ಶುಕ್ರವಾರ, ಮಾರ್ಚ್ 11, 2016

ಎ.ಕೆ– 47

ನನ್ನ ಆವಿಷ್ಕಾರದ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಆದರೆ, ಅದು ದುಷ್ಟಶಕ್ತಿಗಳ ಕೈ ಸೇರಿ ವಿಧ್ವಂಸಕ ಕೃತ್ಯಗಳಿಗೆ ಬಳಕೆಯಾಗುತ್ತಿರುವುದಕ್ಕೆ ನಾನು ಹೊಣೆಯಲ್ಲ’. ಎ.ಕೆ–47 ಜನಕ ಮಿಖಾಯಿಲ್‌ ತಿಮೊಫೆಯೆವಿಚ್‌ ಕಲಾಶ್ನಿಕೋವ್‌ ಅವರು ಈ ಹಿಂದೆ ಹೇಳಿದ ಮಾತಿದು. ಎ.ಕೆ-47 ಕುರಿತಾಗಿ ವ್ಯಕ್ತವಾದ ಟೀಕೆಗೆ ಅವರು ಮೇಲಿನಂತೆ ಪ್ರತ್ಯುತ್ತರ ನೀಡಿ ತಮ್ಮ್ನ ಆವಿಷ್ಕಾರವನ್ನು ಸಮರ್ಥಿಸಿಕೊಂಡಿದ್ದರು.
   ಆರಂಭಿಕ ಜೀವನಕೃಷಿ ಕಾರ್ಮಿಕರಾಗಿದ್ದ ತಿಮೊಫೆ ಕಲಾಶ್ನಿಕೋವ್‌ ಮತ್ತು ಅಲೆಕ್ಸಾಂಡ್ರಾ ಫ್ರೊರೊನಾ ಕವೆರಿನಾ ದಂಪತಿಯ ಒಟ್ಟು 19 ಮಕ್ಕಳ ಪೈಕಿ ಮಿಖಾಯಿಲ್‌ ಕಲಾಶ್ನಿಕೋವ್‌ 17ನೇ ಪುತ್ರ. 1919 ನವೆಂಬರ್ 10ರಂದು ರಷ್ಯಾದ ಅಲ್ತೈಕ್ರೈನ್‌ ಕುರಿಯಿನ್ಸ್ಕಿ ಜಿಲ್ಲೆಯ ಕೂರ್ಯದಲ್ಲಿ ಜನಿಸಿದ್ದ ಕಲಾಶ್ನಿಕೋವ್‌ ಅವರಿಗೆ ಬಾಲ್ಯದಿಂದಲೂ ಯಂತ್ರಗಳ ಬಗ್ಗೆ ವಿಶೇಷ ಆಸ್ಥೆ. ಏಳನೇ ತರಗತಿವರೆಗೆ ಓದು ಮುಗಿಸಿ, ಬಳಿಕ ಟ್ರ್ಯಾಕ್ಟರ್ ಕಂಪೆನಿಗೆ ಸೇರ್ಪಡೆಯಾದರು.1939ರಲ್ಲಿ ರೆಡ್‌ ಆರ್ಮಿಗೆ ಭರ್ತಿ. ಎಂಜಿನಿಯರಿಂಗ್‌ ಕೌಶಲ ಮತ್ತು ಕುಳ್ಳನಾಗಿದ್ದ ಕಾರಣಕ್ಕೆ ಸೇನೆಯ ಟ್ಯಾಂಕ್‌ನ ಯಂತ್ರ ವಿಭಾಗಕ್ಕೆ ನೇಮಕ­ಗೊಂಡರು. ಬಳಿಕ ಟ್ಯಾಂಕ್ ಕಮಾಂಡರ್ ಆಗಿ ಬಡ್ತಿ ದೊರೆಯಿತು. ತರಬೇತಿ ಸಂದರ್ಭದಲ್ಲೇ ಸಣ್ಣ ಶಸ್ತ್ರಾಸ್ತ್ರ­ಗಳನ್ನು ಅಭಿವೃದ್ಧಿಪಡಿಸಿ ಸೇನೆಯಿಂದ ಮೆಚ್ಚುಗೆ ಪಡೆದರು.
