ಶನಿವಾರ, ನವೆಂಬರ್ 7, 2015

ಜನಪದರ ದೀಪಾವಳಿ

ದೀಪಾವಳಿ ಹಬ್ಬಗಳ ರಾಜ! ಹಬ್ಬದ ಗತ್ತು -ಗೈರತ್ತು ಬದಲಾಗಿರಬಹುದು ಆದರೆ ಬದಲಾವಣೆಯಲ್ಲಿಯೇ ಹಳ್ಳಿಗಳ ಸಂಸ್ಕ್ರತಿಯ ದೊಡ್ಡ ಹಬ್ಬ ಯಾವುತ್ತಲೂ ಅದ್ದೂರಿಯಾಗಿಯೇ ಆಚರಿಸಲ್ಪಡುತ್ತದೆಯೆನ್ನುವುದು ವಿಶೇಷ! ಜನಪದರು ಕೃಷಿಯನ್ನೇ ನೆಚ್ಚಿಕೊಂಡು ಬೆಳೆದು ದೇಶವನ್ನೇ ಸಾಕಿ ಸಲುಹಿದವರು.ಅವರು ವಿಶಿಷ್ಟ ರೀತಿಯಲ್ಲಿ ಆಚರಿಸುವ ಈ ಹಬ್ಬಕ್ಕೆ "ಹಟ್ಟಿಯ ಹಬ್ಬ" ವೆಂದೇ ಹೆಸರು.ಹೊಸದಾಗಿ ಅಳಿಯ-ಮಗಳು ಮಾವನ ಮನೆಯಲ್ಲಿ ಪ್ರಥಮ ದೀಪಾವಳಿ ಆಚರಿಸುತ್ತಾನೆ.

      ಮೂರು ದಿನಗಳಾಗಿ ಹಬ್ಬವನ್ನು ಆಚರಿಸುತ್ತಾರೆ.ಮೊದಲ ದಿನ ನರಕ ಚತುದ೯ಶಿಯಂದು ನೀರು ತುಂಬುವ ಹಬ್ಬವೆಂದು ಆಚರಿಸುತ್ತಾರೆ.ಎರಡನೆಯ ದಿನ ಅಮವಾಸ್ಯೆಯಂದು ಲಕ್ಷ್ಮೀದೇವಿ ಪೂಜೆಯೆಂದು ಅಂಗಡಿ,ತಮ್ಮ ವೃತ್ತಿ ಸಾಧನಗಳು,ವಾಹನಗಳನ್ನು ಪೂಜಿಸುತ್ತಾರೆ.ಮೂರನೆಯ ದಿನ ಬಲಿಪಾಡ್ಯಮಿಯ಼ಂದು ಬಹು ಸಡಗರ ದಿಂದ ಹಟ್ಟಿಯನ್ನು(ದನಕರು ಕಟ್ಟುವ ಕೊಟ್ಟಿಗೆ) ಸಗಣಿಯಿಂದ ಸಾರಿಸಿ ರಂಗವಲ್ಲಿ ಹಾಕಿ ಜಾನುವಾರುಗಳನ್ನು ಸಿಂಗರಿಸುತ್ತಾರೆ.
