ಶನಿವಾರ, ನವೆಂಬರ್ 7, 2015

ಕಪ್ಪುಪೆಟ್ಟಿಗೆ...

ಕಪ್ಪು ಪೆಟ್ಟಿಗೆ(ಬ್ಲ್ಯಾಕ್ ಬಾಕ್ಸ್’) ಉಪಕರವನ್ನು ಸಂಶೋಧನೆ ಮಾಡಿದವರು ಆಸ್ಟ್ರೇಲಿಯಾದ ಡೇವಿಡ್ ವಾರೆನ್. 1953ರಲ್ಲಿ ವಿಶ್ವದ ಮೊತ್ತ ಮೊದಲ ವಾಣಿಜ್ಯ ಉದ್ದೇಶಿತ ಜೆಟ್ ‘ಕಾಮೆಟ್’ ವಿಮಾನ ಅಪಘಾತಕ್ಕೀಡಾದ ಸಂದರ್ಭದಲ್ಲಿ ವಾರೆನ್‌ ಮನದಲ್ಲಿ ಬ್ಲ್ಯಾಕ್ ಬಾಕ್ಸ್ ಸಂಶೋಧನೆ ಬಗ್ಗೆ ಯೋಚನೆ ಹೊಳೆಯಿತು. ತನಿಖೆಯ ಹಂತದಲ್ಲಿ ಇದರ ಧ್ವನಿ ಮತ್ತು ಇತರ ಮಹತ್ವದ ಅಂಶಗಳ ದಾಖಲಾತಿ ಇದ್ದರೆ ನಿಖರ ತನಿಖೆ ನಡೆಸಲು ಸಾಧ್ಯ ಎಂಬುದನ್ನು ಮನಗಂಡ ಅವರು ಉಪಕರಣವೊಂದರ ಅಭಿವೃದ್ಧಿಗೆ ಮುಂದಾದರು .  1956ರಲ್ಲಿ ಪ್ರಯೋಗಾರ್ಥ ಕಪ್ಪು ಪೆಟ್ಟಿಗೆಯನ್ನು ರಚಿಸಿದರು. ನಂತರ ಇದನ್ನು ಆಸ್ಟ್ರೇಲಿಯಾ ಸರಕಾರ ಕಡ್ಡಾಯಗೊಳಿಸಿತು.
    ವಿಶ್ವ ವಿಮಾನಯಾನದ ಸುರಕ್ಷತೆಗೆ ಡೇವಿಡ್ ವಾರೆನ್ ಸಂಶೋಧನೆ ವಿಶ್ವಕ್ಕೆ ನೀಡಿದ ಪ್ರಮುಖ ಕೊಡುಗೆಯಾಗಿದೆ.ಬ್ಲ್ಯಾಕ್ ಬಾಕ್ಸ್ (ಕಪ್ಪು ಪೆಟ್ಟಿಗೆ) ಉಪಕರಣದಲ್ಲಿ ಎರಡು ಪ್ರಮುಖ ಭಾಗಗಳಿವೆ. ಒಂದು ‘ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್’. ಇನ್ನೊಂದು ‘ಫ್ಲೈಟ್ ಡಾಟಾ ರೆಕಾರ್ಡರ್’. ಇದರ ಪೈಕಿ ಡಿಜಿಟಲ್ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಎಂಬ ಉಪಕರಣ ಡಿಜಿಟಲ್ ಆಗಿ ಕಾಕ್‌ಪಿಟ್‌ನೊಳಗೆ ನಡೆಸಿದ ಎಲ್ಲ ಸಂಭಾಷಣೆಗಳನ್ನೂ ದಾಖಲಿಸುತ್ತದೆ. ಅವಘಢಗಳ ಸಂದರ್ಭ ಹಾಗೂ ಮೊದಲು ಪೈಲಟ್‌ಗಳ ಧ್ವನಿ ರೆಕಾರ್ಡ್ ಆಗಿರುತ್ತದೆ. ಹಾಗಾಗಿ ಇದು ಯಾವುದೇ ವಿಮಾನ ದುರಂತವಾದರೂ, ಅದು ಹೇಗಾಯಿತೆಂದು ಮಾಹಿತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಉಪಕರಣವಾಗಿ ಮಹತ್ವ ಪಡೆದಿದೆ.