     1941ರಲ್ಲಿ ಬ್ರಿಂಕ್ಸ್‌ನಲ್ಲಿ ನಡೆದ ಕದನದಲ್ಲಿ ಗಾಯಗೊಂಡು ಒಂದು ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ. ಇದೇ ವೇಳೆ ಜರ್ಮನಿ ಸೇನೆಯಿಂದ ಸೋವಿಯತ್‌ ಒಕ್ಕೂಟಕ್ಕೆ ಯುದ್ಧದಲ್ಲಿ ಸೋಲು ಉಂಟಾಯಿತು. ಸೋವಿಯತ್ ಒಕ್ಕೂಟಕ್ಕೆ ಆದ ಅಪಮಾನ ಅವರಲ್ಲಿ ಹೊಸ ಆಲೋಚನೆ ಚಿಗುರೊಡೆಯಲು ಕಾರಣವಾಯಿತು.ಮುಂದೆ ಅದು ಎ.ಕೆ– 47)  (ಆಟೊಮ್ಯಾಟ್‌ ಕಲಾಶ್ನಿಕೋವ್‌–47) ಆವಿಷ್ಕಾರಕ್ಕೆ ನಾಂದಿ ಹಾಡಿತ್ತು. ಸಾಂಪ್ರದಾಯಿಕ ರೈಫಲ್‌ಗಳ ಬಳಕೆಯೇ ಸೋಲಿಗೆ ಪ್ರಮುಖ ಕಾರಣ ಎಂದು ಮನಗಂಡು, ಕಲಾಶ್ನಿಕೋವ್‌ ಸಬ್‌ಮೆಶಿನ್‌ ಗನ್‌ ಒಂದನ್ನು ಅಭಿವೃದ್ಧಿಪಡಿಸಿದರು. ಆದರೆ, ಇದು ಬಳಕೆಗೆ ಯೋಗ್ಯವಲ್ಲ ಎಂದು ಸೋವಿಯತ್‌ ಸೇನೆ ಅದನ್ನು ಸೇವೆಗೆ ಬಳಸಿಕೊಳ್ಳಲು ನಿರಾಕರಿಸಿತು.
   ಇಷ್ಟಾದರೂ ಎದೆಗುಂದದೆ ನಿರಂತರವಾಗಿ ಶ್ರಮವಹಿಸಿ 1947ರಲ್ಲಿ ಎ.ಕೆ–47 ವಿನ್ಯಾಸಗೊಳಿಸಿದರು.ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ಅಧಿಕೃತವಾಗಿ ಸೇನೆಯ ಬಳಕೆಗೆ ಸೇರಿಸಲಾಯಿತು. ಇದರ ಸುಲಭ ನಿರ್ವಹಣೆ ಮತ್ತು ಶತ್ರು ಪಾಳೆಯವನ್ನು ದಂಗು ಬಡಿಸುವ ಕಾರಣಕ್ಕಾಗಿ ಎ.ಕೆ- 47) ಯುದ್ಧಭೂಮಿಯ ದಿಕ್ಕು ಬದಲಾಯಿಸುವ ನಿರ್ಣಾಯಕ ಶಸ್ತ್ರವಾಗಿ ಬದಲಾಯಿತು. 
   ಪ್ರತಿಕೂಲ ಹವಾಮಾನದಲ್ಲೂ ಕಾರ್ಯನಿರ್ವಹಿಸಬಲ್ಲ ಎ.ಕೆ– 47 ಕ್ರಮೇಣ ಹಳೆ ಮಾದರಿಯ ಬಂದೂಕುಗಳ ಸ್ಥಳವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತು.ಮೊಜಾಂಬಿಕ್‌ ದೇಶದ ಸ್ವಾತಂತ್ರ್ಯದಲ್ಲಿ ಎ.ಕೆ– 47 ಪಾತ್ರವೇ ಹಿರಿದಾಗಿತ್ತು. ಈ ಕಾರಣಕ್ಕಾಗಿಯೇ ಆ ರಾಷ್ಟ್ರ ತನ್ನ ದೇಶದ ಧ್ವಜದಲ್ಲಿ ಎ.ಕೆ– 47 ಅನ್ನು ಚಿಹ್ನೆಯಾಗಿ ಬಳಸಿ­ಕೊಂಡಿದೆ. 
.  ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕದ ಸೈನಿಕರು ತಮ್ಮ ಬಳಿಯಿದ್ದ ಎಂ–-೧೬  ಬಂದೂಕುಗಳನ್ನು ಬದಿಗಿರಿಸಿ, ಸಾವನ್ನಪ್ಪಿದ ವಿಯೆಟ್ನಾಂ ಯೋಧರ ಎ.ಕೆ–47 ಬಂದೂಕು­ಗಳನ್ನು ಅಪಹರಿಸಿ ಉಪಯೋಗಿಸಿದ್ದರು. ಇದಕ್ಕೆ ಅದರ ಕಾರ್ಯ­ಕ್ಷಮತೆಯೇ ಕಾರಣ.ಹಾಲಿವುಡ್‌, ಬಾಲಿವುಡ್‌ ಸೇರಿದಂತೆ ಜಗತ್ತಿನಾದ್ಯಂತ ಹಲವು ಭಾಷೆಗಳಲ್ಲಿ ಎ.ಕೆ– 47 ಹೆಸರಿನಲ್ಲಿ ಬಂದಿರುವ ಅನೇಕ ಚಿತ್ರಗಳು ಅದರ ಜನಪ್ರಿಯ­ತೆಗೆ ಸಾಕ್ಷಿ. 
