾತರಾದವರು ವಿಲ್ಬರ್ ರೈಟ್ (1867-1912) ಹಾಗೂ ಆರ್ವಿಲ್ ರೈಟ್ (1871-1948). ಚಿಕ್ಕಂದಿನಿಂದಲೂ ಬಹಳ ಪ್ರತಿಭಾನ್ವಿತರಾಗಿದ್ದ ಇವರು ತಾವೇ ಸ್ವತಃ ತಮ್ಮ ಆಟಿಕೆಗಳನ್ನು ತಯಾರಿಸಿಕೊಳ್ಳುವುದರಿಂದ ಹಿಡಿದು ಪತ್ರಿಕೆಯೊಂದನ್ನು ನಡೆಸುವುದು ಹಾಗೂ ಸೈಕಲ್ ಕಂಪನಿಯೊಂದನ್ನು ನಡೆಸುವವರೆಗೆ ಅನೇಕ ಕಾರ್ಯಗಳನ್ನು ನಿರ್ವಹಿಸಿ ತಮ್ಮ ಬಹುಮುಖಿ ಪ್ರತಿಭೆಯನ್ನು ಪ್ರದರ್ಶಿಸಿದ್ದರು.ಪ್ರಪಂಚದ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ವಿಮಾನ ನಿರ್ಮಾಣ ಪ್ರಯೋಗಗಳ ಬಗೆಗೆ ಬಹು ಆಸಕ್ತಿಯಿಂದ ಮಾಹಿತಿ ಕಲೆಹಾಕುತ್ತಿದ್ದ ಇವರಿಗೆ ಹಾರುವ ಯಂತ್ರಗಳ ನಿರ್ಮಾಣದತ್ತ ಮೊದಲು ಸ್ಫೂರ್ತಿ ನೀಡಿದ್ದು ಜರ್ಮನಿಯ ಒಟ್ಟೊ ಲಿಲಿಯಂಥಾಲ್.ಆಕ್ಟೇವ್ ಚೆನ್ಯೂಟ್‌ರ ಬರಹಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ ರೈಟ್ ಸಹೋದರರು 1900ರ ಸುಮಾರಿಗೆ ಮೊದಲ ಗ್ಲೈಡರುಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು.
    ಅವರು ತಮ್ಮ ಗ್ಲೈಡರುಗಳ ಹಾರಾಟದ ಪರೀಕ್ಷೆ ನಡೆಸುವ ಸಲುವಾಗಿ ಉತ್ತರ ಕೆರೋಲಿನಾ ಪ್ರಾಂತ್ಯದ ಕಿಟ್ಟಿಹಾಕ್ ಎಂಬ ಸ್ಥಳವನ್ನು ಬಳಸಲು ವಾಷಿಂಗ್ಟನ್‌ನ ವೆದರ್ ಬ್ಯೂರೋ (ಈಗಿನ ನ್ಯಾಷನಲ್ ವೆದರ್ ಸರ್ವಿಸ್) ಅನುಮತಿ ನೀಡಿತು. ತಾವು ತಯಾರಿಸಿದ ಮೊದಲ ಗ್ಲೈಡರ್‌ನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾದ ಮೇಲೆ (ಇದು ನಡೆದದ್ದು 1900ರಲ್ಲಿ) ರೈಟ್ ಸಹೋದರರು ದೊಡ್ಡ ಗಾತ್ರದ ಮತ್ತೊಂದು ಗ್ಲೈಡರಿನ ಜೊತೆಗೆ 1901ರಲ್ಲಿ ಮತ್ತೆ ಕಿಟ್ಟಿಹಾಕ್‌ಗೆ ಮರಳಿದರು. ಈ ಗ್ಲೈಡರ್ ಕೂಡ ಹಾರಾಟ ಕೈಗೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಈ ಎರಡೂ ಗ್ಲೈಡರುಗಳು ರೈಟ್ ಸಹೋದರರು ನಿರೀಕ್ಷಿಸಿದಷ್ಟು ಮಟ್ಟದ ಕಾರ್ಯಕ್ಷಮತೆ ಹೊಂದಿರಲಿಲ್ಲ.ಈ ಹಿನ್ನಡೆಯಿಂದಾಗಿ ರೈಟ್ ಸಹೋದರರ ಉತ್ಸಾಹಕ್ಕೇನೂ ಕುಂದುಬರಲಿಲ್ಲ. ತಮ್ಮ ವಿನ್ಯಾಸದಲ್ಲಿದ್ದ ಕುಂದುಕೊರತೆಗಳನ್ನೆಲ್ಲ ತೀವ್ರ ಅಧ್ಯಯನದ ಮೂಲಕ ನಿವಾರಿಸಿಕೊಂಡ ಅವರು 1902ರಲ್ಲಿ ಗ್ಲೈಡರಿನ ಸುಧಾರಿತ ಮಾದರಿಯೊಂದನ್ನು ರೂಪಿಸಿದರು.ಅವರ ನಿರೀಕ್ಷೆಗೂ ಮೀರಿ ಯಶಸ್ವಿಯಾದ ಈ ಮಾದರಿಯಲ್ಲಿ ಅವರು ಒಂದು ಸಾವಿರಕ್ಕೂ ಹೆಚ್ಚು ಯಾನಗಳನ್ನು ಕೈಗೊಂಡರು.
        ಗ್ಲೈಡರಿನ ನಿರ್ಮಾಣದಲ್ಲಿ ಯಶಸ್ವಿಯಾದ ರೈಟ್ ಸಹೋದರರು ಈಗ ವಿಮಾನ ನಿರ್ಮಾಣದ ಬಗೆಗೆ ಯೋಚಿಸಲು ಪ್ರಾರಂಭಿಸಿದರು. ಪಟ್ಟುಹಿಡಿದು ಕೆಲಸ ಪ್ರಾರಂಭಿಸಿಯೇಬಿಟ್ಟ ಅವರು 1903ರಲ್ಲಿ ಮೊದಲ ಹಾರುವ ಯಂತ್ರ ಹಾಗೂ ಅದಕ್ಕೊಂದು ಪೆಟ್ರೋಲ್ ಇಂಜಿನ್‌ಅನ್ನೂ ತಯಾರಿಸಿಬಿಟ್ಟರು. ಹನ್ನೆರಡು ಅಶ್ವಶಕ್ತಿಯ ಈ ವಿಮಾನ 341 ಕಿಲೋಗ್ರಾಂ ತೂಕ ಹೊಂದಿತ್ತು.1903ರ ಡಿಸೆಂಬರ್ 17ರಂದು ಮಾನವನ "ಹಾರುವ ಕನಸು" ಕೊನೆಗೂ ನನಸಾಗಿಬಿಟ್ಟಿತು! "ರೈಟ್ ಫ್ಲೈಯರ್" ವಿಮಾನದಲ್ಲಿ ಕುಳಿತ ಆರ್ವಿಲ್ ಹನ್ನೆರೆಡು ಸೆಕೆಂಡುಗಳ ಕಾಲ ಹಾರಾಟ ನಡೆಸಿ ಮೂವತ್ತೇಳು ಮೀಟರುಗಳ ದೂರವನ್ನು ಕ್ರಮಿಸಿದ. ಆನಂತರ ಹಾರಾಟ ಕೈಗೊಂಡ ವಿಲ್ಬರ್ 59 ಸೆಕೆಂಡುಗಳ ಕಾಲಾವಧಿಯಲ್ಲಿ 260 ಮೀಟರುಗಳ ದೂರವನ್ನು ಕ್ರಮಿಸುವಲ್ಲಿ ಸಫಲನಾದ.