    ಈ ಬ್ಲ್ಯಾಕ್ ಬಾಕ್ಸಿನ ಮತ್ತೊಂದು ಭಾಗವಾದ ಫ್ಲೈಟ್ ಡಾಟಾ ರೆಕಾರ್ಡರ್ ಕೂಡಾ ಮಹತ್ವವಾಗಿದ್ದು, ಇದು ವಿಮಾನದ ವೇಗೋತ್ಕರ್ಷ, ಎಂಜಿನ್, ಗಾಳಿಯ ವೇಗ, ವಿಮಾನವಿದ್ದ ಎತ್ತರ, ರಾಡಾರ್ ಇರುವ ಸ್ಥಳ ಸೇರಿದಂತೆ ಹಲವು ಮಾಹಿತಿಗಳನ್ನು ನೀಡುತ್ತದೆ. ಇವೆಲ್ಲ ಮಾಹಿತಿಗಳ ಮೂಲಕ ವಿಮಾನ ದುರಂತಕ್ಕೆ ಕಾರಣವನ್ನು ತಜ್ಞರು ಪತ್ತೆ ಮಾಡುತ್ತಾರೆ. ಇದರ ಹೊರಕವಚ ಪ್ರತಿಫಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊರಕವಚ ಸ್ಟೀಲ್‌‌ನಿಂದ ಆವೃತವಾಗಿದೆ. ಈ ಪೆಟ್ಟಿಗೆ ಯಾವುದೇ ಉಷ್ಣತೆಯನ್ನೂ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ನೀರಿನಲ್ಲಿ ಮುಳುಗಿದರೂ ತನ್ನೊಳಗೆ ಹೊಂದಿರುವ ಯಾವುದೇ ಮಾಹಿತಿಗಳನ್ನು ಕಳೆದುಕೊಳ್ಳುವುದಿಲ್ಲ ಹಾಗೂ ನಾಶವಾಗುವುದಿಲ್ಲ. ಯಾವುದೇ ವಿಮಾನ ದುರಂತದ ಸಂದರ್ಭದಲ್ಲಿಯೂ ಅತೀ ಕಡಿಮೆ ಹಾನಿಯಾಗುವ ಪ್ರದೇಶ ಎಂದರೆ ವಿಮಾನದ ಬಾಲವಾಗಿದೆ. ಆದ್ದರಿಂದ ಈ ಉಪಕರಣವನ್ನು ಬಾಲದ ಸಮೀಪ ಅತ್ಯಂತ ಭದ್ರವಾಗಿ ಆಳವಡಿಸಲಾಗುತ್ತದೆ. ಬಹಳಷ್ಟು ಅವಘಡಗಳಲ್ಲಿ ಕಪ್ಪು ಪೆಟ್ಟಿಗೆಯ ಹೊರಭಾಗವೆಲ್ಲ ಜರ್ಜರಿತವಾಗಿ ಮೆಮೋರಿ ಯುನಿಟ್ ಮಾತ್ರ ಲಭ್ಯವಾಗುತ್ತದೆ.
    20 ಸಾವಿರ ಅಡಿ ಸಮುದ್ರದ ತಳಭಾಗದಲ್ಲೂ 24 ಗಂಟೆಯವರೆಗೆ ಸುಸ್ಥಿತಿಯಲ್ಲಿರುವಂತೆ `ಕಪ್ಪು ಪೆಟ್ಟಿಗೆ’ ತಯಾರಿಸಲಾಗುತ್ತದೆ. ಕಪ್ಪುಪೆಟ್ಟಿಗೆಯ Recorderನ್ನು 11000 ಡಿಗ್ರಿ ಸೆಲ್ಸಿಯಸ್ ಇರುವ ಬೆಂಕಿಯಲ್ಲಿ ಹಲವು ಗಂಟೆಗಳ ಕಾಲ ಇಟ್ಟು ಮತ್ತು 2600 ಡಿಗ್ರಿ ಸೆಲ್ಸಿಯಸ್ ಉಗಿಯಲ್ಲಿ 10 ಗಂಟೆಗಳ ಕಾಲ ಇಟ್ಟು ಒರೆ ಹಚ್ಚಿ ನೋಡಲಾಗಿರುತ್ತದೆ. ಅಲ್ಲದೇ ಇದು -55 ಡಿಗ್ರಿ ಸೆಲ್ಸಿಯಸ್ ನಿಂದ +70 ಡಿಗ್ರಿ ತಾಪಮಾನದಲ್ಲೂ ಕೆಲಸ ಮಾಡಲು ಯೋಗ್ಯವಾಗಿರುತ್ತದೆ.