   ಕಳೆದ ಆರು ದಶಕಗಳಲ್ಲಿ ವಿಶ್ವದಾದ್ಯಂತ ನಡೆದ ಒಂದಿಲ್ಲೊಂದು ಯುದ್ಧದಲ್ಲಿ ಎ.ಕೆ- 47 ಬಳಕೆಯಾಗಿದೆ. ಜಗತ್ತಿನಲ್ಲಿ ಇಂದು ಸಹಸ್ರಾರು ಸಂಖ್ಯೆಯಲ್ಲಿ ಎ.ಕೆ– 47 ಗಳಿವೆ. 
   1997ರವರೆಗೆ ಇದರ ಪೇಟೆಂಟ್‌ ರಷ್ಯಾ ಬಳಿಯೇ ಇತ್ತು.‘ಇದೊಂದು ಕೊಲ್ಲುವ ಯಂತ್ರ, ಇದು ಭಯೋತ್ಪಾದಕರು ಶಕ್ತಿಶಾಲಿಯಾಗಲು ಕಾರಣವಾಗಿದೆ’ ಎಂದು ಕಲಾಶ್ನಿಕೋವ್‌ ಅವರ ವಿರೋಧಿಗಳು, ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳು ಟೀಕೆ ಮಾಡಿದ್ದವು. ಆದರೆ, ಇದನ್ನು ತಳ್ಳಿ ಹಾಕಿದ್ದ ಕಲಾಶ್ನಿಕೋವ್‌ ‘ನನ್ನ ಮಾತೃಭೂಮಿ ರಕ್ಷಣೆಗೆ ಮಾಡಿದ್ದ ಆವಿಷ್ಕಾರವನ್ನು ಇತರರು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ನಾನು ಹೊಣೆ ಹೊತ್ತುಕೊಳ್ಳುವುದಿಲ್ಲ ’ ಎಂದು ಹೇಳಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ಶಸ್ತ್ರಾಸ್ತ್ರ ವಿನ್ಯಾಸಕಾರರಿಂದಲೂ ಅದು ಮೆಚ್ಚುಗೆ ಗಳಿಸಿತು.
   1962ರಲ್ಲಿ ಎ.ಕೆ–47 ತೂಕವನ್ನು ಹಗುರಗೊಳಿಸಿ ಮರುವಿನ್ಯಾಸಗೊಳಿಸಿದರು. 1971ರಲ್ಲಿ 16 ಸದಸ್ಯರ ತಾಂತ್ರಿಕ ವಿಜ್ಞಾನ ಮಂಡಳಿಗೆ ಸದಸ್ಯರಾಗಿ ನೇಮಕಗೊಂಡರು. ಬಳಿಕ ಕೆಲಕಾಲ ರಷ್ಯಾ ಸೇನೆಯಲ್ಲಿ ಜನರಲ್‌ ಆಗಿಯೂ ಕಾರ್ಯನಿರ್ವಹಿಸಿದರು.ಎರಡು ಮದುವೆಯಾಗಿದ್ದ ಕಲಾಶ್ನಿಕೋವ್‌ಗೆ ಒಬ್ಬ ಪುತ್ರ ಸೇರಿ ನಾಲ್ವರು ಮಕ್ಕಳಿದ್ದರು. ಎಂಜಿನಿಯರ್ ಆಗಿದ್ದ ಎರಡನೇ ಹೆಂಡತಿ ಎಕತೆರಿನಾ ಕಲಾಶ್ನಿಕೋವ್‌, ಅವರ ತಾಂತ್ರಿಕ ಕಾರ್ಯಕ್ಕೆ ನೆರವಾಗಿದ್ದರು. ಶಸ್ತ್ರಾಸ್ತ್ರಗಳ ಅಧ್ಯಯನದ ಜೊತೆಗೆ ಕವಿತೆ ಬರೆಯುವುದರ ಬಗ್ಗೆಯೂ ವಿಶೇಷ ಅಭಿರುಚಿ ಹೊಂದಿದ್ದರು. ಅವರು ಬರೆದ ಆರು ಪುಸ್ತಕಗಳು ಪ್ರಕಟಣೆ ಕಂಡಿರುವುದು ಅವರಲ್ಲಿದ್ದ ಬರಹಗಾರನಿಗೆ ಸಾಕ್ಷಿ. 
  ತೀವ್ರ ಅನಾರೋಗ್ಯದ ಕಾರಣ 2013ರ ಡಿಸೆಂಬರ್ 23ರಂದು ರಷ್ಯಾದ ಇಜೆವೆಸ್ಕ್‌ದಲ್ಲಿ ಚಿರನಿದ್ರೆಗೆ ಜಾರಿದರು.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