     ಆಣಿಪಿಣಿಯಾಟ:ಹಬ್ಬ ಒಂದು ವಾರ ಇರುವ ಮುಂಚಿತವಾಗಿ ಊರಿನಲ್ಲಿರುವ ಯುವ ರೈತರು ,ಯುವ ಕುಸ್ತಿ ಪಟುಗಳು ಗುಂಪುಗೂಡಿ ಹೊಲದಲ್ಲಿ ಬೆಳೆದ ಹುಲ್ಲು ಕಡ್ಡಿ  ಸೊಪ್ಪೆಗಳಿಂದ ಗೂಡಿನಾಕಾರವನ್ನು ಮಾಡಿ,ಕಾಡು ಹೂವುಗಳಿಂದ ಸಿಂಗರಿಸಿ ಅದರೊಳಗೊಂದು ಮಣ್ಣಿನ ಹಣತೆ ಇಟ್ಟು ಜಾನುವಾರು ಇದ್ದವರ ಮನೆಗೆ ರಾತ್ರಿ ಸಮಯದಲ್ಲಿ ಆಣಿಪಿಣಿಯ ತಂಡದವರು ದೀಪದ ಗೂಡನ್ನು ತೆಗೆದುಕೊಂಡು ಹಟ್ಟಿಗೆ ಹೋಗಿ ಒಂದು ಜೋಳದ ದಂಟಿನಿಂದ ದೀಪಕ್ಕೆ ಮುಟ್ಟಿಸಿ ,ಮನೆಯವರಿಂದ ಊದುಬತ್ತಿ ಇಸಿದುಕೊಂಡು ಬೆಳಗುತ್ತಾರೆ.ಮನೆಯವರಿಂದ ಹಣತೆಗೆ ಎಣ್ಣೆಯನ್ನು ಹಾಕಿಸಿಕೊಂಡು ಪುಡಿಗಾಸನ್ನು ಪಡೆದು ಬೇರೆ ಮನೆಗೆ ಹೋಗುತ್ತಾರೆ.ಓಣಿಯಲ್ಲಿ
ಆಣಿಪಿಣಿ ಜೋಳಿಗ್ಯೋ|
ಮನ್ಯಾಗ ಮೂರು ಹೋಳಿಗ್ಯೋ||
ಎಂದು ಕೂಗುತ್ತ ಊರನ್ನು ಸುತ್ತು ಹಾಕಿ ಊರಿನ ಹನುಮಂತ ದೇವರ ಗುಡಿ ಅಥವಾ ಗರಡಿಮನೆಯಲ್ಲಿ ದೀಪದ ಗೂಡನ್ನಿಟ್ಟು ದೀಪ ಕಾಯುತ್ತಾರೆ.ಬಂದ ಪುಡಿಗಾಸಿನಿಂದ ಚುರುಮುರಿ-ಖಾರ ಖರೀದಿಸಿ ಪನಿವಾರ ಮಾಡಿ ಹಂಚಿ ತಿನ್ನುತ್ತಾರೆ.
       ಮೊದಲ ದಿನ ನೀರು ತುಂಬಿ ಮನೆಮಂದಿಯಲ್ಲ ಅಭ್ಯಂಗಸ್ನಾನ ಮಾಡುತ್ತಾರೆ.ಇಡೀ ಮನೆಯನ್ನು ಸಗಣಿಯಿಂದ ಸಾರಿಸಿ ಮಡಿ ಮಾಡುತ್ತಾರೆ..ಎರಡನೇಯ ದಿನ ಲಕ್ಷ್ಮಿ ಪೂಜೆಯೆಂದು ವಾಹನ,ಅಂಗಡಿ,ವೃತ್ತಿ ಸಾಧನಗಳ ಪೂಜಿಸಿ ಜೊತೆಗೆ ಖಿದಿ೯ಯನ್ನು ಹೊಸ ಬುಕ್ಕನಲ್ಲಿ ಬರೆಯುವುದು ಆರಂಭಿಸುತ್ತಾರೆ.