        ಕಿಟ್ಟಿಹಾಕ್‌ನಲ್ಲಿ ಐತಿಹಾಸಿಕ ಹಾರಾಟ ಕೈಗೊಂಡಿದ್ದ ರೈಟ್ ಫ್ಲೈಯರ್ ವಿಮಾನವನ್ನು ಆರ್ವಿಲ್ ರೈಟ್ 1928ರಲ್ಲೇ ಲಂಡನ್ನಿನ ವಿಜ್ಞಾನ ಸಂಗ್ರಹಾಲಯಕ್ಕೆ ಕೊಟ್ಟುಬಿಟ್ಟಿದ್ದ. ಇಪ್ಪತ್ತು ವರ್ಷಗಳ ನಂತರ, 1948ರಲ್ಲಿ ಅಮೆರಿಕಾಗೆ ಮರಳಿದ ಈ ವಿಮಾನ ಈಗ ವಾಷಿಂಗ್ಟನ್‌ನಲ್ಲಿರುವ ಸ್ಮಿತ್‌ಸೋನಿಯನ್ ಇನ್ಸ್‌ಟಿಟ್ಯೂಟ್‌ನ ರಾಷ್ಟ್ರೀಯ ಬಾಹ್ಯಾಕಾಶ ಮತ್ತು ವಿಮಾನಯಾನ ಸಂಗ್ರಹಾಲಯದಲ್ಲಿ ಪ್ರದರ್ಶಿಸಲ್ಪಟ್ಟಿದೆ.
      (ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಒಗಟುಗಳು

1. ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿಹಾಕಿದರೆ ಸಾಯುತ್ತೆ.-ದುಡ್ಡು.
2. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ,ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.-ಸಗಣಿ.
3. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ-.ಗರಗಸ.
4. ಕಡ್ಲೆ ಕಾಳಷ್ಟು ಹಿಂಡಿ  ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.-ಹಲ್ಲುಪುಡಿ.
5.ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ.-ಗಡಿಗೆಮಜ್ಜಿಗೆ.
6.ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ,ಒಬ್ಬ ಇಳಿಯುತ್ತಾನೆ .-ರೊಟ್ಟಿ, ದೋಸೆ
7.ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು, ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ-ಬೆಂಕಿ, ಸುಣ್ಣ ಹಚ್ಚಿದ ಹಂಚು, ಹೊಗೆ, ರೊಟ್ಟಿ
8. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ.-ಕಣ್ಣು.
9. ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ ಹಕ್ಕಿದರೆಮುಳುಗದು ಮುತ್ತಿನ ಗಿಂಡಿ. -ಬೆಣ್ಣೆ ಉಂಡೆ.
10.ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.-ಅಂಗಿ.
11.ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-.ಮಲ್ಲಿಗೆ
12.ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ.-ಆಕಾಶ , ನಕ್ಷತ್ರ
13. ಸುಟ್ಟ ಹೆಣ ಮತ್ತೆ ಸುಡ್ತಾರೆ.-ಇದ್ದಿಲು .14. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ.-ಹಲಸಿನ ಹಣ್ಣು , ಬೀಜ
,15. ಅಂಗೈ ಕೊಟ್ಟರೆ ಮುಂಗೈನೂನುಂಗುತ್ತದೆ-.ಬಳೆ
16.. ಒಂದು ಹಪ್ಪಳ ಊರಿಗೆಲ್ಲ ಊಟ-ಚಂದ್ರ
17. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ-ಹುಣಸೇಹಣ್ಣು
18. ನೀಲಿ ಕೆರೆಯಲಿ ಬಿಳಿ ಮೀನು-ನಕ್ಷತ್ರ 19. ಒಂದು ತೇಲುತ್ತೆ ,ಒಂದು ಮುಳುಗುತ್ತೆ,ಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
20. ಬಾ ಅಂದರೆ ಬರೋಲ್ಲ , ಹೋಗು ಅಂದರೆಹೋಗೋಲ್ಲ-ಮಳೆ
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397