    ವಿಮಾನದ ಎಂಜಿನಿಗೆ ಜೋಡಿಸಲಾದ ಜನರೇಟರ್ನಿಂದ ಕಪ್ಪು ಪೆಟ್ಟಿಗೆ ಚಾರ್ಜ್ ಆಗುತ್ತದೆ. ವಿಮಾನದ ಗಾತ್ರ ಆಧರಿಸಿ ವೋಲ್ಟೇಜ್ ನಿರ್ಧಾರ. ಅಪಘಾತ ಸಂಭವಿಸುವುದಕ್ಕೆ ಮೊದಲೇ ವಿಮಾನದಲ್ಲಿ ವಿದ್ಯುತ್ ಸೌಲಭ್ಯ ನಿಂತು ಹೋಗಿದ್ದರೆ, ಕೊನೆಕ್ಷಣದ ರೆಕಾರ್ಡಿಂಗ್ ಇಲ್ಲವಾಗುತ್ತದೆ.ವಿಮಾನ ಅಪಘಾತ ಸಂಭವಿಸಿದ ನಂತರ ಕಪ್ಪು ಪೆಟ್ಟಿಗೆ ಸಿಕ್ಕರೆ ವಿಮಾನ ಅಪಘಾತಕ್ಕೆ ಕಾರಣಗಳನ್ನು ಪತ್ತೆಹಚ್ಚಬಹುದು.
   ಕಪ್ಪು ಪೆಟ್ಟಿಗೆ ಉಪಕರಣಕ್ಕೆ ಹೆಸರು ಕಪ್ಪುಪೆಟ್ಟಿಗೆ ಎಂದಾದರೂ ಇದು ಕಪ್ಪು ಬಣ್ಣದ ಪೆಟ್ಟಿಗೆಯಲ್ಲ. ಕಡು ಕಿತ್ತಳೆ ಕೇಸರಿ ಬಣ್ಣವನ್ನು ಹೊಂದಿರುತ್ತದೆ.ಕಿತ್ತಳೆ ಬಣ್ಣದ ಈ ಪೆಟ್ಟಿಗೆಗೆ ಕಪ್ಪು ಪೆಟ್ಟಿಗೆ ಎಂಬ ಹೆಸರಿಡಲು ಕಾರಣವಾದರೂ ಏನು ಎಂಬ ಸಂಶಯ ಹುಟ್ಟದೇ ಇರಲಾರದು.ವಾಸ್ತವದಲ್ಲಿ ಇದು ಕಿತ್ತಳೆ ಬಣ್ಣ ಹಾಗೂ ಹೊಳೆಯುವ ಬಿಳಿ ಪಟ್ಟಿ ಹೊಂದಿರುತ್ತದೆ. ಅವಶೇಷಗಳಲ್ಲಿ ಸುಲಭವಾಗಿ ಗುರುತಿಗೆ ಸಿಗಲಿ ಎಂಬ ಉದ್ದೇಶದಿಂದ ಈ ಬಣ್ಣ, ವಿಮಾನಾಪಘಾತವಾದಾಗ ಹೊರಹೊಮ್ಮುವ ಕಪ್ಪುಹೊಗೆಗೆ ಸಾಂಕೇತಿಕವಾಗಿ ಈ ಹೆಸರು ಬಂದಿದೆ ಎಂಬುದು ಕೆಲವರ ಅಭಿಪ್ರಾಯ, ದುರಂತವಾದ ಸಂದರ್ಭದಲ್ಲಿ ಈ ಪೆಟ್ಟಿಗೆಯ ಮೂಲಕ ಮಾಹಿತಿ ಪಡೆಯುವ ಕಾರಣ ಇದನ್ನು 'ಬ್ಲ್ಯಾಕ್ ಬಾಕ್ಸ್' ಎನ್ನುತ್ತಾರೆ.
    ಹಾಗಾಗಿ ಪೆಟ್ಟಿಗೆಯ ಬಣ್ಣ ಯಾವುದಾದರೂ, ದುರಂತದ ರಹಸ್ಯವನ್ನು ಅಡಗಿಸಿಟ್ಟ ಪೆಟ್ಟಿಗೆಯಾಗಿರುವ ಮೂಲಕ ಅದು ತನ್ನ ನಿಜ ಬಣ್ಣಕ್ಕಿಂತಲೂ ಭಾವನಾತ್ಮಕವಾಗಿ 'ಕಪ್ಪು ಪೆಟ್ಟಿಗೆಯಾಗಿಯೇ ಕಾಡುತ್ತದೆ.
     -ಹನುಮಂತ.ಮ.ದೇಶಕುಲಕರ್ಣಿ.
ಭೋಗೇನಾಗರಕೊಪ್ಪ-581196

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