       ಬಲಿಪಾಡ್ಯಮಿ ದಿನ ನಸುಕಿನಲ್ಲಿಯೇ ಎದ್ದು ಮನೆಯ ಬಾಗಿಲಿನ ಮುಂದೆ  ಸಗಣಿಯಿಂದ ಮಾಡಿದ ಪಾಂಡವರನ್ನು  ಇಟ್ಟು ಹೂವುಗಳಿಂದ ಅಲ಼ಂಕರಿಸಿ ಮೇಲೊಂದು ಉತ್ತರಾಣಿ ಕಡ್ಡಿಯನ್ನು ಸಿಕ್ಕಿಸುತ್ತಾರೆ.ಮನೆಯಲ್ಲಿ ದನದ ಹೆಜ್ಜೆಯ ಗುರುತನ್ನು  ಮೂಡಿಸುತ್ತಾರೆ.ಜಾನುವಾರುಗಳನ್ನು ಶುಚಿಯಾಗಿ ತೊಳೆದು ಕೊಂಬುಗಳಿಗೆ ಬಣ್ಣವನ್ನು ಹಚ್ಚಿ ಹೊಸ ದಂಡೀಯನ್ನು ,ಹಗ್ಗವನ್ನು,ಗೆಜ್ಜೆಸರವನ್ನು,ಕೊರಳಿಗೆ ಶಂಖವನ್ನು ಕಟ್ಟಿ ಹಣೆಗೆ ಹಣೆಪಟ್ಟಿ ಕನ್ನಡಿ ಹಾಕಿ ಹೂಮಾಲೆಯಿಂದ ಸಿಂಗರಿಸಿ,ಕಿವಿ ಕೋಡುಗಳಿಗೆ ಚಕ್ಕಲಿ-ಕೋಡುಬಳೆ ಹಾಕುತ್ತಾರೆ.ಅದನ್ನು ದೇವರ ದರುಶನಕ್ಕೆ ಬಂದಾಗ ಆಣಿಪಿಣಿ ಹುಡುಗರು ಬಿಚ್ಚಿ ತಿನ್ನುತ್ತಾರೆ. ನೆದರು (ಕಣ್ಣು ಬಿಡಬಾರದು) ಆಗಬಾರದೆಂದು ಕರಿದಾರ ಕಟ್ಟಿರುತ್ತಾರೆ.ನಂತರ ಹಟ್ಟಿಯಲ್ಲಿಯ ಲಕ್ಷ್ಮಿ ಕಾಯಿಯನ್ನು (ತೆಂಗಿನಕಾಯಿ)ಪೂಜಿಸಿ ದನಗಳಿಗೆ ಸುಗ್ರಾಸ ಭೋಜನ ನೀಡುತ್ತಾರೆ.ತದನ಼ಂತರ ಊರಿನ ಹನುಮಂತ ದೇವರ ದರುಶನಕ್ಕೆ ಕರೆದೊಯ್ದು ಅಂಗಾರ ಹಚ್ಚಿ ಮನೆಯ ಹಿತ್ತಲಲ್ಲಿ ತಂದು ಕಟ್ಟುತ್ತಾರೆ.

      ಏನಾದರೂ ಸ್ಪಧೆ೯ ಇದ್ದರೆ ಭಾಗವಹಿಸುತ್ತಾರೆ. ಸಂಜೆಯಾಗುತ್ತಲೇ ಹೊರಗಿರುವ ಜಾನುವಾರುಗಳನ್ನು ಹಟ್ಟಿಗೆ ತರುವ ಮುನ್ನ ದಾರಿಯಲ್ಲಿ ಉದ್ದಕ್ಕೆ ಹುಲ್ಲು ಹಾಸಿ ಬೆಂಕಿ ಹಾಕಿ ಅದರಲ್ಲಿ ದಾಟಿಸಿ ನೀರಿನಲ್ಲಿ ಎದ್ದಿದ ಕಾಜಿರಗಿ ಗಿಡದ ಟೊಂಗೆಯಿಂದ ಅವುಗಳ ಬೆನ್ನಿನ ಚಪ್ಪರಿಸಿ ಹಟ್ಟಿ ಪ್ರವೇಶಿಸುತ್ತಾರೆ,ಇದಕ್ಕೆ "ಕರಿ ಹರಿಯುವುದು" ಎನ್ನುತ್ತಾರೆ.ನಂತರ ಮನೆಯ ಅಂಗಳದಲ್ಲಿ ಹಣತೆ ಹಚ್ಚುವುದು,ಪಟಾಕಿ ಹಾರಿಸುತ್ತಾರೆ.ಗರಡಿಮನೆಯಲ್ಲಿ ಮಲ್ಲಗಂಬವನ್ನು ನರಸಿಂಹವತಾರವೆಂದು ನೆನೆದು ಪೂಜಿಸಿ ಗಧೆ,ಲೋಡು,ಸಾಂಗ್ರಾಣಿ ಕಲ್ಲು ಪೂಜಿಸುತ್ತಾರೆ.ಚೆಂಡು ಹೂವುಗಳ ಮಾಲೆ ರಾರಾಜಿಸುತ್ತವೆ.ಹೀಗೆ ಸಂಭ್ರಮ಼ ದಿಂದ ಹಬ್ಬ ಮುಕ್ತಾಯಗೊಳ್ಳುತ್ತದೆ .
     -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